ಚಿತ್ರದುರ್ಗ, ತುಮಕೂರು, ಬಳ್ಳಾರಿ ಹಾಗೂ ಸೀಮಾಂಧ್ರದ ಅನಂತಪುರಂ ಜಿಲ್ಲೆಗಳ ವ್ಯಾಪ್ತಿಯ ಆದಿಮ ಸಮಾಜ ಮತ್ತು ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ…

ಚಿತ್ರದುರ್ಗ, ತುಮಕೂರು, ಬಳ್ಳಾರಿ ಹಾಗೂ ಸೀಮಾಂಧ್ರದ ಅನಂತಪುರಂ ಜಿಲ್ಲೆಗಳ ವ್ಯಾಪ್ತಿಯ ಆದಿಮ ಸಮಾಜ ಮತ್ತು ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ…

ಮೊಳಕಾಲ್ಮೂರು:

‘ಆದಿಮ ಸಮಾಜ ಮತ್ತು ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ’ ಕುರಿತು ಒಂದು ದಿನದ ವಿಚಾರ ಸಂಕಿರಣವು, ನಿನ್ನೆ ದಿನ ದಿನಾಂಕ 10-01-2021) ಮೊಳಕಾಲ್ಮೂರು ಪಟ್ಟಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಅಕ್ಷರದವ್ವ ಸಾವಿತ್ರಿಬಾ ಫುಲೆ ಅವರ 190 ನೇ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸುವ ಉದ್ದೇಶದಿಂದ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಸಾಮಾಜಿಕ ಹೋರಾಟಗಾರ್ತಿ, ಹಂಪಿ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಸಂಶೋಧಕಿ, ನನ್ನ ಆತ್ಮೀಯ ಸಹೋದರಿ ಕೆ.ಜೆ.ಜಯಲಕ್ಷ್ಮಮ್ಮ ಅವರು ಪ್ರೇರಣಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬುಡಕಟ್ಟು ಬಳಗ, ಜಂಬೂದ್ವೀಪ ಕರ್ನಾಟಕ, ಜೈ ಭೀಮ್ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದ ವೇದಿಕೆಗೆ ಗೌರಸಮುದ್ರ ಮಾರಮ್ಮ ಮತ್ತು ಜುಂಜಪ್ಪನ ಮಹಾಮೈತ್ರಿ ವೇದಿಕೆ ಎಂಬ ಹೆಸರು ನೀಡಲಾಗಿತ್ತು.

ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ ಹಾಗೂ ಸೀಮಾಂಧ್ರದ ಅನಂತಪುರಂ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೆಲೆಸಿರುವ ಕಾಡುಗೊಲ್ಲ, ಹಳ್ಳಿಕಾರ್ ಒಕ್ಕಲಿಗ, ಕುರುಬ, ಕುಂಚಿಟಿಗ, ಮ್ಯಾಸ ನಾಯಕ, ಕೊರಚ, ಮಾದಿಗ ಮುಂತಾದ ದ್ರಾವಿಡ ಮೂಲ ನಿವಾಸಿ ಬುಡಕಟ್ಟು ಸಮುದಾಯಗಳ ದೈವಾರಾಧನೆಯಲ್ಲಿ ನೆಲದೇವತೆ ಗೌರಸಮುದ್ರ ಮಾರಮ್ಮ ಇವರೆಲ್ಲರನ್ನೂ ಏಕಸೂತ್ರದಲ್ಲಿ ಬೆಸೆದಿರುವ ಬುಡಕಟ್ಟು ಸಂಸ್ಕೃತಿ ಪ್ರಧಾನವಾದ ದೈವವಾಗಿದ್ದಾಳೆ.
ಕಾಡುಗೊಲ್ಲರ ಸಾಂಸ್ಕೃತಿಕ ವೀರನಾದ ಜುಂಜಪ್ಪನು, ದ್ರಾವಿಡ ಗೋವಳಿಗ ಸಮುದಾಯಗಳ ಸಂಸ್ಕೃತಿ ಮತ್ತು ಆರ್ಥಿಕ ಉತ್ಪಾದನಾ ರಚನೆಗಳಲ್ಲಿ ಹಾಸುಹೊಕ್ಕಾಗಿ ಬೆಳೆದುಕೊಂಡವನಾಗಿದ್ದಾನೆ.

‘ಆದಿಮ‌ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ’ ಕುರಿತು ವಿಷಯ ಮಂಡನೆ ಮಾಡಿದ ನಾನು, ಈ ಮೇಲೆ ಉಲ್ಲೇಖಿಸಿರುವ ಜನಾಂಗಗಳ ಒಳಬಾಂಧವ್ಯ ಮತ್ತು ಹೊರಬಾಂಧವ್ಯಗಳ ಸಮಾನ ಸಾಂಸ್ಕೃತಿಕ ಗುರುತುಗಳನ್ನು ಪರಿಚಯಿಸಲು ಪ್ರಯತ್ನಿಸಿದೆನು.

ಕಾಡುಗೊಲ್ಲ, ಕುರುಬ, ಹಳ್ಳಿಕಾರ್ ಒಕ್ಕಲಿಗ ಮತ್ತು ಕುಂಚಿಟಿಗ ಸಮುದಾಯಗಳು ಪರಂಪರಾನುಗತವಾದ ಪಶುಪಾಲನಾ ಸಂಸ್ಕೃತಿಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.

ಹಳ್ಳಿಕಾರ್ ಮತ್ತು ಅಮೃತಮಹಲ್ ತಳಿಯ ದನಗಳನ್ನು ಈ ಸಮುದಾಯಗಳು (ಹೆಚ್ಚಾಗಿ ಹಳ್ಳಿಕಾರ್ ಒಕ್ಕಲಿಗರು ಮತ್ತು ಕುಂಚಿಟಿಗರು) ಸಾಕಾಣಿಕೆ ಮಾಡುತ್ತಿದ್ದಾರೆ.
ಮ್ಯಾಸ ನಾಯಕರ ದೇವರ ಎತ್ತುಗಳು ಇದೇ ತಳಿಗಳಿಗೆ ಸೇರಿವೆ. ಇವು ಬಯಲು ಸೀಮೆಯ ಪಶುಪಾಲಕರು ಉಳಿಸಿಕೊಂಡಿರುವ ಮೂಲ ತಳಿ. ದೇವರೆತ್ತುಗಳನ್ನು ಪರಮ ಪವಿತ್ರ ಎತ್ತುಗಳೆಂದು ಪೂಜಿಸುವ ಆರಾಧನಾ ಪರಂಪರೆ ಮ್ಯಾಸಬೇಡರಲ್ಲಿದೆ. ಎತ್ತುಗಳನ್ನು ಪವಿತ್ರವೆನ್ನುವ ಈ ಧೋರಣೆ ಗೋವು ಮಾತ್ರ ಪವಿತ್ರ ಎನ್ನುವ ಸನಾತನಿ ಮನಸ್ಸುಗಳ ವಿರುದ್ಧ ಪ್ರತಿರೋಧವಾಗಿ ಕಾಣಿಸುತ್ತದೆ. ಅಂದ್ಹಾಗೆ ಇಂತಹ ದೇಶಿ ತಳಿಗಳನ್ನು ಸಂಗೋಪನೆ ಮಾಡಲು ಅಮೃತಮಹಲ್ ಕಾವಲುಗಳನ್ನು ಸ್ಥಾಪಿಸಿದವನು ಕನ್ನಡ ನಾಡಿನ ಹಮ್ಮೀರ ಅರಸ ಟಿಪ್ಪೂ ಸುಲ್ತಾನ್!

ದೇವರ ಎತ್ತುಗಳನ್ನು ಸಾಕುವ ಪೂಜಾರಿಗಳನ್ನು ಕಿಲಾರಿಗಳೆಂದು ಕರೆಯಲಾಗುತ್ತದೆ. ಬುಡಕಟ್ಟು ಮೂಲದ ಪೆಟ್ಟಿಗೆ ದೈವಗಳನ್ನು ಪೂಜಿಸುವ ಮ್ಯಾಸಬೇಡರ ದೇವರೆತ್ತಗಳಂತೆಯೇ ಕಾಡುಗೊಲ್ಲ ಸಮುದಾಯದವರು ತಮ್ಮ ಸಾಂಸ್ಕೃತಿಕ ನಾಯಕನಾದ ಜುಂಜಪ್ಪನನ್ನು ಎತ್ತಿನ ರೂಪದಲ್ಲಿ ಪೂಜಿಸುತ್ತಾರೆ. ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರ ಪರಂಪರೆಯಲ್ಲಿಯೂ ಎತ್ತನ್ನು ಪವಿತ್ರೀಕರಿಸಿ ಪೂಜಿಸಲಾಗುತ್ತದೆ. ಮಂಟೇಸ್ವಾಮಿಯನ್ನು ಹೋರಿಯ ರೂಪಕಲ್ಪನೆಯಲ್ಲಿ ನೀಲಗಾರರು ಪೂಜಿಸುತ್ತಾರೆ. ಮಲೆಮಹದೇಶ್ವರನ ಒಕ್ಕಲಾದ ಬೇಡಗಂಪಣರು ಅಥವಾ ಕಂಪಣಬೇಡರು ಕೂಡ ಪವಿತ್ರ ಎತ್ತಿನ ರೂಪದಲ್ಲಿ ಮಹದೇಶ್ವರನನ್ನು ಪೂಜಿಸುತ್ತಾರೆ.

ಇಂದಿಗೂ ಹಲವಾರು ಊರುಗಳಲ್ಲಿ ಮ್ಯಾಸಬೇಡರು ತಮ್ಮ ದೇವರೆತ್ತುಗಳ ಆವಿನಗೂಡುಗಳಲ್ಲಿ ಹಳ್ಳಿಕಾರ್ ಮತ್ತು ಅಮೃತಮಹಲ್ ದೇಶಿ ತಳಿಯ ನೂರಾರು ರಾಸುಗಳನ್ನು ಸಾಕುತ್ತಿದ್ದಾರೆ. ಟಿಪ್ಪೂ ಸುಲ್ತಾನ್ ಸ್ಥಾಪಿಸಿದ ಅಮೃತಮಹಲ್ ಕಾವಲುಗಳು ಕಾಲಾನಂತರದಲ್ಲಿ ಭೂಹಿಡುವಳಿಗೆ ಒಳಪಡಿಸಿ ನಾಶವಾದದ್ದು ದುಃಖಕರ ಸಂಗತಿ.

ಸ್ಥಿರವಾಗಿ ನೆಲೆಸುವುದಕ್ಕೂ ಮೊದಲು ಈ ಪಶುಪಾಲಕ ಸಮುದಾಯಗಳು ತಮ್ಮ ಜಾನುವಾರುಗಳೊಂದಿಗೆ ಮೇವು ನೀರು ಆಶ್ರಯ ಹುಡಿಕೊಂಡು ಕಾಡುಮೇಡು ಬೆಟ್ಟ ಬಯಲು ಅಲೆದಾಡುತ್ತಾ ತಾವು ನಿಲುಗಡೆಯಾದ ಸ್ಥಳಗಳನ್ನು ದೊಡ್ಡಿ, ರೊಪ್ಪ, ಕೊಪ್ಪ, ಕೊಪ್ಪಲು, ಕುಪ್ಪೆ, ಕಾವಲು, ಮಾಳಿಗೆ, ವಾಡಿ ಮುಂತಾದ ಹೆಸರುಗಳಿಂದ ಕರೆದುಕೊಳ್ಳುತ್ತಿದ್ದರು. ಈಗಲೂ ಈ ಶಬ್ದ ವಿಶೇಷಣಗಳಿರುವ ನೂರಾರು ಊರುಗಳು ನಮ್ಮಲ್ಲಿವೆ.

ಸಮುದಾಯಗಳ ಹಂತವನ್ನು ಕಾಯುತ್ತಿದ್ದ ಮತ್ತು ಜನ ಜಾನುವಾರುಗಳನ್ನು ರಕ್ಷಿಸುತ್ತಿದ್ದ ಅನೇಕ ಮುಖಂಡರು ಸಾಂಸ್ಕೃತಿಕ ನಾಯಕರಾಗಿ ಈ ಬುಡಕಟ್ಟುಗಳಲ್ಲಿ ಗುರುತಿಸಿಕೊಂಡಿದ್ದಾರೆ. ಎತ್ತಪ್ಪ, ಜುಂಜಪ್ಪ, ಚಿತ್ರಲಿಂಗ, ಕಾಟಮಲಿಂಗ, ಕಾಟವ್ವ, ಕರಡಿ ಬುಳ್ಳಪ್ಪ ಮುಂತಾದವರು ಕಾಡುಗೊಲ್ಲ ಬುಡಕಟ್ಟಿನ ನಾಯಕರಾಗಿದ್ದಾರೆ.
ಜಗಳೂರು ಪಾಪನಾಯಕ, ಗಾದ್ರಿ ಪಾಲನಾಯಕ, ಕೋರಿ ಯರಮಂಚನಾಯಕ, ಕಾಮಗೇತಿ ಭೂಪ ಅಥವಾ ಕಾಮಗೇತಿ ಕಂಪಳರಾಯ ಮುಂತಾದವರು ಮ್ಯಾಸನಾಯಕರ ಸಾಂಸ್ಕೃತಿಕ ವೀರರಾಗಿದ್ದಾರೆ. ಕುಂಚಿಟಿಗರ ಸಾಂಸ್ಕೃತಿಕ ನಾಯಕರಾಗಿ ವೀರಕ್ಯಾತರಾಯ, ಜಲಧಿ ಬೊಪ್ಪರಾಯ, ಆವಿನ ಕಾಮರಾಯ, ಶೂಲದ ಈರಣ್ಣ, ಈರಬಡಣ್ಣ, ಬರಗೂರೀರಮ್ಮ, ವಡ್ಡಗೆರೆ ವೀರನಾಗಮ್ಮ ಅಥವಾ ತಾಡಿನಾಗಮ್ಮ ಪ್ರಮುಖರಾಗಿದ್ದಾರೆ.‌ ಬೀರಣ್ಣ, ಮೈಲಾರಲಿಂಗ ಮುಂತಾದವರು ಕುರುಬರ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಇವರೆಲ್ಲರೂ ಪಶುಪಾಲಕರಾಗಿರುವುದು ವಿಶೇಷ ಸಂಗತಿ.

ಹಾಲು ಮತ್ತು ಹಾಲಿನ ಉತ್ಪನ್ನಗಳು, ಕುರಿ ಮೇಕೆ ಮತ್ತು ಅವುಗಳ ಉತ್ಪನ್ನಗಳು ಇವರ ಆರ್ಥಿಕತೆಗೆ ಮತ್ತಷ್ಡು ಇಂಬು ನೀಡಿದ್ದ ಕಸುಬುಗಳಾಗಿದ್ದವು. ಇವರಿಗಿಂತಲೂ ಸಾಮಾಜಿಕವಾಗಿ ತಳಸ್ತರದಲ್ಲಿರುವ ಕೆಳಜಾತಿಯ ಮಾದಿಗ ಸಮುದಾಯದ ಜನ ಆಳುಮಕ್ಕಳಾಗಿ (ಮಾದಿಗಾಳುಗಳು) ಚರ್ಮೋತ್ಪನ್ನಗಳ ತಯಾರಿಕೆ, ವಿಸರ್ಜಿತ ಜೀವಿಗಳ ಕಳೇಬರ ವಿಲೇವಾರಿ ಮುಂತಾದ ಕೆಲಸಗಳನ್ನು ನಿರ್ವಹಿಸುವವರಾಗಿದ್ದರು. ಪಶುಗಳ್ಳರ ವಿರುದ್ಧ ಸೆಣೆಸಿ ತುರುಗಾಳಗದಲ್ಲಿ ಮಡಿದು ಜಾನುವಾರುಗಳನ್ನು ರಕ್ಷಣೆ ಮಾಡಿದ ಮಾದಿಗರು ವೀರಗಲ್ಲುಗಳಾಗಿ ನಿಂತಿರುವ ನೂರಾರು ಉದಾಹರಣೆಗಳು ಮತ್ತು ಮಾಹಿತಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಸಾಂಸ್ಕೃತಿಕ ನಾಯಕರ ನೇತೃತ್ವದಲ್ಲಿ ಜಾನುವಾರುಗಳನ್ನು ಮತ್ತು ಬೌಗೋಳಿಕ ನೆಲೆಗಳನ್ನು ಕಾಪಾಡುವ ಸಲುವಾಗಿ ಹೊಲೆಮಾದಿಗರು ಅನೇಕ ಯುದ್ಧಗಳನ್ನು ಮಾಡಿದ್ದಾರೆ.

ಗೌರಸಮುದ್ರ ಮಾರಮ್ಮ ಮತ್ತು ಅವಳ ಸೋದರಳಿಯ ಕೋರಿ ಯರಮಂಚನಾಯಕನ ಬಳಿಯಿದ್ದ ತುರುಗಳನ್ನು ದಟ್ಡಿದಾವಣಿ ಹಾಕಿ ಕಳ್ಳರು ಕದ್ದೊಯ್ದಾಗ ಮಾದಿಗ ವೀರರು ಗೌರಸಮುದ್ರದ ಬಳಿಯ ತುಮ್ಮಲು ಎಂಬ ಬಯಲಿನಲ್ಲಿ ತುರುಗಾಳಗ ನಡೆಸಿ ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಇದೇ ಗೌರಸಮುದ್ರ ಮಾರಮ್ಮನಿಗೆ ಮಾದಿಗರು ಹೆಣ್ಣುಮಕ್ಕಳನ್ನು ಬಸವಿ ಬಿಡುವ ಸಂಪ್ರದಾಯ ಇತ್ತೀಚಿನವರೆಗೂ ರೂಢಿಯಲ್ಲಿತ್ತು. ಮಾರಮ್ಮನಿಗೆ ಬಸವಿ ಬಿಡುವಾಗ, ಬಲಿ ಕೊಡುವಾಗ ಮುಂತಾದ ಸಂದರ್ಭಗಳಲ್ಲಿ ನಾಯಕ ಜನಾಂಗದ ಪೋತರಾಜರು ಮುಖ್ಯ ಪಾತ್ರ ವಹಿಸುತ್ತಾರೆ. ನಾಯಕ ಸಮುದಾಯದ ಪೋತರಾಜರು ಮತ್ತು ಮಾದಿಗರ ಉಪಜಾತಿಯಾದ ಸಿಂದೋಳ್ಳು ಸಮುದಾಯದ ಪೋತರಾಜರು ಸಮಾನ ಸಾಂಸ್ಕೃತಿಕ ಗುರುತುಗಳನ್ನು ಹಂಚಿಕೊಂಡಿದ್ದಾರೆ.

ಕೊರಚ ಅಥವಾ ಕೊರಮ‌ ಸಮುದಾಯದ ಹೆಂಗಸರು ಕೊರವಂಜಿ ವೇಷ ಧರಿಸಿಕೊಂಡು ರೇಣುಕಾ ಎಲ್ಲಮ್ಮ ದೇವಿಯನ್ನು ಪೆಟ್ಟಿಗೆ ದೇವರ ರೂಪದಲ್ಲಿ ದೇವದಾಸಿ ಪ್ರಧಾನ ದೇವತೆಯನ್ನಾಗಿ ಹಡ್ಡಲಿಗೆಯಲ್ಲಿ ಹೊತ್ತುಕೊಂಡು ಆರಾಧಿಸುತ್ತಾರೆ. ಕೊರಚರು ಹಂದಿ ಸಾಕಾಣಿಕೆಯಿಂದಾಗಿ ಪಶುಪಾಲಕರಾಗಿದ್ದಾರೆ. ಮಾದಿಗರ ಮತ್ತೊಂದು ಉಪಜಾತಿಯಾದ ದಕ್ಕಲರು ಹಂದಿ ಸಾಕುತ್ತಾರೆ. ಹಂದಿ ಸಾಕಾಣಿಕೆಯ ಜೊತೆಯಲ್ಲಿ ದಕ್ಕಲರು ರಾಸುಗಳ ಮುಖಕಳೆಗೆ ಒಪ್ಪುವಂತೆ ಕೊಂಬುಗಳನ್ನು ಎರೆಯುತ್ತಾರೆ. ರಾಸುಗಳ ವಿಸರ್ಜಿತ ಕಳೇಬರಗಳ ಕೊಂಬು ಮತ್ತು ಮೂಳೆಗಳಿಂದ ಬಾಚಣಿಗೆ, ಸೀರಣಿಗೆ, ಕುಡುಗೋಲಿನ ಹಿಡಿಕೆ, ಅಂಗಿ ಗುಂಡಿಗಳು, ಮಣಿ ಸರಗಳನ್ನು ತಯಾರಿಸಿ ಕೊಡುತ್ತಿದ್ದರು. ಹೀಗೆ ಒಟ್ಟಾರೆಯಾಗಿ ಹೇಳುವುದಾದರೆ ಆದಿಮ ಬುಡಕಟ್ಟು ಮೂಲದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ತಳ ಸಮುದಾಯಗಳು ಈಗಲೂ ಉಳಿಸಿಕೊಂಡಿವೆ.

ನಿನ್ನೆ ಇಡೀ ದಿನ ಡಾ.ಬಂಜಗೆರೆ ಜಯಪ್ರಕಾಶ್, ಮಾಜಿ‌ ಮಂತ್ರಿ ಎಚ್.ಆಂಜನೇಯ, ಹಿರಿಯ ಮುಖಂಡರಾದ ಕೆ.ಜಗಲೂರಯ್ಯ, ಎಸ್.ಎಂ.ಮುತ್ತಯ್ಯ, ಡಾ.ವಿರೂಪಾಕ್ಷ ಪೂಜಾರಹಳ್ಳಿ, ಡಾ.ಸಿ.ಎಸ್.ರಘುಪತಿ, ಡಾ.ನಾಗೇಶ್ ದಸೂಡಿ, ಡಾ.ನಟೇಶ್, ಕೂನಿಕೆರೆ ರಾಮಣ್ಣ, ಮಂಜುನಾಥ್, ರತ್ನಾ ಅಮ್ಮನಹಟ್ಟಿ, ಚಳ್ಳಕೆರೆ ಬಸವರಾಜು, ಅಜ್ಜೇರಿ ತಿಪ್ಪೇಸ್ವಾಮಿ, ರಾಮಕೃಷ್ಣ ಬೂದಿಹಾಳ್, ಸಿದ್ದಾರ್ಥ ಆನಂದ್ ಮಾಲೂರು ಇನ್ನೂ ಮುಂತಾದ ನೂರಾರು ಗೆಳೆಯರು ಒಂದೆಡೆ ಸೇರಿ ನಮ್ಮ ಸಾಂಸ್ಕೃತಿಕ ಅಸ್ಮಿತೆಗಳನ್ನು ಮರು ಶೋಧಿಸಿಕೊಳ್ಳಲು ಕಾರಣರಾದ ಸಾಮಾಜಿಕ ಹೋರಾಟಗಾರ್ತಿ, ನನ್ನ ಪ್ರೀತಿಯ ಸಹೋದರಿ ಕೆ.ಜೆ.ಜಯಲಕ್ಷ್ಮಮ್ಮ Jaya Lakshmi ಅವರ ಪರಿಶ್ರಮ, ಕಳಕಳಿ ಸಾಮಾಜಿಕ ಬದ್ಧತೆಗಳಿಗೆ ಶರಣು ಶರಣಾರ್ಥಿ

ಲೇಖನ-ಡಾ.ವಡ್ಡಗೆರೆ ನಾಗರಾಜಯ್ಯ
8722724174

What’s your Reaction?
+1
2
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: