ಕೋಟೆ ನಾಡಿನಲ್ಲಿ ಮಹಿಳೆಯರ ಕಾರುಬಾರು, ಸ್ತ್ರೀ ಸಾಧನೆ ಸರ್ವರಿಗೂ ಅನುಕರಣೆ- ಮೈನಾ…
ಕೋಟೆ ನಾಡಿನಲ್ಲಿ ಮಹಿಳೆಯರ ಕಾರುಬಾರು, ಸ್ತ್ರೀ ಸಾಧನೆ ಸರ್ವರಿಗೂ ಅನುಕರಣೆ- ಮೈನಾ…
ಚಿತ್ರದುರ್ಗ:
ಮಹಿಳೆಯರನ್ನು ಕೀಳಾಗಿ ಕಾಣುವ ಕಾಲ ಮುಗಿದಿದೆ. ಮಹಿಳೆಯರು ಹಿಂಜರಿಯುವ ಕಾಲ ಇದಲ್ಲ. ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಸಾಧನೆಗೆ ಸಕಾಲವಾಗಿದೆ. ಮಹಿಳೆಯರು ಮಾಡುವ ಕಾರ್ಯ ಸಾಧನೆಗಳನ್ನು ಮೆಚ್ಚುವ, ಶ್ಲಾಘೀಸುವ ಕಾರ್ಯ ಆಗಬೇಕಿದೆ.
ಐತಿಹಾಸಿಕ ಚಿತ್ರದುರ್ಗದ ಓಬವ್ವನ ನಾಡಿನಲ್ಲಿ ಬಹುತೇಕ ಉನ್ನತ ಹುದ್ದೆಗಳಲ್ಲಿ ಮಹಿಳೆಯರೇ ಇದ್ದಾರೆ. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ನಂದಿನಿ ದೇವಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಪ್ರೇಮಾವತಿ ಮನಗೂಳಿ, ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕಿ ಡಾ.ಜಿ.ಸವಿತಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಮತ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಅಲ್ಪಸಂಖ್ಯಾತರ ಇಲಾಖೆ ರೇಖಾ, ಜಿಲ್ಲಾ ನೋಂದಾಣಾಧಿಕಾರಿ ಕರಿಯಮ್ಮ ಸೇರಿದಂತೆ ಮತ್ತಿತರ ಇಲಾಖೆಗಳ ಮುಖ್ಯಸ್ಥರ ಸ್ಥಾನದಲ್ಲಿಯೂ ಮಹಿಳೆಯರು ಇರುವುದು ಹೆಮ್ಮೆಯ ವಿಷಯ. ಇದರ ಜೊತೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರಾಗಿ ಹಲವಾರು ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಗಮನಿಸುವುದಾದರೇ ‘ಹೆಣ್ಣು ಮಕ್ಕಳೇ ಸ್ಟ್ರಾಂಗೂ ಗುರು’ ಅನ್ನೋ ಸಾಲುಗಳಿಗೆ ತುಂಬಾನೇ ಖುಷಿ ನೀಡುತ್ತದೆ. ನಿಜಕ್ಕೂ ಮಹಿಳಾ ದಿನಾಚರಣೆಗೆ ಈ ವಿದ್ಯಮಾನ ಜಿಲ್ಲೆಯೇ ಹೆಮ್ಮೆಪಡುವ ವಿಷಯ.
ಹೌದು, ಒಬ್ಬ ಹೆಣ್ಣು ಮಗಳು ತಮ್ಮ ಜೀವನದಲ್ಲಿ ತಾಯಿಯಾಗಿ, ಸೋದರಿಯಾಗಿ, ಹೆಂಡತಿಯಾಗಿ ಅಷ್ಟೇ ಏಕೆ ಮಗಳಾಗಿ, ಮನೆಗೆಲಸದವಳಾಗಿಯೂ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತಹಳಾಗಿದ್ದಾಳೆ.
ಒಂದು ಕಂಪನಿ ನಡೆಸುವ ಎಂಡಿಗೆ ಇರುವ ಜವಾಬ್ದಾರಿಯಷ್ಟೇ ಮುಖ್ಯವಾದ ಒಂದು ಮನೆ, ಕುಟುಂಬ ನಿರ್ವಹಣೆ ಮಾಡುವಷ್ಟು ಜವಾಬ್ದಾರಿಯನ್ನು ಮಹಿಳೆಯರು ಹೊತ್ತಿರುತ್ತಾಳೆ. ಮನೆಯಲ್ಲಿರುವ ಪ್ರತಿಯೊಬ್ಬ ಹೆಣ್ಣು ಮಗಳು ಸಹ ಸಾಧಕಿಯರೇ. ಮನೆ ಮಂದಿಗೆಲ್ಲ ಇವರು ಸಾಧನೆಗೆ ಸ್ಫೂರ್ತಿದಾಯಕ ಆಗಿರುತ್ತಾರೆ.
ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮಾರ್ಚ್08 ರಂದು ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ವಿಶ್ವವ್ಯಾಪ್ತಿ ಮಹಿಳೆ ಮತ್ತು ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ಪರಿಚಯಗೊಳಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಅದೇಷ್ಟೋ ಮಹಿಳೆಯರು ಸರ್ಕಾರಿ, ಖಾಸಗಿ ಕಚೇರಿ ಮತ್ತು ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆಲ್ಲ ರಜೆ ದಿನದಂದು ಕಚೇರಿಗೆ ಮಾತ್ರಯಿದ್ದು, ಮನೆಯಲ್ಲಿ ನಿರಂತರವಾಗಿ ಕುಟುಂಬ ನಿರ್ವಹಣೆಯ ಕಾರ್ಯ ಮಾಡುತ್ತಿದ್ದಾರೆ. ಗಾಣದ ಎತ್ತುಗಳ ರೀತಿ ದುಡಿಯುತ್ತಿರುತ್ತಾರೆ.
ಮಹಿಳೆಯರು ಅಥವಾ ಗೃಹಿಣಿಯರು ಎಂದಾಕ್ಷಣ ಮೂಗು ಮುರಿಯುವರ ಸಂಖ್ಯೆಯೇ ಹೆಚ್ಚು. ಆಕೆಗೂ ಸಾಧನೆಯ ಹಂಬಲವಿದೆ. ಜ್ಞಾನದ ಒಡಲಿದೆ ಎಂಬುದನ್ನು ಅರಿಯುವುದಿಲ್ಲ. ಗೃಹಿಣಿ ಎಂಬುದು ಕೇವಲ ಮೂರೇ ಅಕ್ಷರ. ಅದರಲ್ಲಿ ಸುಖ, ಸಂತೋಷ, ನೆಮ್ಮದಿ, ತಾಳ್ಮೆಯ ತೆಕ್ಕೆಯಿದೆ. ಪುರುಷರ ಸಾಧನೆಗೆ ಮೆಟ್ಟಿಲಾಗಿರುತ್ತಾರೆ. ಗಂಡ, ಮಕ್ಕಳ ಸಾಧನೆಗೆ ಆ ಕುಟುಂಬದ ಗೃಹಿಣಿ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಸಮಾಜದಲ್ಲಿ ಮಹಿಳೆಯರ ಸಮಾನತೆ, ಸ್ವಾತಂತ್ರ್ಯಕ್ಕೆ ಸಾಕಷ್ಟು ಹಕ್ಕುಗಳಿದ್ದು, ಅವುಗಳನ್ನು ಅನುಭವಿಸುವುದರಲ್ಲಿ ವಿಫಲರಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಅಷ್ಟೇ ಏಕೆ ಸಮಾಜದಲ್ಲಿ ಮಹಿಳೆಯರನ್ನು ಇನ್ನೂ ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡುವ ಕಾರ್ಯ ಕೈ ಬಿಡಬೇಕು. ಲೇಖನ-ಮೈನಾ, ಅಪ್ರೆಂಟಿಸ್ ತರಬೇತಾರ್ಥಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ.