ಮಹಿಳಾ ಸಮಾನತೆ, ಮಹಿಳಾ ಹಕ್ಕು, ಮಹಿಳಾ ಸುರಕ್ಷೆ, ಮಹಿಳಾ ಮಹಿಳಾ ದೌರ್ಜನ್ಯ – ಮಹಿಳಾ ವಿಮೋಚನೆ – ಮಹಿಳಾ ಮೀಸಲಾತಿ…?

ಮಹಿಳಾ ಸಮಾನತೆ, ಮಹಿಳಾ ಹಕ್ಕು, ಮಹಿಳಾ ಸುರಕ್ಷೆ, ಮಹಿಳಾ ಮಹಿಳಾ ದೌರ್ಜನ್ಯ – ಮಹಿಳಾ ವಿಮೋಚನೆ – ಮಹಿಳಾ ಮೀಸಲಾತಿ…?

ಬೆಂಗಳೂರು:

ವಿಶ್ವ ಮಹಿಳಾ ದಿನಾಚರಣೆ. ಮಾರ್ಚ್ -8.

ವಿಶ್ವವೇ ನಿನ್ನದಾಗಿರುವಾಗ ನಿನಗೊಂದು ಆಚರಣೆಯ ದಿನ ಬೇಕಿತ್ತೇ ?

ಹೌದು, ಈ ಆಚರಣೆಯ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚಿದೆ. 2021 ರ ಈ ಸಂಧರ್ಭದಲ್ಲೂ ಮಹಿಳಾ ಸ್ವಾತಂತ್ರ್ಯ- ಮಹಿಳಾ ಸಮಾನತೆ – ಮಹಿಳಾ ಹಕ್ಕು – ಮಹಿಳಾ ಸುರಕ್ಷೆ – ಮಹಿಳಾ ದೌರ್ಜನ್ಯ – ಮಹಿಳಾ ವಿಮೋಚನೆ – ಮಹಿಳಾ ಮೀಸಲಾತಿ – ವರದಕ್ಷಿಣೆ ವಿರೋಧಿ ಚಳವಳಿ – ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಘೋಷಣೆಗಳಲ್ಲಿ – ಹೋರಾಟಗಳಲ್ಲಿ ನಾವು ಬಂಧಿಯಾಗಿದ್ದೇವೆಂದರೆ ನಾಚಿಕೆ ಅವಮಾನ ಆಗಬೇಕಿರುವುದು ನಮಗೋ – ನಾಗರಿಕತೆಗೋ ಅರ್ಥವಾಗುತ್ತಿಲ್ಲ.

ಭಾರತಕ್ಕೆ ಸೀಮಿತವಾಗಿ ಹೇಳುವುದಾದರೆ ಯಾವ ಮಾನವೀಯ ಸಂಬಂಧ ನಮ್ಮ ಜೀವನದಲ್ಲಿ ಅತ್ಯಂತ ಮಹತ್ವ ಪಡೆಯುತ್ತದೆ ಎಂದು ಯಾರನ್ನೇ ಕೇಳಿದರೂ ಬಹುತೇಕರ ಉತ್ತರ ನಿಸ್ಸಂಶಯವಾಗಿ ” ತಾಯಿ ” ಎಂದೇ ಇರುತ್ತದೆ. ಹಾಗಾದರೆ ಇದು ನಿಜವೇ ?

ಇದು ನಿಜವಾಗುವುದು ಕೇವಲ ನಮ್ಮ ಹೆತ್ತಮ್ಮನ ವಿಷಯದಲ್ಲಿ ಮಾತ್ರ. ಇನ್ನೂ ಹೆಚ್ಚೆಂದರೆ ನಮ್ಮ ರಕ್ತ ಹಂಚಿ ಹುಟ್ಟಿದ ಅಕ್ಕ ತಂಗಿಯರ ವಿಷಯದಲ್ಲಿ ಮಾತ್ರ. ಉಳಿದ ಹೆಣ್ಣುಮಕ್ಕಳ ವಿಷಯದಲ್ಲಿ ಭಾವನೆ – ಮೇಲ್ನೋಟದ ಅಭಿಪ್ರಾಯ ಏನೇ ಇದ್ದರೂ ನಡವಳಿಕೆ ಮಾತ್ರ ಘನಘೋರ ಆತ್ಮವಂಚನೆ. ಎಲ್ಲಾ ಪಾವಿತ್ರ್ಯದ ಗುಣಗಳನ್ನು ಆಕೆಯ ಮೇಲೆ ಹೊರಿಸಿ ಅದರಿಂದ ಆಕೆಯನ್ನು ಮಾನಸಿಕವಾಗಿ ಬಂಧಿಸಿ ಆಕೆಯ ಮೇಲೆ ನಿಯಂತ್ರಣ ಹೇರಿ ಆಕೆಯನ್ನು ಶೋಷಿಸುವ ಸುಲಭೋಪಾಯ ಕಂಡುಕೊಂಡಿದ್ದೇವೆ. ಆಕೆಯನ್ನು ವಿಚಿತ್ರ ಸುಖಲೋಲುಪತೆಯ ಪ್ರಾಣಿ ಎಂದೇ ಪರಿಗಣಿಸಲಾಗಿದೆ.

ಅದು ಸಿನಿಮಾವಿರಲಿ ಸಾಹಿತ್ಯವಿರಲಿ ಕಲೆ ಇರಲಿ ರಾಜಕೀಯವಿರಲಿ ಭಕ್ತಿ ಭಾವಗಳೇ ಇರಲಿ ಆಕೆಗೆ ಗೌರವದ ಸ್ಥಾನ ನೀಡಲಾಗುತ್ತದೆ ಅದರೆ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗುತ್ತದೆ.

ಎಲ್ಲಾ ಜೀವರಾಶಿಗಳಿಗೂ ಸ್ವಾತಂತ್ರ್ಯವಿಲ್ಲದ ಜೀವನವೆಂದರೆ ಅದು ಜೀತವಿದ್ದಂತೆ.
ಈ ಕ್ಷಣದಲ್ಲಿಯೂ ಅನಧಿಕೃತವಾಗಿ ನಮ್ಮೆಲ್ಲರ ಮಾತುಗಳಲ್ಲಿ – ಮನಸ್ಸುಗಳಲ್ಲಿ – ಚರ್ಚೆಗಳಲ್ಲಿ – ಹರಟೆಗಳಲ್ಲಿ – ಅಸೂಯೆಗಳಲ್ಲಿ ಅತ್ಯಂತ ವಿಕೃತವಾಗಿ ಚಿತ್ರಿತವಾಗುವುದೇ ಮಹಿಳೆಯರ Character ಬಗ್ಗೆ.

ನಮ್ಮ ಅಕ್ಕ ತಂಗಿ ತಾಯಿ ಹೆಂಡತಿ ಬಿಟ್ಟರೆ ಉಳಿದವರ ಬಗ್ಗೆ ಅನೇಕರಲ್ಲಿ ಮಾತು ಹಗುರವಾಗುತ್ತದೆ. ಮೇಲ್ನೋಟಕ್ಕೆ ಇದು ಹೇಳುವಷ್ಟು ಗಂಭೀರವಾಗಿಲ್ಲ. ಆದರೆ ಆಂತರ್ಯದಲ್ಲಿ ಇದು ವಾಸ್ತವಕ್ಕೆ ಹತ್ತಿರವಾಗಿದೆ ಎಂದೆನಿಸುತ್ತದೆ.

ಹಾಗಾದರೆ ಮಹಿಳೆಯರೆಲ್ಲಾ ಶ್ರೇಷ್ಠರೇ – ಗೌರವಾನ್ವಿತರೇ – ಎಲ್ಲಾ ಒಳ್ಳೆಯ ಗುಣಗಳೇ ತುಂಬಿರುವ ಸಭ್ಯರೇ ?
ಇಲ್ಲ. ನಾವು ಆಕೆಯ ಸ್ವಾತಂತ್ರ್ಯ- ಸಮಾನತೆಯ ಬಗೆಗೆ ಮಾತ್ರ ಹೇಳುತ್ತಿರುವುದು. ಗುಣಾವಗುಣಗಳಲ್ಲಿ ಆಕೆಯೂ ಪುರಷರಷ್ಟೇ ಸ್ವಾರ್ಥಿ – ತ್ಯಾಗಿ – ವಂಚಕಿ – ಪ್ರೀತ್ಯಾಧಾರಳು – ಅಸೂಯಪರಳು – ಭ್ರಷ್ಟಳು – ಶ್ರಮಿಕಳು – ಒಳ್ಳೆಯವಳು ಎಲ್ಲವೂ ಒಳಗೊಂಡ ವ್ಯಕ್ತಿತ್ವ. ಅದು ಮಾನವ ಸಹಜ ಖಾಸಗಿ ವರ್ತನೆ ಮತ್ತು ಸಹಜ ಸಾಮಾಜಿಕ ವ್ಯವಸ್ಥೆಯ ಪ್ರತಿಬಿಂಬ. ಕೆಲವು ಕಡೆ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಮಹಿಳೆಯರು ಅತ್ಯಂತ ಕೆಟ್ಟದಾಗಿ ನಡೆದುಕೊಂಡಿರುವ ಉದಾಹರಣೆಗಳು ಇದ್ದ ಮಾತ್ರಕ್ಕೆ ಅದು ನಾವು ಆಕೆಗೆ ನೀಡುವ ಸ್ವಾತಂತ್ರ್ಯ- ಸಮಾನತೆ ನಿರಾಕರಿಸಲು ನೆಪವಾಗಬಾರದು.

ಈ ಅಂತರರಾಷ್ಟ್ರೀಯ ಮಹಿಳಾ ದಿನದ ಆಚರಣೆಯಂದು ಮಹಿಳೆಯರ ಬಗ್ಗೆ ನಾವು ಹೊಂದಿರುವ ಧೋರಣೆಗಳನ್ನು – ಭಾವನೆಗಳನ್ನು ಆಕೆಯ ಕುರಿತು ಆಡುವ ಕುಹುಕದ ಮಾತುಗಳನ್ನು ಸಾಧ್ಯವಾದಷ್ಟೂ ನಿಯಂತ್ರಿಸಿಕೊಳ್ಳುವ ಸಂಕಲ್ಪವನ್ನು ಮನದಲ್ಲಿಯೇ ಮಾಡಿ ಕೊಳ್ಳೋಣ.
ಇದು ನಾವು ನಮ್ಮ ತಾಯಿ ಅಕ್ಕ ತಂಗಿ ಗೆಳತಿಯರಿಗೆ ಕೊಡಬಹುದಾದ ದೊಡ್ಡ ಕಾಣಿಕೆ .ಇದು ಕೇವಲ ಅಕ್ಷರಗಳಲ್ಲ ನಡವಳಿಕೆಗಳಾಗಲಿ ಎಂದು ಆಶಿಸುತ್ತಾ……..,……
*”***************

ವಿಶ್ವ ಮಹಿಳಾ ದಿನದ ಶುಭಾಶಯಗಳನ್ನು ಹೇಳಿಕೊಳ್ಳುತ್ತಾ……..

ಭಾವುಕತೆಯನ್ನು ಬದಿಗಿಟ್ಟು ವಾಸ್ತವದ ನೆಲೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಹುಡುಕಾಟದಲ್ಲಿ………

ಮಹಿಳೆ/ಹೆಣ್ಣು ಸೃಷಿಯ ಸಹಜ ಜೀವಿಯಾದರೂ ಸಮಾಜದಲ್ಲಿ ಅತ್ಯಂತ ಸಂಕೀರ್ಣ ವ್ಯಕ್ತಿತ್ವವಾಗಿ ಬಿಂಬಿತವಾಗಿದೆ.

ಹೆಣ್ಣಿನ ಪಾತ್ರದಲ್ಲಿ ಎಷ್ಟೊಂದು ಏರಿಳಿತ ಇದೆ ಎಂದರೆ ಆ ವೈರುಧ್ಯಗಳನ್ನು ವಿಮರ್ಶಿಸಲೂ ಕಷ್ಟವಾಗುತ್ತದೆ.

ನಾನು ಹುಟ್ಟಿರುವುದೇ ತಾಯ ಗರ್ಭದಿಂದ ಮತ್ತು ಹೊರ ಜಗತ್ತಿಗೆ ಪ್ರವೇಶಿಸಿರುವುದೇ ತಾಯಿಯ ಯೋನಿಯ ಮುಖಾಂತರ……..
ಹಾಗೇ ನಾನು ಜೀವನದಲ್ಲಿ ಅನುಭವಿಸಿದ ಅತ್ಯಂತ ಸುಖಮಯ ಕ್ಷಣ ನನ್ನ ಹೆಂಡತಿಯ ಯೋನಿಯ ಸಂಪರ್ಕದಿಂದ…….
ಹಾಗೆಯೇ ನನ್ನ ಅತ್ಯಂತ ಪ್ರೀತಿ ಪಾತ್ರ ಮಗಳು ಜನಿಸಿದ್ದು ನನ್ನ ಹೆಂಡತಿಯ ಯೋನಿಯಿಂದ ಮತ್ತು ಯೋನಿಯೊಂದಿಗೆ…….

ಈ ಕಾರಣದಿಂದ ಮಹಿಳೆ ವಿಚಿತ್ರವಾಗಿ ವಿಶಿಷ್ಟವಾಗಿ ಕಾಣುತ್ತಾಳೆ.

ದೈಹಿಕ ಭಿನ್ನತೆ ಮತ್ತು ಸಂತತಿಯ ಮುಂದುವರಿಕೆಯ ಬಹುದೊಡ್ಡ ಜವಾಬ್ದಾರಿ ಹೆಣ್ಣನ್ನು ಭಿನ್ನವಾಗಿಸಿದೆ.

ಸ್ವಾತಂತ್ರ್ಯ -ಸಮಾನತೆ – ಗೌರವ – ಪೂಜನೀಯತೆ – ಶೋಷಣೆ – ಅತ್ಯಾಚಾರ – ಸತಿ ಸಹಗಮನ – ವರದಕ್ಷಿಣೆ – ಬಾಲ್ಯ ವಿವಾಹ ಎಲ್ಲವೂ ಇದರಿಂದಲೇ ಬಹುತೇಕ ನಿರ್ಧಾರವಾಗಿದೆ.

ಇದರಿಂದಾಗಿಯೇ ಹೆಣ್ಣಿನ ವ್ಯಕ್ತಿತ್ವ ಮತ್ತು ನಡವಳಿಕೆ ನಿರ್ಧಾರವಾಗುತ್ತದೆ.
ಆಕೆಯ ಉಡುಗೆ ತೊಡುಗೆ ದೈಹಿಕ ಚಲನೆ ಹಾವ ಭಾವ ನಿಯಂತ್ರಿಸಲ್ಪಡುತ್ತದೆ.

ವಿಶ್ವದಲ್ಲಿ ಬೆರಳೆಣಿಕೆಯಷ್ಟು ಸಮುದಾಯಗಳನ್ನು ಹೊರತು ಪಡಿಸಿದರೆ ಬಹುತೇಕ ಪುರುಷ ಪ್ರಧಾನ ಸಮಾಜವೇ ಆಗಿದೆ.
ಹೆಣ್ಣು ಹೆರುವ ಕಾರಣಕ್ಕಾಗಿಯೇ ಆಕೆ ದೈಹಿಕ ದುರ್ಬಲಳೆಂದು ಪರಿಗಣಿಸಿ ಆಕೆಗೆ ಎರಡನೇ ದರ್ಜೆಯ ನಾಗರಿಕಳಂತೆ ಕಾಣಲಾಗುತ್ತದೆ.

ಗಂಡಿನ ಮೇಲೆ ಹಣಕ್ಕಾಗಿ ಅಧಿಕಾರಕ್ಕಾಗಿ ದೌರ್ಜನ್ಯ ನಡೆದರೆ ಹೆಣ್ಣಿನ ಮೇಲೆ ಬಹುತೇಕ ಆಕೆಯೊಂದಿಗಿನ ದೈಹಿಕ ಮಿಲನಕ್ಕಾಗಿ ದೌರ್ಜನ್ಯ ನಡೆಯುತ್ತದೆ. ಅನಾಗರಿಕ ಸಮಾಜ ಬಿಡಿ ಈಗಿನ ಆಧುನಿಕ ಕಾಲದಲ್ಲೂ ಇದು ನಿರಂತರವಾಗಿ ನಡೆಯುತ್ತಲೇ ಇದೆ.

ಹಾಗೆಯೇ,
ಅಮ್ಮ ಅಕ್ಕ ತಂಗಿ ಹೆಂಡತಿ ಮಗಳು ಈ ಸಂಬಂಧಗಳಿಗೆ ಹೊರಗಿನವರಿಂದ ಯಾವುದೇ ಅವಮಾನವಾದರೂ ಅದನ್ನು ಪುರುಷ ಸಹಿಸುವುದಿಲ್ಲ. ಆ ಕಾರಣಕ್ಕಾಗಿಯೇ ಅವರುಗಳು ಮೇಲೆ ನಿಯಂತ್ರಣ ಸಾಧಿಸಿ ಅವರನ್ನು ಪ್ರೀತಿಯ ಬಂಧನದಲ್ಲಿರಿಸಿ ಶೋಷಿಸುತ್ತಾನೆ.

ಹೆಣ್ಣನ್ನು ಎಲ್ಲಾ ದೃಷ್ಟಿಯಿಂದಲೂ ಪುರುಷ ಸಮಾನ ಎಂದು ಪರಿಗಣಿಸಿದರೆ ಆಕೆಯ ದೈಹಿಕ ಭಿನ್ನತೆ ಅದಕ್ಕೆ ಸಂಪೂರ್ಣ ಬೆಂಬಲ ಕೊಡುವುದಿಲ್ಲ. ಇಲ್ಲ ಆಕೆ ದುರ್ಬಲಳು ಎಂದು ಪರಿಗಣಿಸಿದರೆ ಆಕೆಗೆ ಪೂಜನೀಯ ಸ್ಥಾನ ನೀಡಬಹುದು ಆದರೆ ಆ ಕಾರಣದಿಂದಲೇ ಆಕೆಯ ಶೋಷಣೆಗೆ ದಾರಿಯಾಗುತ್ತದೆ ಮತ್ತು ಈಗ ಆಗಿರುವುದೂ ಇದೇ.

ಮಹಿಳೆಯರ ಮುಂದಿರುವ ಬಹುದೊಡ್ಡ ವಾಸ್ತವದ ಮತ್ತು ಪ್ರಾಯೋಗಿಕ ಸವಾಲು ಇದೇ ಆಗಿದೆ.

ಆ ಕಾರಣದಿಂದಾಗಿಯೇ ಮುಖ್ಯವಾಗಿ ಭಾರತೀಯ
ಸಮಾಜದಲ್ಲಿ ಮಹಿಳೆಯರು ಪ್ರಬುದ್ಧ ಮನಸ್ಥಿತಿ ಹೊಂದದೆ ತಾನು ತನ್ನ ಗಂಡ ಮಕ್ಕಳು ಎಂಬ ಸಂಕುಚಿತ ಮನೋಭಾವಕ್ಕೆ ಶರಣಾಗಿದ್ದಾರೆ.

ಇತ್ತೀಚೆಗೆ ಒಂದಷ್ಟು ಮೇಲ್ನೋಟದ ಬದಲಾವಣೆ ಕಾಣುತ್ತಿದ್ದರೂ ಮೂಲಭೂತ ಅಂಶಗಳು ಹಾಗೇ ಉಳಿದಿದೆ. ಆದರೆ ಖಂಡಿತವಾಗಿಯೂ ಎಲ್ಲಾ ದೃಷ್ಟಿಯಿಂದ ಸಮಗ್ರವಾಗಿ ಯೋಚಿಸಿದರೆ ಮಹಿಳೆ ಸ್ವಾತಂತ್ರ್ಯ ಮತ್ತು ಸಮಾನತೆಗೆ ಅರ್ಹಳು.

ಬಹುಶಃ ಈಗಿನ ಶಿಕ್ಷಣ ಉದ್ಯೋಗ ಮಹಿಳಾ ಮೀಸಲಾತಿ ಮುಂತಾದ ಕ್ರಮಗಳು ಸರಿಯಾಗಿ ಜಾರಿಯಾದರೆ ಮುಂದಿನ ಪೀಳಿಗೆಯವರು ಸಮ ಸಮಾಜದ ಜೀವನ ನಡೆಸಬಹುದು. ಎಲ್ಲಕ್ಕಿಂತ ಮುಖ್ಯ ನಾಗರಿಕ ಪ್ರಜ್ಞೆ ಮೂಡಿದರೆ ಯಾವುದೇ ಸಂದರ್ಭದಲ್ಲಿಯೂ ಯಾರ ಮೇಲೂ ದೌರ್ಜನ್ಯ ನಡೆಯದ ಪುರುಷ ಮತ್ತು ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯ ದ ಸಮಾಜ ನಿರ್ಮಾಣವಾಗಬಹುದು.
ಹಾಗಾಗಲಿ ಎಂದು ನಿರೀಕ್ಷಿಸುತ್ತಾ …………..
ಜ್ಞಾನ ಭಿಕ್ಷಾ ಪಾದಯಾತ್ರೆ ಮಾಹಿತಿ-ದಿನಾಂಕ-7/3/2021 ಶನಿವಾರ 127 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಗದಗ ನಗರದಲ್ಲಿಯೇ ಬಸವ ತತ್ವ ಸಂಘಟನೆಗಳೊಂದಿಗೆ ಅಂತರಂಗ ಶುದ್ದಿ ಮತ್ತು ಬಹಿರಂಗ ಶುದ್ದಿ ಎಂಬ ವಿಷಯಗಳ ಕುರಿತು ‌ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ.

ಈ ಮುಖಾಂತರ ಮಾನವೀಯ ಮೌಲ್ಯಗಳ ಪುನರುತ್ಥಾನದ ರೀತಿಯ ಬಗ್ಗೆ ಚರ್ಚಿಸಲಾಯಿತು.

ದಿನಾಂಕ-8/3/2021 ಸೋಮವಾರ 128 ನೆಯ ದಿನ ಸಹ ನಮ್ಮ ಪಾದಯಾತ್ರೆ ಗದಗ ನಗರದಲ್ಲಿಯೇ ಅನಿವಾರ್ಯವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಯೋಜನೆ ಇದೆ. ವಿವಿಧ ಕಾಲೇಜುಗಳಲ್ಲಿ ಪ್ರೀತಿಯ ಬೇಡಿಕೆ ಇದೆ.

ದಿನಾಂಕ-9/3/2021 ಮಂಗಳವಾರ 129 ನೆಯ ದಿನ ಗದಗ ನಗರದಿಂದ ಸುಮಾರು 40 ಕಿಲೋಮೀಟರ್ ದೂರದ ಲಕ್ಷ್ಮೇಶ್ವರ ತಲುಪುವ ಯೋಜನೆಯು ಇದೆ.

ಆಸಕ್ತರು ಜೊತೆಯಾಗಬಹುದು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ-ವಿವೇಕಾನಂದ. ಹೆಚ್.ಕೆ.
9844013068

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: