ರಾಜ್ಯದ ೪೧ ತಾಲ್ಲೂಕುಗಳ ಅಂತರ್ಜಲ ಅಭಿವೃದ್ಧಿಗೆ 1208 ಕೋಟಿ ಮೀಸಲು|ಬಯಲು ಸೀಮೆಯ ಅಂತರ್ಜಲ ಮಟ್ಟ ಅಭಿವೃದ್ಧಿಗೆ 31 ಕೋಟಿ ರೂ.ವೆಚ್ಚ- ಸಚಿವ ಮಾಧುಸ್ವಾಮಿ….
ರಾಜ್ಯದ ೪೧ ತಾಲ್ಲೂಕುಗಳ ಅಂತರ್ಜಲ ಅಭಿವೃದ್ಧಿಗೆ 1208 ಕೋಟಿ ಮೀಸಲು|ಬಯಲು ಸೀಮೆಯ ಅಂತರ್ಜಲ ಮಟ್ಟ ಅಭಿವೃದ್ಧಿಗೆ 31 ಕೋಟಿ ರೂ.ವೆಚ್ಚ- ಸಚಿವ ಮಾಧುಸ್ವಾಮಿ….
ಚಿಕ್ಕಮಗಳೂರು;
ಪ್ರವಾಹ ಹಾಗೂ ಕೋವಿಡ್-೧೯ ಬಿಕ್ಕಟ್ಟಿನ ನಡುವೆಯೂ ಸರ್ಕಾರ ನೀರಾವರಿಗೆ ಹೆಚ್ಚು ಒತ್ತು ನೀಡುತ್ತಿದೆ ಇದು ನಮ್ಮ ಕರ್ತವ್ಯ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಅವರು ಸೋಮವಾರ ಲಕ್ಯಾ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ವತಿಯಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿನ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂತರ್ಜಲ ಮಟ್ಟವನ್ನು ಅಭಿವೃದ್ಧಿಗೊಳಿಸಲು ರೂ. ೩೧ ಕೋಟಿ ವೆಚ್ಚದಲ್ಲಿ ಕೆರೆಗಳನ್ನು ಏತ ನೀರಾವರಿ ಮೂಲಕ ತುಂಬಿಸುವುದು ಹಾಗೂ ಕೆರೆಗಳು ಇಲ್ಲದ ಭಾಗಗಳಲ್ಲಿ ಕೆರೆಗಳನ್ನು ನಿರ್ಮಿಸಿ ನೀರನ್ನು ತುಂಬಿಸಲಾಗುವುದು. ಇದರಿಂದ ಕೊಳವೆ ಬಾವಿಗಳಲ್ಲಿ ನೀರು ಸಿಗುವಂತೆ ಮಾಡುವುದರ ಮೂಲಕ ಈ ಭಾಗದ ಪ್ರಮುಖ ಬೆಳೆಯಾದ ಅಡಿಕೆಗೆ ನೀರು ಒದಗಿಸುವ ಯೋಜನೆಯಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಅಟಲ್ ಭೂ ಜಲ ಯೋಜನೆಯ ಅಡಿಯಲ್ಲಿ ರಾಜ್ಯದ ೪೧ ತಾಲ್ಲೂಕುಗಳನ್ನು ಅಂತರ್ಜಲ ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಈ ಯೋಜನೆಗೆ ರೂ. ೧೨೦೮ ಕೋಟಿ ಅನುದಾನ ನೀಡಿದ್ದು, ಈ ಯೋಜನೆಯಲ್ಲಿ ಕಡೂರು ತಾಲ್ಲೂಕು ಆಯ್ಕೆಯಾಗಿದ್ದು ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ ಎಂದರು.
ನಗರಗಳಲ್ಲಿ ಕೊಳಚೆ ನೀರು ಇದ್ದರೆ ಅದನ್ನು ಶದ್ಧೀಕರಣಗೊಳಿಸಿ ಸಣ್ಣ ನೀರಾವರಿ ಇಲಾಖೆಗೆ ಒಪ್ಪಿಸಿದಲ್ಲಿ ಆ ನೀರನ್ನು ಕೆರೆಗಳಿಗೆ ತುಂಬಿಸಲು ಕಾರ್ಯನಿರ್ವಹಿಸುತ್ತೇವೆ ಈ ನಿಟ್ಟನಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮಾಜಿ ಸಚಿವರು ಹಾಗೂ ಶಾಸಕರಾದ ಸಿ.ಟಿ.ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಮೂಲಕ ಅಂತರ್ಜಲ ಮಟ್ಟವನ್ನು ಅಭಿವೃದ್ಧಿಗೊಳಿಸುವುದರೊಂದಿಗೆ ರೈತರಿಗೆ ನೀರಾವರಿ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದರು.
ನಾಲ್ಕರಿಂದ ಐದು ತಿಂಗಳುಗಳಲ್ಲಿ ಚಿಕ್ಕಮಗಳೂರು, ಕಡೂರು, ತರೀಕೆರೆಯ ಬಯಲುಸೀಮೆ ಪ್ರದೇಶಗಳಿಗೆ ನೀರು ತೂಂಬಿಸುವ ಯೋಜನೆಯನ್ನು ಹಾಗೂ ರಣಘಟ್ಟದಿಂದ ಹಳೆಬೀಡು ಕೆರೆ ಮತ್ತು ಬೆಳವಾಡಿ ಕೆರೆಗಳಿಗೆ ನೀರು ತುಂಬಿಸಿ ಅಲ್ಲಿಂದ ಸರಣಿ ಕೆರೆಗಳಿಗೆ ನೀರು ಹರಿಸುವ ರೂ. ೧೨೪ ಕೋಟಿ ವೆಚ್ಚದ ಯೋಜನೆಯನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಎರೆಡು ಕ್ಯಾಬಿನೆಟ್ ಒಳಗಾಗಿ ರೂ. ೬೩೦ ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರಪ್ಪ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಬೆಳವಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದ್ರಾಕ್ಷಾಯಿಣಿ ಪೂರ್ಣೆಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಉಪ ವಿಭಾಗ ಅಧಿಕಾರಿ ಹೆಚ್.ಎಲ್.ನಾಗರಾಜ್, ತಹಶಿಲ್ದಾರ್ ಕೆ.ಜೆ.ಕಾಂತರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.