ನನ್ನ ಹಡೆದವ್ವ ವಡ್ಡಗೆರೆ ಕದರಮ್ಮ. ಹೊಲಗದ್ದೆಗಳಲ್ಲಿ ಬೆವರು ಸುರಿಸಿದವಳು. ಯಾರೋ ಕೊಟ್ಟ ಸಿಹಿ ತಿನಿಸನ್ನು ತಿನ್ನದೆ ಸೀರೆ ಸೆರಗಿನಲ್ಲಿ ಜೋಪಾನ ಮಾಡಿ ತಂದು ನನಗೆ ತಿನ್ನಿಸಿ ನಕ್ಕವಳು…

ನನ್ನ ಹಡೆದವ್ವ ವಡ್ಡಗೆರೆ ಕದರಮ್ಮ. ಹೊಲಗದ್ದೆಗಳಲ್ಲಿ ಬೆವರು ಸುರಿಸಿದವಳು. ಯಾರೋ ಕೊಟ್ಟ ಸಿಹಿ ತಿನಿಸನ್ನು ತಿನ್ನದೆ ಸೀರೆ ಸೆರಗಿನಲ್ಲಿ ಜೋಪಾನ ಮಾಡಿ ತಂದು ನನಗೆ ತಿನ್ನಿಸಿ ನಕ್ಕವಳು…

ಬೆಂಗಳೂರು:

ಇವರು ನನ್ನ ಹಡೆದವ್ವ ವಡ್ಡಗೆರೆ ಕದರಮ್ಮ. ಹೊಲಗದ್ದೆಗಳಲ್ಲಿ ಬೆವರು ಸುರಿಸಿ ದುಡಿದವಳು. ಯಾರೋ ಕೊಟ್ಟ ಸಿಹಿ ತಿನಿಸನ್ನು ತಾನು ತಿನ್ನದೆ ಸೀರೆ ಸೆರಗಿನ ಗಂಟಿನಲ್ಲಿ ಜೋಪಾನ ಮಾಡಿ ತಂದು ನನಗೆ ತಿನ್ನಿಸಿ ನಕ್ಕವಳು. ಸೊಂಟಕ್ಕೆ ಸುತ್ತಿದ ನೆರಿಗೆ ಬಾಳೆಕಾಯಿ ಯಿಂದಲೋ, ಎಲೆಅಡಿಕೆ ಸಂಚಿಯಿಂದಲೋ ಕಾಸು ತೆಗೆದು ಕೊಟ್ಟು ನನ್ನನ್ನು ಶಾಲೆಗೆ ಕಳಿಸಿ ನನ್ನೆದೆಗೆ ಅಕ್ಷರದ ಬೆಳಕಿನ ಬೀಜ ಬಿತ್ತಿದವಳು. ಜಾನಪದ ಸಾಹಿತ್ಯದ ಗಣಿ ಇವಳು. ಕವಯರ್ತಿ ಹಾಡುಗಾರ್ತಿ ಜಾನಪದ ಕಥನಗಾರ್ತಿ. ಇಸ್ಕೂಲು ಬಾಗಿಲು ತುಳಿಯದ ವಡ್ಡಗೆರೆ ಕದರಮ್ಮ ಅವರ ಸಾಹಿತ್ಯ ಭಂಡಾರ ಮತ್ತು ಲೋಕ ಜ್ಙಾನದ ಎದುರು ನನ್ನ ಇಂಗ್ಲಿಷ್ ಸಾಹಿತ್ಯದ ಎಂ.ಎ ಪದವಿ ಮತ್ತು ಪಿಎಚ್.ಡಿ ಡಾಕ್ಟರೇಟ್ ಪದವಿ ಹಾಗೂ ನಾನು ಬರೆದಿರುವ ಪುಸ್ತಕಗಳು ಸಾಟಿಯಲ್ಲ ಅನ್ನಿಸುತ್ತಿದೆ.

2015 ನೇ ಮಾರ್ಚ್ 8 ರಂದು, ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅಲ್ಲಿನ ಕುಲಪತಿಗಳು ಮತ್ತು ಅತಿಥಿಗಳು ನನ್ನ ಅಮ್ಮನನ್ನು ಗೌರವಿಸಿದರು. ಬೆಳಕು ಬಿತ್ತಿದ ಅಮ್ಮ ನನ್ನಮ್ಮ! ಪ್ರಜಾವಾಣಿ ಪತ್ರಿಕೆಯು, ‘ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನ’ದ ಪ್ರಯುಕ್ತ 15-10-2018 ರ ಸೋಮವಾರ, ಜಾನಪದ ಹಾಡುಗಾರ್ತಿ- ಕಲಾವಿದೆಯಾದ ನನ್ನ ಅಮ್ಮ ವಡ್ಡಗೆರೆ ಕದರಮ್ಮ ಅವರನ್ನು ಕುರಿತು ‘ಸಾಧಕಿಯರಿಗೆ ಸಲಾಂ’ ಎಂಬ ವಿಶೇಷ ಪುಟವನ್ನು ರೂಪಿಸಿ ವ್ಯಕ್ತಿಚಿತ್ರ ಲೇಖನ ಪ್ರಕಟಿಸಿತ್ತು.

1) ಜಾನಪದ ತಜ್ಞ – ನಾಡೋಜ ಎಚ್.ಎಲ್.ನಾಗೇಗೌಡ ಜನ್ಮ ಶತಮಾನೋತ್ಸವ ಜಾನಪದ ಲೋಕ ಪ್ರಶಸ್ತಿ, 2) ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ (ತುಮಕೂರು ವಿವಿ), 3) ವೀಚಿ ಸಾಹಿತ್ಯ ಪ್ರಶಸ್ತಿ 4) ಬೆಂಗಳೂರು ಸೃಷ್ಟಿಕಲಾ ಮಂದಿರದ ಸೃಷ್ಟಿ ಕಲಾ ಗೌರವ ಪುರಸ್ಕಾರ – 2018 ಮುಂತಾದ ಪ್ರಶಸ್ತಿ ಗೌರವಗಳನ್ನು ಪಡೆದಿರುವ ಜಾನಪದ ಹಾಡುಗಾರ್ತಿ- ಕಲಾವಿದೆ ವಡ್ಡಗೆರೆ ಕದರಮ್ಮ ಅವರ ಸಾಧನೆಯನ್ನು ಗುರುತಿಸಿರುವ ಕರ್ನಾಟಕ ಜಾನಪದ ಪರಿಷತ್ತು ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ.

ಅಕ್ಷರ ಕಲಿಯದೆಯೂ ಕರ್ನಾಟಕದ ಎರಡು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿ (ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಮತ್ತು ತುಮಕೂರು ವಿಶ್ವವಿದ್ಯಾಲಯ) ವಿದ್ಯಾರ್ಥಿಗಳಿಗೆ ವಡ್ಡಗೆರೆ ಕದರಮ್ಮ ಹಾಡಿರುವ “ವಡ್ಡಗೆರೆ ನಾಗಮ್ಮ; ಮಹಾಸತಿ ಕಾವ್ಯ” ಪಠ್ಯ ಪುಸ್ತಕವಾಗಿರುತ್ತದೆ. ಮಾನವ ಕುಲಶಾಸ್ತ್ರೀಯ ಅಧ್ಯಯನಕಾರರು, ಜನಾಂಗೀಯ ಅಧ್ಯಯನಕಾರರು, ಸಮುದಾಯ ಅಧ್ಯಯನಕಾರರು, ಸಾಮಾಜಿಕ ಕಾರ್ಯಕರ್ತರು ಮುಂತಾದವರು ನನ್ನ ಅಮ್ಮ ವಡ್ಡಗೆರೆ ಕದರಮ್ಮ ಮತ್ತು ಅವರ ಗೆಳತಿಯರಿಂದ ಜಾನಪದ ಕಾವ್ಯ, ಪದ-ಪುರಾಣಗಳನ್ನು ಹಾಡಿಸುವುದು ಹಾಗೂ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವುದು ನಮ್ಮ ಮನೆಯ ಸಾಮಾನ್ಯ ಸಂಗತಿಯಾಗಿದೆ.

ಇಂತಹ ಜಾನಪದ ಹಾಡುಗಾರ್ತಿ- ಕಲಾವಿದೆ ವಡ್ಡಗೆರೆ ಕದರಮ್ಮ ಅವರಿಗೆ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಮಹಾಕ್ಷೇತ್ರದಲ್ಲಿ ದಿನಾಂಕ : 23-09-2018 ರ ಭಾನುವಾರ ಬೆಳಗ್ಗೆ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಜಾನಪದ ಕಲಾಮೇಳದಲ್ಲಿ, ಕರ್ನಾಟಕ ಜಾನಪದ ಪರಿಷತ್ತಿನ ಸಂಸ್ಥಾಪಕರಾದ ಜಾನಪದ ತಜ್ಞ – ನಾಡೋಜ ಡಾ.ಎಚ್.ಎಲ್.ನಾಗೇಗೌಡ ಪ್ರಶಸ್ತಿ ಮತ್ತು 10.000 ರೂಪಾಯಿ ನಗದು ಪುರಸ್ಕಾರ ನೀಡಿ ಗೌರವಿಸಿದೆ.

ನನ್ನ ಅಮ್ಮ ತನ್ನ ಸಹಹಾಡುಗಾರ್ತಿ ಕಲಾವಿದೆಯರೊಂದಿಗೆ, ‘ಮಹಾಸತಿ ವಡ್ಡಗೆರೆ ನಾಗಮ್ಮನ ಕಾವ್ಯ’ವನ್ನು ಹರಕೆ ಹೊತ್ತ ಉಪಾಸಕರ ಮನೆಗಳಿಗೆ ಹೋಗಿ ಹಾಡಿಬರುವ ಕಾಯಕವನ್ನು ಕಳೆದ ಐವತ್ತು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ತುಮಕೂರು ಜಿಲ್ಲೆಯ ಕವಿ-ಗಾಯಕರ ಪೈಕಿ ವಡ್ಡಗೆರೆ ಕದರಮ್ಮನವರಿಗೆ ಪ್ರಧಾನ ಸ್ಥಾನವಿದೆ. ಜಾನಪದ ಕುರಿತ ಇವರ ಅರಿವು ಮತ್ತು ಅಮೂಲ್ಯ ಮಾಹಿತಿಗಳನ್ನು ನಾಡಿನ ಅನೇಕ ಸಂಶೋಧಕರು ತಮ್ಮ ಗ್ರಂಥಗಳಲ್ಲಿ ಬಳಸಿಕೊಂಡಿದ್ದಾರೆ. ಅನೇಕ ಸಂಶೋಧಕರು ಪಿಎಚ್.ಡಿ ಪದವಿಗಳನ್ನೂ ಪಡೆದುಕೊಂಡಿದ್ದಾರೆ. ಅಂತಹ ಕೆಲವು ಗ್ರಂಥಗಳಲ್ಲಿ ವಡ್ಡಗೆರೆ ಗ್ರಾಮದ ನಿವೃತ್ತ ಐ.ಎ.ಎಸ್. ಅಧಿಕಾರಿ ವಿ.ಡಿ.ವೀರಕ್ಯಾತಯ್ಯ ಬರೆದಿರುವ ಕುಂಚಿಟಿಗರ ಜನಾಂಗ- ಇತಿಹಾಸ ಹಾಗೂ ಸಂಪ್ರದಾಯಗಳು (1994), ಎಂ.ವೀರಕ್ಯಾತಯ್ಯ ಬರೆದಿರುವ ‘ವಿಜಯೀ ವೀರಕೇತುರಾಯ’ (ನಾಟಕ 1999), ಎಂ.ಹೆಚ್. ನಾಗರಾಜು ಅವರ ಸಂಶೋಧನಾ ಕೃತಿ ಕುಂಚಿಟಿಗರ ಸಾಂಸ್ಕೃತಿಕ ಇತಿಹಾಸ (2003), ಡಾ.ರಾಜಣ್ಣ ಹುಣಿಸೇಪಾಳ್ಯ ಅವರ ಮಹಾಸತಿ ಶಿವಶರಣೆ ವೀರನಾಗಮ್ಮದೇವಿ (1996), ಡಾ.ಓ.ನಾಗರಾಜು ಅವರ ಪಿಎಚ್.ಡಿ ಸಂಶೋಧನಾ ಪ್ರಬಂಧ ತುಮಕೂರು ಜಿಲ್ಲೆಯ ಗ್ರಾಮದೇವತೆಗಳು: ಒಂದು ಅಧ್ಯಯನ (2007) ಹಾಗೂ ವಡ್ಡಗೆರೆ ನಾಗರಾಜಯ್ಯ ಸಂಪಾದಿಸಿರುವ ‘ವಡ್ಡಗೆರೆ ನಾಗಮ್ಮ: ಮಹಾಸತಿ ಕಾವ್ಯ’ (2010) ಮುಂತಾದ ಕೃತಿಗಳು ಪ್ರಮುಖವಾಗಿವೆ.

ವಡ್ಡಗೆರೆ ಕದರಮ್ಮ ಅವರು ರಿಯಲ್ ಚಾಲೆಂಜರ್ಸ್ ಟೀಮ್ ನವರಿಗಾಗಿ ಈಶ್ವರ್ ಗುಬ್ಬಿ ನಿರ್ದೇಶಿಸಿ, ಶ್ರೀ ರಾಘವ್ ನಿರ್ಮಿಸಿರುವ ‘‘ಮುಗ್ಧ’’ ಸಾಕ್ಷ್ಯ ಚಿತ್ರದಲ್ಲಿ ಮುಗ್ದ ಯುವಕನೊಬ್ಬನ ತಾಯಿಯ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ. . ಪ್ರಸ್ತುತ ಜಾನಪದ ಗಾಯಕಿಯರಾದ ವಡ್ಡಗೆರೆ ಕದರಮ್ಮ(75) ಹಾಗೂ ವಡ್ಡಗೆರೆ ಮುದ್ದನಾಗಮ್ಮ(72) ಇವರು ವಡ್ಡಗೆರೆ ನಾಗಮ್ಮನ ಕಥಾಕಾವ್ಯವನ್ನು ಮೂಲಧಾಟಿಯಲ್ಲಿ ನಿರೂಪಿಸುವ ಅಸಲಿ ಕವಯಿತ್ರಿ-ಕಲಾವಿದರಾಗಿದ್ದಾರೆ. ವಡ್ಡಗೆರೆ ನಾಗಮ್ಮನ ಪದಗಳು, ಗಂಗೆ-ಗೌರಿ ಕಾವ್ಯ, ಬಿಲ್ಲಾಳರಾಯ-ಗೊಲ್ಲಾಳರಾಯನ ಪದ, ಬೆಟ್ಟದ ಮದ್ದೆಮ್ಮನ ಪದ, ಗುಣಸಾಗರಿ ಕಾವ್ಯ, ಕರಿಭಂಟನ ಪದ, ತತ್ವಪದ, ಆಂಜನೇಯನ ಪದ, ಚಂದ್ರಮನ ಪದ, ಜಾಂಬವರ ಪದ, ಮಾರಮ್ಮನ ಪದ, ಕರಿಯಮ್ಮನ ಪದ, ಆದಿಜಾಂಬವ ಪುರಾಣ, ಹೊಸಗೆ ಪದ, ಮದುವೆ-ಸೋಬಾನೆ ಪದಗಳು, ಹಸೆ ಪದಗಳು, ಸುಗ್ಗಿ ಪದಗಳು, ಲಾಲಿ ಹಾಡುಗಳು, ಗಂಗಭಾರತ ಕಾವ್ಯ ಮುಂತಾದ ಅನೇಕ ಜಾನಪದ ಹಾಡುಗಬ್ಬಗಳನ್ನು ಹಾಡುವಲ್ಲಿ ಸುತ್ತಮುತ್ತಲ ಊರುಗಳಲ್ಲಿ ಹೆಸರಾಗಿದ್ದಾರೆ. ಇವರಿಗೆ ಹಾಡುಗಾರಿಕೆ ಕಲಿಸಿಕೊಟ್ಟ ಕೆಂಪನಾಗಮ್ಮಜ್ಜಿ ಎಂಬ ಮುಖ್ಯ ಕಲಾವಿದೆಯು ನಿಧನರಾದ ಬಳಿಕ, ವಡ್ಡಗೆರೆ ಕದರಮ್ಮನವರು ಮುಮ್ಮೇಳದ ಮುಖ್ಯ ಕವಯಿತ್ರಿ-ಹಾಡುಗಾರ್ತಿಯಾಗಿ ತನ್ನ ತಂಡವನ್ನು ಮುನ್ನಡೆಸುವುದರೊಂದಿಗೆ ಹೊಸ ತಲೆಮಾರಿನವರಿಗೆ ಜಾನಪದ ಹಾಡುಗಳನ್ನು ಕಲಿಸಿಕೊಡುತ್ತಿದ್ದಾರೆ. ಪ್ರಸ್ತುತ ವಡ್ಡಗೆರೆ ಗ್ರಾಮದಲ್ಲಿ ಜಾನಪದ ಕವಯಿತ್ರಿ-ಗಾಯಕಿಯರಾದ ವಡ್ಡಗೆರೆ ಕದರಮ್ಮ, ವಡ್ಡಗೆರೆ ಮುದ್ದನಾಗಮ್ಮ, ಲಕ್ಷ್ಮಮ್ಮ , ಲಕ್ಕವ್ವ ಮತ್ತು ಸಂಜೀವಮ್ಮ ಇವರು ಜಾನಪದ ವಕ್ತಾರರಾಗಿ ವಡ್ಡಗೆರೆ ಗ್ರಾಮ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಾ ಮೂಲ ಜಾನಪದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

ಲೇಖನ- ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ
8722724174

What’s your Reaction?
+1
0
+1
0
+1
0
+1
0
+1
0
+1
0
+1
0
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: