ಟಿವಿ ಮಾಧ್ಯಮ ಯಾಕಿಂಗೆ…? ಅಸಹನೀಯ —ನಾಟಕೀಯ —-ವರ್ತನೆ, ನಾನಿರುವುದೇ ಹೀಗೆ ಎಂಬ ಕಪಟ ಸಮರ್ಥನೆ…

ಟಿವಿ ಮಾಧ್ಯಮ ಯಾಕಿಂಗೆ…? ಅಸಹನೀಯ —ನಾಟಕೀಯ —-ವರ್ತನೆ, ನಾನಿರುವುದೇ ಹೀಗೆ ಎಂಬ ಕಪಟ ಸಮರ್ಥನೆ…

ಬೆಂಗಳೂರು:

ಮನುಷ್ಯ ಒಂದು ಪ್ರಾಣಿ. ಅವನನ್ನು ಸಹ ಹಣ ಪ್ರಚಾರ ಮುಂತಾದ ಆಮಿಷಗಳಿಂದ ಆಕರ್ಷಿಸಿ ಒಂದು ಬೋನಿನಲ್ಲಿ ಕೂಡಿ ಹಾಕಿ ಪ್ರಾಣಿಯಂತೆ ಆಡಿಸಿ ಜನರಿಗೆ ಮನರಂಜನೆ ನೀಡಿ ಹಣ ಮಾಡಬಹುದು. ಹೆಚ್ಚು ಕಡಿಮೆ ಒಂದು ಸರ್ಕಸ್ ಕಂಪನಿಯಂತೆ. ಅದನ್ನು ಟಿವಿ ಮಾಧ್ಯಮ ಮಾಡುತ್ತಿದೆ. ಅದೇ ಬಿಗ್ ಬಾಸ್……….

ಹಾಡು ಕುಣಿತ ಪ್ರಶ್ನೋತ್ತರ ಮುಂತಾದ ಪ್ರತಿಭಾ ಪ್ರದರ್ಶನದ ರಿಯಾಲಿಟಿ ಶೋನಲ್ಲಿ ಇರುವ ಸಹಜತೆ ಇಲ್ಲಿ ಇರುವುದಿಲ್ಲ. ಉದ್ದೇಶ ಪೂರ್ವಕವಾಗಿ ಒತ್ತಡದಿಂದ ಅಲ್ಲಿನ ಸ್ಪರ್ಧಿಗಳನ್ನು ಒಬ್ಬರು ನಿಯಂತ್ರಿಸುತ್ತಾರೆ ಮತ್ತು ಪ್ರಚೋದಿಸುತ್ತಾರೆ. ಅದನ್ನು ಹೀಗೆ ಹೇಳಬಹುದು….

ಬೋನಿನಲ್ಲಿ ಕೋತಿಗಳ ಕಲರವ,
ಕಪಿ ಚೇಷ್ಟೆಗಳು,
ಧ್ವನಿಯ ಮುಖಾಂತರ ಆಡಿಸುವ ರಿಂಗ್‌ ಮಾಸ್ಟರ್ ನ ಕುಛೇಷ್ಟೆ,

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ,
ಗೇಣು ಬಟ್ಟೆಗಾಗಿ, ಹೆಸರ ಮೂಟೆಗಾಗಿ,
ಆದರೆ ಹೇಳುವುದು ಮಾತ್ರ ಮನೋರಂಜನೆಗಾಗಿ, ಅಭಿಮಾನಿಗಳಿಗಾಗಿ,

ಮಾಡುವುದು ವಿಕೃತ ಮನಸ್ಸಿನ ಅನಾವರಣ,
ಹೇಳುವುದು ಮಾನಸಿಕ ಗಟ್ಟಿತನದ ಪ್ರದರ್ಶನ,

ಅಸಹನೀಯ —ನಾಟಕೀಯ —-ವರ್ತನೆ,
ನಾನಿರುವುದೇ ಹೀಗೆ ಎಂಬ ಕಪಟ ಸಮರ್ಥನೆ,

ಇದು ಅನುಕರಣೀಯವೋ, ಅನುಸರಣೀಯವೋ,
ನಗಬೇಕೋ, ಅಳಬೇಕೋ,
ದ್ವಂದ್ವ ಬಹುಜನರದ್ದು,

ಇದುವೇ ಜನಪ್ರಿಯ TV ಕಾರ್ಯಕ್ರಮ,
ಅದುವೇ ಬಿಗ್ ಬಿಗ್ ಬಿಗ್ ಬಾಸ್.

ಕಾರ್ಯಕ್ರಮಗಳನ್ನು ಮಾಡುವ ಸ್ವಾತಂತ್ರ್ಯ ಅವರಿಗೂ ಇದೆ. ನೋಡುವ ಅಥವಾ ನೋಡದಿರುವ ಸ್ವಾತಂತ್ರ್ಯ ನಮಗೂ ಇದೆ,

ಕೋಪ ನಿಯಂತ್ರಿಸಲು – ನನ್ನನ್ನು ನಾನು ಹುಡುಕಲು ಇಲ್ಲಿಗೆ ಬಂದೆ ಎನ್ನುವರು,
ಹಾಗಾದರೆ ಇಷ್ಟು ದಿನದ ಹೊರಗಿನ ಬದುಕು ಅಸಹಜವೇ,

ಪ್ರಶ್ನೆಗಳು ಏಳುತ್ತಲೇ ಇರುತ್ತವೆ,
ಉತ್ತರವೂ ನಮಗೆ ತೋಚಿದಂತೆ,
ಸಿನಿಮಾ ಧಾರವಾಹಿಗಳ ಕಥೆಯೂ ಇದೇ ಅಲ್ಲವೇ, ಇಲ್ಲೊಂದಿಷ್ಟು ಹೆಚ್ಚು ಅತಿರೇಕ,

ಜಗವೇ ಒಂದು ನಾಟಕ ರಂಗ,
ನಾವು ಪಾತ್ರಧಾರಿಗಳು,
ಸೂತ್ರಧಾರಿ ಇನ್ಯಾರೋ ಒಂದು ಮಾಯೆ ಎಂಬ ನಂಬಿಕೆ – ಹುಡುಕಾಟ,

ಮಾನವ ಜನ್ಮ ಶ್ರೇಷ್ಠ ಎನ್ನುವವರು ಕೆಲವರು,
ಬದುಕೊಂದು ನಶ್ವರ ಎನ್ನುವವರು ಹಲವರು,
ಜೀವನ ದೀರ್ಘ ಪಯಣ ಅದನ್ನು ಅನುಭವಿಸು ಎಂದರೆ,
ಇಲ್ಲ, ಅದು ಕ್ಷಣಿಕ, ಬೇಗ ಸಾರ್ಥಕತೆಯ ಕಡೆ ಮುನ್ನಡೆ ಎಂಬ ಅರ್ಥವೂ ಉಂಟು,

ಸಹಜತೆಯಲ್ಲೊಂದು ಅಸಹಜತೆ,
ನಿಯಂತ್ರಣದಲ್ಲೊಂದು ಅಸಹಾಯಕತೆ,
ಸತ್ಯದಲ್ಲೊಂದು ಮಿಥ್ಯೆ,
ಅರಿವಿನಲ್ಲೊಂದು ನಿಗೂಡತೆ,

ಬದುಕೆಂಬ ಸರ್ಕಸ್ ಕಂಪೆನಿಯಲ್ಲಿ ನಾವು ನೀವು ಅಭಿನಯಿಸಲೇ ಬೇಕು ಉಸಿರು ನಿಲ್ಲುವವರೆಗೂ……
ನಮ್ಮ ನಮ್ಮ ಅರಿವಿನ ಮಿತಿಯಲ್ಲಿ….
ಸರಿ ತಪ್ಪುಗಳ, ವಾದ ವಿವಾದಗಳ ನಿರಂತರ ಅನಂತ ಪ್ರಯೋಗದ ಪಯಣದಲ್ಲಿ……
****************

ಜ್ಞಾನ ಭಿಕ್ಷಾ ಪಾದಯಾತ್ರೆ ಮಾಹಿತಿ- ದಿನಾಂಕ- 6/3/2021 ಶನಿವಾರ 126 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಗದಗ ನಗರದಲ್ಲಿಯೇ ಮೂರು ಪ್ರಮುಖ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಅರ್ಥಪೂರ್ಣ ಸಂವಾದ ಮತ್ತು ಚರ್ಚೆ ಮಾಡಲಾಯಿತು.

ದಿನಾಂಕ-7/3/2021 ಭಾನುವಾರ 127 ನೆಯ ದಿನ ಮತ್ತು 8/3/2021 ಸೋಮವಾರ 128 ನೆಯ ದಿನ ಸಹ ನಮ್ಮ ಪಾದಯಾತ್ರೆ ಗದಗ ನಗರದಲ್ಲಿಯೇ ಅನಿವಾರ್ಯವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಯೋಜನೆ ಇದೆ. ವಿವಿಧ ಕಾಲೇಜುಗಳಲ್ಲಿ ಪ್ರೀತಿಯ ಮನವಿ ಇದೆ.

ದಿನಾಂಕ-9/3/2021 ಮಂಗಳವಾರ 129 ನೆಯ ದಿನ ಗದಗ ನಗರದಿಂದ ಸುಮಾರು 40 ಕಿಲೋಮೀಟರ್ ದೂರದ ಲಕ್ಷ್ಮೇಶ್ವರ ತಲುಪುವ ಯೋಜನೆಯು ಇದೆ.

ಆಸಕ್ತರು ಜೊತೆಯಾಗಬಹುದು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ-ವಿವೇಕಾನಂದ. ಹೆಚ್.ಕೆ.
9844013068

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: