ರಕ್ತದಾನ ಮಾಡಿ ಜೀವ ಉಳಿಸಿಃ ಡಾ.ರೂಪ
ಚಂದ್ರವಳ್ಳಿ ನ್ಯೂಸ್ ಹಿರಿಯೂರು
ಕೋವಿಡ್-೧೯ ಸಮಸ್ಯೆಯ ಸುಳಿಯಲ್ಲಿ ರಕ್ತ ಸಂಗ್ರಹಕ್ಕೆ ಕೊರತೆ ಎದುರಾಗಿದೆ. ಶಾಲಾ ಕಾಲೇಜುಗಳು ಅನೇಕ ವ್ಯವಹಾರ ಕೇಂದ್ರಗಳ ರಜಾ ಕಾರಣದಿಂದ ರಕ್ತ ಸಂಗ್ರಹದ ಕೊರತೆ ಉಂಟಾಗಿದ್ದು ರಕ್ತದಾನಿಗಳು ಮುಂದೆ ಬಂದು ರಕ್ತದಾನ ಮಾಡಬೇಕು ಎಂದು ಜಿಲ್ಲಾಸ್ಪತ್ರೆಯ ರಕ್ತ ನಿಧಿ ಬ್ಯಾಂಕಿನ ವೈದ್ಯಾಧಿಕಾರಿ ಡಾ.ರೂಪ ಹೇಳಿದರು.
ಹಿರಿಯೂರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತ ನಿಧಿ ಕೇಂದ್ರ, ಜಿಲ್ಲಾಸ್ಪತ್ರೆ ಚಿತ್ರದುರ್ಗ, ಸಾರ್ವಜನಿಕ ಆಸ್ಪತ್ರೆ ಹಿರಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಅಪಘಾತ, ಹೆರಿಗೆ ಮತ್ತಿತರ ತುರ್ತು ಸಂದರ್ಭದಲ್ಲಿ ರಕ್ತ ಅಗತ್ಯ ಹೆಚ್ಚಿರುತ್ತದೆ. ಆದ್ದರಿಂದ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ರೆಡ್ ಕ್ರಾಸ್ ಛೇರ್ಮನ್ ಹೆಚ್.ಎಸ್.ಸುಂದರರಾಜ್ ಮಾತನಾಡಿ ಹಿಂದೆ ಹಲವು ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದರೂ ಈ ಶಿಬಿರ ಅರ್ಥಪೂರ್ಣವಾದದ್ದು. ಸಂಪೂರ್ಣ ಲಾಕ್ ಡೌನ್ ಇದ್ದರೂ ರೆಡ್ಕ್ರಾಸ್ ರಕ್ತದಾನಿಗಳ ಸತತ ಸಂಪರ್ಕದಿಂದ ಶಿಬಿರ ಆಯೋಜಿಸಿ ರಕ್ತ ಸಂಗ್ರಹಣೆ ಮಾಡಲಾಗಿದೆ ಎಂದು ಹೇಳಿದರು.
ಡಾ.ಮೋಹನ್ ಕುಮಾರ್ ಮಾತನಾಡಿ ಜನ ಸಾಮಾನ್ಯರು ಹೊರ ಬರಲಾಗದ ಇಂತಹ ಸಂದರ್ಭದಲ್ಲಿ ರೆಡ್ ಕ್ರಾಸ್ ಶಿಬಿರ ಆಯೋಜಿಸಿ ರಕ್ತ ಸಂಗ್ರಹಣೆಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮೋಹನ್ ಕುಮಾರ್ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಕೋಆರ್ಡಿನೇಟರ್ ಮುರುಳೀಧರ, ಸಿಬ್ಬಂದಿಗಳಾದ ರೂಪ, ರೇಷ್ಮಾ, ರೆಡ್ ಕ್ರಾಸ್ ಪದಾಧಿಕಾರಿಗಳಾದ ಎ.ರಾಘವೇಂದ್ರ, ಕೇಶವಮೂರ್ತಿ, ಸಣ್ಣಭೀಮಣ್ಣ, ಎಂ.ಎಸ್.ರಾಘವೇಂದ್ರ, ಪಿ.ಆರ್.ಸತೀಶ್ಬಾಬು, ರವಿಕುಮಾರ್, ಎ.ನಾಗೇಶ್, ಟಿ.ಎಸ್.ಬಸವರಾಜ್, ಚೇತನ್ಬಾಬು, ರೋಟರಿ ಅಧ್ಯಕ್ಷ ಹೆಚ್.ಎಸ್.ಪ್ರಶಾಂತ್, ಕಾರ್ಯದರ್ಶಿ ಡಿ.ನಾಗರಾಜ್ ಮತ್ತಿತರರು ಇದ್ದರು.