ಅಲ್ಪಸಂಖ್ಯಾತ ಧರ್ಮದವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕುತಂತ್ರ ನಡೆಸಲಾಗುತ್ತಿದೆ-ಎಂ.ಕೆ.ತಾಜ್ ಪೀರ್…
ಅಲ್ಪಸಂಖ್ಯಾತ ಧರ್ಮದವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕುತಂತ್ರ ನಡೆಸಲಾಗುತ್ತಿದೆ-ಎಂ.ಕೆ.ತಾಜ್ ಪೀರ್…
ಚಿತ್ರದುರ್ಗ:
ಧರ್ಮದ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುತ್ತಿರುವ ಕೋಮುವಾದಿಗಳು ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರ ಹೆಸರುಗಳನ್ನು ತೆಗೆಯುವ ಸಂಚು ನಡೆಸುತ್ತಿರುವುದರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಎಚ್ಚೆತ್ತುಕೊಂಡು ಮತದಾರರ ಪಟ್ಟಿಗಳಲ್ಲಿ ಹೆಸರುಗಳಿದೆಯೋ ಇಲ್ಲವೋ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮನವಿ ಮಾಡಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷರಾದ ಸಯೀದ್ ಅಹಮದ್ರವರ ಆದೇಶದಂತೆ ಮೊಳಕಾಲ್ಮುರು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಮ್.ಜುಬೇರ್ ಅಹಮದ್ ಹಾಗೂ ಕಾರ್ಯಾಧ್ಯಕ್ಷ ಕೆ.ಮಹಮದ್ ಮೆಹಬೂಬ್ ಇವರುಗಳಿಗೆ ಗುರುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೇಮಕಾತಿ ಪತ್ರಗಳನ್ನು ನೀಡಿ ಮಾತನಾಡಿದರು.
ಅಲ್ಪಸಂಖ್ಯಾತ ಮತಗಳು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಕುತಂತ್ರ ನಡೆಯುತ್ತಿರುವುದರಿಂದ ಕಾರ್ಯಕರ್ತರು ಮತದಾರರ ಪಟ್ಟಿಗಳನ್ನು ಪಡೆದುಕೊಂಡು ಹೆಸರುಗಳು ಬಿಟ್ಟು ಹೋಗಿದ್ದರೆ ಪುನಃ ಸೇರ್ಪಡೆಗೊಳಿಸುವತ್ತ ಗಮನ ಕೊಡಬೇಕು. ಹದಿನೆಂಟು ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕೆಲಸವೂ ಆಗಬೇಕಿದೆ. ನಿರ್ಲಕ್ಷೆ ಮಾಡಬೇಡಿ ಎಂದು ಸೂಚಿಸಿದರು.
ದೇಶಕ್ಕೆ ಸ್ವಾತಂತ್ರ ತಂದುಕೊಡುವುದಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲಾ ಜಾತಿ ಧರ್ಮದವರಿಗೆ ಸಾಮಾಜಿಕ ನ್ಯಾಯ ನೀಡಲು ಸಾಧ್ಯ. ಭಾರತ ಜಾತ್ಯಾತೀತ ದೇಶ. ಅನೇಕ ಜಾತಿ ಧರ್ಮದವರು ಇಲ್ಲಿ ಸಹಭಾಳ್ವೆಯಿಂದ ಬದುಕುತ್ತಿದ್ದಾರೆ. ಇದನ್ನು ಸಹಿಸದ ಕೋಮುವಾದಿಗಳು ಜಾತಿ, ಧರ್ಮಗಳ ನಡುವೆ ಗಲಭೆ ಸೃಷ್ಟಿಸಿ ರಾಜಕಾರಣದಲ್ಲಿ ಅಧಿಕಾರ ಹಿಡಿಯುವ ಕೆಲಸಕ್ಕೆ ಕೈಹಾಕಿದ್ದಾರೆ. ಕಾಂಗ್ರೆಸ್ನಲ್ಲಿ ವಿವಿಧ ಘಟಕಗಳಿರುವಂತೆ ಅಲ್ಪಸಂಖ್ಯಾತರ ಘಟಕವೂ ಒಂದು. ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಂರು ಮಾತ್ರ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಸಿಖ್, ಕ್ರೈಸ್ತ, ಬುದ್ದಿಸ್ಟ್, ಪಾರ್ಸಿಗಳು ಅಲಸ್ಪಂಖ್ಯಾತರಲ್ಲಿ ಬರುತ್ತಾರೆ. ಆದ್ದರಿಂದ ನೀವುಗಳು ಬೇರೆಯವರ ವಿಶ್ವಾಸ ಗಳಿಸಿ ಪಕ್ಷಕ್ಕೆ ಕರೆತರುವಲ್ಲಿ ಶ್ರಮಿಸುವಂತೆ ಕರೆ ನೀಡಿದರು.
ಕಳೆದ ಎಪ್ಪತ್ತು ವರ್ಷಗಳ ಕಾಲ ಕಾಂಗ್ರೆಸ್ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಪಂಚ ವಾರ್ಷಿಕ ಯೋಜನೆಯನ್ನು ಜಾರಿಗೆ ತಂದಿದ್ದು, ನಮ್ಮ ಪಕ್ಷ. ಅಲ್ಪಸಂಖ್ಯಾತರ ಕೊಡುಗೆ ಪಕ್ಷಕ್ಕೆ ಅಪಾರ ಎನ್ನುವುದನ್ನು ಅಲ್ಪಸಂಖ್ಯಾತ ಪದಾಧಿಕಾರಿಗಳು ಮರೆಯಬಾರದು. ಮುಂದೆ ನಡೆಯುವ ತಾ.ಪಂ, ಜಿ.ಪಂ.ಚುನಾವಣೆಯಲ್ಲಿ ಒಂದೊಂದು ಮತಗಳು ಅಮೂಲ್ಯವಾಗಿರುವುದರಿಂದ ಈಗಿನಿಂದಲೇ ಎಚ್ಚರಿಕೆಯಿಂದ ಕೆಲಸ ಮಾಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಮುಂದಾಗಬೇಕೆಂದು ಹೇಳಿದರು.
ಮೊಳಕಾಲ್ಮುರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ ಮಾತನಾಡಿ ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ಭದ್ರಕೋಟೆಯಾಗಿದ್ದ ಕಾಂಗ್ರೆಸ್ ಈಗ ಅಧಿಕಾರ ಕಳೆದುಕೊಂಡಿದೆ. ಅದಕ್ಕಾಗಿ ಯಾರು ಎದೆಗುಂದುವುದು ಬೇಡ. ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಸೋನಿಯಾಗಾಂಧಿರವರ ಕೈಬಲಪಡಿಸಿ ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರೋಣ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ಲಾ, ಓ.ಬಿ.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಚಾಂದ್ಪೀರ್, ಸೈಯದ್ ಖುದ್ದೂಸ್, ಡಾ.ರಹಮತ್ವುಲ್ಲಾ, ಮೊಳಕಾಲ್ಮುರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ನಜೀರ್ ಅಹ್ಮದ್, ಮೊಳಕಾಲ್ಮುರು ಯುವ ಕಾಂಗ್ರೆಸ್ ಅಧ್ಯಕ್ಷ ಡಾ.ದಾದಾಪೀರ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.