ಆಗಲಿ ಮನಸುಗಳ ಕ್ರಾಂತಿ, ಭಾರತೀಯತೆ – ಮಾನವೀಯತೆಯ ಕ್ರಾಂತಿ, ಯೋಚಿಸೋಣ – ಮತ್ತೆ ಮತ್ತೆ, ಸರಿ ತಪ್ಪುಗಳ ವಿಮರ್ಶೆಗೆ ಒಳಪಡೋಣ…

ಆಗಲಿ ಮನಸುಗಳ ಕ್ರಾಂತಿ, ಭಾರತೀಯತೆ – ಮಾನವೀಯತೆಯ ಕ್ರಾಂತಿ, ಯೋಚಿಸೋಣ – ಮತ್ತೆ ಮತ್ತೆ,
ಸರಿ ತಪ್ಪುಗಳ ವಿಮರ್ಶೆಗೆ ಒಳಪಡೋಣ…

ಬೆಂಗಳೂರು:

ಸಂಕ್ರಾಂತಿ,…….

ಆಗಲಿ ಮನಸುಗಳ ಕ್ರಾಂತಿ,
ಭಾರತೀಯತೆ – ಮಾನವೀಯತೆಯ ಕ್ರಾಂತಿ,
ತೊಲಗಲಿ ಮೌಢ್ಯಗಳ ಭ್ರಾಂತಿ,
ತುಡಿಯಲಿ ಸಹಜೀವಿಗಳೆಡಗೆ ಶಾಂತಿ,
ಮುಗಿಲೆತ್ತರಕ್ಕೇರಲಿ ಚಿಂತನೆಯ ಕ್ರಾಂತಿ,
ಪಾತಾಳಕ್ಕಿಳಿಯಲಿ ಕಲ್ಮಶದ ಭ್ರಾಂತಿ.

ಹಬ್ಬದ ಸಂಭ್ರಮಗಳು ನಮ್ಮ ಮೈ ಮನಸ್ಸಿಗೆ ವಿಶ್ರಾಂತಿ ನೀಡಲಿ,
ನಮ್ಮ ಆತ್ಮಾವಲೋಕನಕ್ಕೆ ಸಮಯಾವಕಾಶ ಕಲ್ಪಿಸಲಿ,

ಯೋಚಿಸೋಣ – ಮತ್ತೆ ಮತ್ತೆ,
ಸರಿ ತಪ್ಪುಗಳ ವಿಮರ್ಶೆಗೆ ಒಳಪಡೋಣ,
ಇತಿಹಾಸದ ಬೆಳಕಲ್ಲಿ ವರ್ತಮಾನದ ಕತ್ತಲನ್ನು ಓಡಿಸೋಣ,
ನಮ್ಮ ನೋವು ಯಾತನೆಗಳನ್ನು ಕಡಿಮೆ ಮಾಡಿಕೊಳ್ಳೋಣ,
ನಮ್ಮ ಕಷ್ಟಗಳನ್ನು ಎದುರಿಸುವ ಛಲ ಬೆಳೆಸಿಕೊಳ್ಳೋಣ,

ನಮ್ಮ ನಂಬಿಕೆ ಏನೇ ಇರಲಿ,
ನಿಯತ್ತು ಮಾತ್ರ ಸೃಷ್ಟಿಗೇ ಇರಲಿ,
ಏಕೆಂದರೆ ಗಾಳಿ ನೀರು ಆಹಾರ ಮಲಿನವಾಗುತ್ತಿದೆ,
ಇತ್ತೀಚಿನ ಅಧ್ಯಯನದ ವರದಿ ಪ್ರಕಾರ,
ವಾಯುಮಾಲಿನ್ಯದಿಂದ ಭಾರತದಲ್ಲಿ ವರ್ಷಕ್ಕೆ 12 ಲಕ್ಷಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ,
ನೀರಿನಿಂದ ಇನ್ನೆಷ್ಟು ಜನ ಸಾಯುತ್ತಿದ್ದಾರೋ,
ಕಲಬೆರಕೆ ಆಹಾರದಿಂದ ಮತ್ತೆಷ್ಟೋ ,
ಬಹುಶಃ ಯುದ್ದದಿಂದಲೂ ಇಷ್ಟು ಜನ ಸಾಯುವುದಿಲ್ಲವೆನೋ,

ಛೆ..ಇದೇನು ಹುಚ್ಚಾಟ …ಆಸ್ಪತ್ರೆ – ಪೋಲಿಸ್ ಸ್ಟೇಷನ್ ಗಳ ಹೆಚ್ಚಾಟ,

ಅಭಿವೃದ್ಧಿ ಎಂದರೆ ಇದೇನೇ,
ಆರೋಗ್ಯ ಮತ್ತು ವ್ಯಕ್ತಿತ್ವದ ವಿನಾಶವೇ,
ಬೇಡ, ಇದು ಬೇಡವೇ ಬೇಡ,
ಈ ಸಂಕ್ರಾಂತಿ – ಈ ಹಬ್ಬ ,
ಆಧುನಿಕ ಮನೋಭಾವದವರಿಗೆ ಮತ್ತೆ ಸೃಷ್ಟಿಯತ್ತ ಮುನ್ನಡೆಯುವ ಮನಸ್ಸಾಗಲಿ,
ಬದುಕು ಸುಖಮಯವಾಗಲಿ,
ನಮ್ಮ ನಡೆ – ಪ್ರಕೃತಿಯ ಕಡೆಗೆ ಸಾಗಲಿ.
ಆಗ ನೋಡಿ,
ನಮ್ಮ ಬದುಕು ಈ ಆಧುನಿಕತೆಯ ಒತ್ತಡ ಮೀರಿ ನೆಮ್ಮದಿಯ ತಾಣವಾಗುವುದು ಖಚಿತ.
**********
ಹಾಗಲ ಕಾಯಿ – ಬೇವಿನ ಸೊಪ್ಪು ತಿಂದರೂ ನಿಮ್ಮ ಮನಸ್ಸು ಶುದ್ದವಾಗಿದ್ದರೆ, ನಿಮ್ಮ ಮಾತು ಮತ್ತು ನಡವಳಿಕೆ ಒಳ್ಳೆಯದೇ ಆಗಿರುತ್ತದೆ.

ಎಳ್ಳು ಬೆಲ್ಲ ಕಬ್ಬು ತಿಂದರೂ,
ನಿಮ್ಮ ಮನಸ್ಸು ಕೊಳಕಾಗಿದ್ದರೆ, ಸಂಕ್ರಾಂತಿ ಹಬ್ಬದ ದಿನವೂ ನಿಮ್ಮಿಂದ ಒಳ್ಳೆಯ ಮಾತುಗಳು ಬರಲಾರವು. ಅಕಸ್ಮಾತ್ತಾಗಿ ಬಂದರೂ ಅದು ಕೃತಕವಾಗಿರುತ್ತದೆ ಮತ್ತು ಒಳಗಿನ ಅಸೂಯೆ ಗುಣಕ್ಕೆ ಮುಖವಾಡ ತೊಡಿಸಿದಂತಿರುತ್ತದೆ.

ಸಂಕ್ರಾಂತಿ ಹಬ್ಬದ ಜನಪ್ರಿಯ ನುಡಿ
“ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು” ಎಂಬುದು ದುಷ್ಟ ಮನಸ್ಸಿನ ಜನರಿಗೆ ಅವರ ವಿಕೃತಿಯನ್ನು ನೆನಪಿಸುವ ಸಾಂಕೇತಿಕ ಮಾತುಗಳು ಮಾತ್ರ. ಒಳ್ಳೆಯ ಮನಸ್ಸಿನವರಿಗೆ ಇದು ಅನ್ವಯಿಸುವುದೇ ಇಲ್ಲ.

ಏಕೆಂದರೆ ನಿಮ್ಮ ಆಲೋಚನೆಗಳ ಮೇಲೆ ನೀವು ನಿಯಂತ್ರಣ ಹೊಂದಿ ಸಮಷ್ಟಿ ಪ್ರಜ್ಞೆಯಿಂದ ಸದಾ ಕಾಲ ಯೋಚಿಸುವವರು ನೀವಾಗಿದ್ದರೆ – ನಾಗರಿಕ ಪ್ರಜ್ಞೆ ನಿಮ್ಮದಾಗಿದ್ದರೆ, ಸಂಕ್ರಾಂತಿ ಹಬ್ಬದ ಈ ಹಿತ ನುಡಿಗಳನ್ನು ನಿಮಗೆ ಹೇಳುವ ಅವಶ್ಯಕತೆ ಇರುವುದೇ ಇಲ್ಲ.

ಶತ ಶತಮಾನಗಳಿಂದ ಭಾರತೀಯ ಸಂಸ್ಕೃತಿಯಲ್ಲಿ ‌ಸಂಕ್ರಾತಿಯನ್ನು ವಿವಿಧ ಹೆಸರುಗಳಲ್ಲಿ ಸೂರ್ಯನ ಪಥ ಸಂಚಲನ ಬದಲಾಯಿಸುವ – ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು ವೈಜ್ಞಾನಿಕವಾಗಿ ಗಮನಿಸಿ ಆಚರಿಸಲಾಗುತ್ತದೆ . ಅದು ತುಂಬಾ ಸಂತೋಷದ ವಿಷಯ.

ಆದರೆ ,
ಅದೇ ಮಾತನ್ನು ಅನೇಕ ಭಾರತೀಯರ ಮನಸ್ಸು ಮತ್ತು ಮಾತುಗಳ ವಿಷಯದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗಿದೆ.

ಈ ಕ್ಷಣದಲ್ಲಿ ನಮ್ಮ ರಾಜಕೀಯ ನಾಯಕರು ಅಧಿಕಾರಿಗಳು ಎಲ್ಲಾ ಧರ್ಮಗಳ ಧಾರ್ಮಿಕ ನಾಯಕರು, ಕೆಲವು ಸಂಘಟನೆಗಳ ಸಂಸ್ಥೆಗಳ ವಿಕೃತ ಮನಸ್ಸಿನ ಸ್ವಯಂ ಘೋಷಿತ ನಾಯಕರು ಅಷ್ಟೇ ಏಕೆ, ಮಾಧ್ಯಮಗಳು ಮತ್ತು social media ದ ಕೆಲವು ಸಂಕುಚಿತ ಮನೋಭಾವದವರು ಎಷ್ಟೊಂದು ಅಸಹ್ಯಕರವಾಗಿ ವರ್ತಿಸುತ್ತಾರೆಂದರೆ ಅವರಿಗೆ ನೀವು ಜೇನನ್ನು ತಿನ್ನಿಸಿದರೂ ಅವರ ಮನಸ್ಸಿನಿಂದ ಒಳ್ಳೆಯ ಮಾತುಗಳು ಬರಲಾರದಷ್ಟು ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ನಾವು ಸೇವಿಸುವ ಆಹಾರಕ್ಕೂ ನಮ್ಮ ಮಾತು ಮನಸ್ಸು ಭಾವನೆಗಳಿಗೂ ಅಂತಹ ಗಾಢ ಸಂಬಂಧವೇನೂ ಇಲ್ಲ.
( ಸ್ವಲ್ಪ ಮಟ್ಟಿಗೆ ಇರಬಹುದೇನೋ ?) ನಾವು ಈ ಸಮಾಜವನ್ನು ಗ್ರಹಿಸಿರುವ ನಮ್ಮ ಅರಿವಿನಿಂದ ಮಾತ್ರ ನಾವು ಶುದ್ಧ ಮನಸ್ಥಿತಿಯವರಾಗಲು ಸಾಧ್ಯ.

ಅಂತಹ ಸಾಧ್ಯತೆ ಈ ಸಂಕ್ರಾಂತಿಯ ಸಂಧರ್ಭದಲ್ಲಿ ಆಗಲಿ, ಹಬ್ಬದ ಸಾಂಕೇತಿಕತೆ ಮತ್ತು ಕೃತಕತೆಯನ್ನು ಮೀರಿ ನಾವು ನೀವು ಇನ್ನು ಮುಂದೆಯಾದರು ಸಾಧ್ಯವಾದಷ್ಟೂ ನಮ್ಮಲ್ಲಿರಬಹುದಾದ ವಿಕೃತ ಮನಸ್ಥಿತಿಯನ್ನು ನಿಯಂತ್ರಿಸಿಕೊಂಡು ಮುಖವಾಡ ಕಳಚಿ ನಿಜ ಸಭ್ಯತೆಯನ್ನು ಆಚರಣೆಗೆ ತರುವ ಸಂಕಲ್ಪದೊಂದಿಗೆ ಈ ಮಣ್ಣಿನ ಋಣವನ್ನು ಸ್ವಲ್ಪವಾದರೂ ತೀರಿಸೋಣ ಎಂಬ ಆಶಯದೊಂದಿಗೆ………

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
***************

ಜ್ಞಾನ ಭಿಕ್ಷಾ ಪಾದಯಾತ್ರೆ ಮಾಹಿತಿ- ದಿನಾಂಕ-12/1/2021 ಮಂಗಳವಾರ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ವಿಜಯಪುರ ಜಿಲ್ಲೆಯ ನಿಡಗುಂದಿಯಿಂದ ಸುಮಾರು 5 ಕಿಲೋಮೀಟರ್ ದೂರದ ಆಲಮಟ್ಟಿ ಆಣೆಕಟ್ಟು ತಲುಪಿತು.

ಬೆಳಗ್ಗೆ ನಿಡಗುಂದಿ ಯುವಕರ ಸಂಘದ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವೇಕಾನಂದರ ಸಾಂಸ್ಕೃತಿಕ ವ್ಯಕ್ತಿತ್ವದ ಬಗ್ಗೆ ಮಾತನಾಡಿದೆನು.

ನಂತರ ಮಾರ್ಗಮಧ್ಯದಲ್ಲಿ ಕರ್ನಾಟಕದ ಗಾಂಧಿ ಎಂದು ಹೆಸರಾದ ಹರ್ಡೇಕರ ಮಂಜಪ್ಪ ಅವರ ಸ್ಮಾರಕ ಭವನಕ್ಕೆ ಭೇಟಿ ನೀಡಿ ಅಲ್ಲಿ ಒಂದಷ್ಟು ಸಮಯ ಕಳೆದೆನು.

ಆಮೇಲೆ ದೇಶದ ದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ ಆಲಮಟ್ಟಿ ಜಲಾಶಯದ ಸುಂದರ ಮತ್ತು ಮನಮೋಹಕ ದೃಶ್ಯ ನೋಡಿ ಮನಸ್ಸು ಆಹ್ಲಾದಕರವಾಯಿತು. ಸೇತುವೆಯ ಮೇಲೆ ರೈಲು ಹೋಗುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದೆನು.

ಇಂದು ಅನಿರೀಕ್ಷಿತ ಗೆಳೆಯರ ಆಗಮನ ಮತ್ತು ಚರ್ಚೆಗಳು ಹಾಗು ಆಲಮಟ್ಟಿಯ ಸೌಂದರ್ಯಕ್ಕೆ ಮನಸೋತು ಹೆಚ್ಚು ನಿಧಾನ ನಡಿಗೆಯಾದ್ದರಿಂದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ತಲುಪಲು ಸಾಧ್ಯವಾಗದೆ ಆಲಮಟ್ಟಿಯಲ್ಲಿಯೇ ವಾಸ್ತವ್ಯ ಮಾಡಬೇಕಾಯಿತು.

ದಿನಾಂಕ-13/1/2021 ಬುಧವಾರ 74 ನೆಯ ದಿನ ನಮ್ಮ ಕಾಲ್ನಡಿಗೆ ಬಿಜಾಪುರ ಜಿಲ್ಲೆಯ ಆಲಮಟ್ಟಿಯಿಂದ ಸುಮಾರು 30 ಕಿಲೋಮೀಟರ್ ದೂರದ ಬಾಗಲಕೋಟೆ ಜಿಲ್ಲೆಯ ಬಸವಣ್ಣನವರು ಐಕ್ಯವಾದ ಕೂಡಲಸಂಗಮದತ್ತ……..

ಆಸಕ್ತರು ಜೊತೆಯಾಗಬಹುದು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ಲೇಖನ-ವಿವೇಕಾನಂದ. ಹೆಚ್.ಕೆ.
9844013068

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: