ಮರಳಿ ಬಾರದ ಹಾದಿಯಲಿ| ಮಾಯೆಯಾಗಿ ಕಾಡುವ ಸಾಲ, ಹುಲಿಗೆ ಸಿಕ್ಕ ಹರಿಣಿಯಂತೆ, ಚಿತ್ತದಲಿ ಚಿತೆಯ ಉಯಿಲು….

ಮರಳಿ ಬಾರದ ಹಾದಿಯಲಿ| ಮಾಯೆಯಾಗಿ ಕಾಡುವ ಸಾಲ, ಹುಲಿಗೆ ಸಿಕ್ಕ ಹರಿಣಿಯಂತೆ, ಚಿತ್ತದಲಿ ಚಿತೆಯ ಉಯಿಲು….

ಚಿತ್ರದುರ್ಗ:

ಮರಳಿ ಬಾರದ ಹಾದಿಯಲಿ

ಅಡವಿ ಬೆಳದಿಂಗಳು
ಆಪು ಹುಲ್ಲಿನ ಗುಡಿಸಲು
ತಲೆಮಾರುಗಳ ಕಳಸ
ಒಣಭೂಮಿ ನೀರಾವರಿ.

ಸಾಲ ಸೂಲದ ಉದಕ
ಮಣ್ಣಿನಲಿ ಮಿಂದು
ನಳನಳಿಸುವ ಬೆಳೆ
ಮನದಲಿ ಬಿರು ಮಳೆ.

ದುಡಿಮೆಯಲಿ ಬಸಿವ ಜೀವ
ಉಡದ ಪಟ್ಟಿನವ
ಹಗಲಿರುಳು ಬೆಸದವ
ಗಾಣದೆತ್ತಿನವ.

ನೊಗಕೆ ಹೆಗಲು ಕೊಟ್ಟ
ಮೂರು ಮಕ್ಕಳ ತಾಯಿ
ಎಣಿಸಲಿಲ್ಲ, ಬಯಸಲಿಲ್ಲ
ದಣಿವರಿಯದೆ ಮಾಗಿದ ಮಡದಿ.

ಹಳ್ಳಿ ಕೂಗುಗಳ ಸದ್ದು
ಆಲಿಸಲಿಲ್ಲ ರೈತ ಕರಿಯ
ಹಿಡಿ ಬಿತ್ತಿ ಖಂಡುಗ ಬೆಳೆ
ಋಣ ಮುಕ್ತ ಕನಸು.

ಮುಗಿಲು ಸೆಲೆ ಬತ್ತಿ
ಧರೆ ಎದೆ ಒಣಗಿ
ಮೂಡಣದ ಮಿಂಚಿಲ್ಲ
ಚಂದ್ರ ಗೂಡು ಬಂಧಿಯಲ್ಲ.

ಮಾಯೆಯಾಗಿ ಕಾಡುವ ಸಾಲ
ಹುಲಿಗೆ ಸಿಕ್ಕ ಹರಿಣಿಯಂತೆ
ದೃಷ್ಟಿಯಲಿ ಶೂನ್ಯ ಸ್ಥಾಯಿ
ಚಿತ್ತದಲಿ ಚಿತೆಯ ಉಯಿಲು.

ಬರದ ನೆರಳು ಉರಿವ ನಾಲಗೆ
ಸಮಾಜ ಸಮುದ್ರದ ನೀರು
ಪ್ರಭುತ್ವ ಬಿಸಿಲ್ಗುದುರೆ
ಸೈತಾನನ ವ್ಯೂಹದಲಿ ಕರಿಯ.

ಹೆಣ ಮಣಿಸಿದ ಬೆಂಕಿ
ಉರಿಗುದುರೆಯಾಗಿ
ಉಳಿದ ಉರಿ ಕೊಳ್ಳಿ
ಪ್ರೇತ ಸೂತಕದ ದೀಪ.

ಪಾಳು ಬಿದ್ದ ಹೊಲ
ಕತ್ತು ಮುರಿದ ಕಲ್ಪವೃಕ್ಷ
ಬಾಯ್ದೆರೆದ ಹೆಣ ನೀರಿನ ತೊಟ್ಟಿ
ಮನದ ಬೆಂಕಿಯಲಿ ಕರಗುವ ಮಡದಿ.

ಬೀದಿ ಸಗಣಿಗೆ ಪುಟ್ಟಿ ಹಿಡಿದು
ಅಲೆವ ಏಳು ವರ್ಷದ ಮಗಳು
ಹಾದಿ ಹೋಕರ ಹೆಜ್ಜೆಯಲಿ
ಸುಳಿದಾಡುತ್ತಲೆ ಇದ್ದಾಳೆ….‌‌‌‌.‌‌

ಕವಿತೆ-ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ.

What’s your Reaction?
+1
0
+1
0
+1
0
+1
0
+1
0
+1
2
+1
2
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: