ಕೊಚ್ಚೆ ಗುಂಡಿಗೆ ಕುಡಿಯುವ ನೀರಿನ ಪೈಪ್ ಲೈನ್ ಸಂಪರ್ಕಃ ರೋಗ ಉಲ್ಬಣ
ಚಂದ್ರವಳ್ಳಿ ನ್ಯೂಸ್ ಹಿರಿಯೂರು
ಡೆಂಘೀ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಗ್ರಾಮ ಪಂಚಾಯಿತಿಯವರು ಕೊಚ್ಚೆ ಗುಂಡಿಗೆ ಕುಡಿಯುವ ನೀರಿನ ಪೈಪ್ ಲೈನ್ ಸಂಪರ್ಕ ಕಲ್ಪಿಸುವ ಮೂಲಕ ಮತ್ತಷ್ಟು ಸಾಂಕ್ರಾಮಿಕ ರೋಗಗಳು ಹರಡಲು ದಾರಿ ಮಾಡಿಕೊಟ್ಟಿದ್ದಾರೆ.
ಹಿರಿಯೂರು ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ಕೊಚ್ಚೆ ಗುಂಡಿಯಲ್ಲಿ ಕುಡಿಯುವ ನೀರಿಗೆ ಪೈಪ್ ಲೈನ್ ಅಳವಡಿಸಿದ್ದು ಒಂದು ವರ್ಷದಿಂದ ಗ್ರಾಮಸ್ಥರು ಗ್ರಾಮ ಪಂಚಾಯತಿ ದೂರು ನೀಡಿ ಕುಡಿಯುವ ನೀರಿನ ಪೈಪ್ ಲೈನ್ ಸಂರ್ಪಕವನ್ನು ಬೇರೆ ಕಡೆಯಿಂದ ನೀಡುವಂತೆ ಕೋರಿದ್ದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜೊತೆಯಲ್ಲಿ ಗ್ರಾಮದಲ್ಲಿ ಯಾವುದೇ ಸ್ವಚ್ಛತೆ ಕಾರ್ಯಕ್ರಮವನ್ನು ನೆಪಕ್ಕೆ ಹಮ್ಮಿಕೊಳ್ಳಲಾಗುತ್ತಿದ್ದು ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ.
ಇಡೀ ರಂಗನಾಥಪುರ ಗ್ರಾಮಕ್ಕೆ ಕುಡಿಯುವ ನೀರಿನ ಪೂರೈಕೆ ಚರಂಡಿಯಲ್ಲಿ ಇರುವುದರಿಂದ ಪೈಪ್ ಲೈನ್ ನಲ್ಲಿ ಸೊರಿಕೆ ಆದರೆ ಇಡೀ ಗ್ರಾಮಕ್ಕೆ ಗ್ರಾಮವೇ ಸಾಂಕ್ರಾಮಿಕ ರೋಗದಿಂದ ನರಳಬೇಕಾಗುತ್ತದೆ. ನೀರು ಸೊರಿಕೆಯಾಗಿ ಕೊಳಚೆ ನೀರು ಕುಡಿಯುವ ನೀರಿಗೆ ಸೇರಿ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇರುವುದರಿಂದ ಕೂಡಲೇ ಸರಿಪಡಿಸಬೇಕು ಎಂದು ಸಂತ್ರಸ್ತ ಗ್ರಾಮದ ನಿವಾಸಿಗಳು ಗ್ರಾಪಂ, ತಾಲೂಕು ಪಂಚಾಯಿತಿ ಇಒಗಳಲ್ಲಿ ಆಗ್ರಹಿಸಿದ್ದಾರೆ.