ಚಿತ್ರದುರ್ಗ ಜಿಲ್ಲೆ ಜನ ಕೇಳಿದ್ದು ಸರ್ಕಾರಿ ಮೆಡಿಕಲ್ ಕಾಲೇಜ್, ಯಡಿಯೂರಪ್ಪ ಕೊಟ್ಟಿದ್ದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜ್….

ಚಿತ್ರದುರ್ಗ ಜಿಲ್ಲೆ ಜನ ಕೇಳಿದ್ದು ಸರ್ಕಾರಿ ಮೆಡಿಕಲ್ ಕಾಲೇಜ್, ಯಡಿಯೂರಪ್ಪ ಕೊಟ್ಟಿದ್ದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜ್….

ಚಿತ್ರದುರ್ಗ:

ಹಿಂದುಳಿದ ಚಿತ್ರದುರ್ಗ ಜಿಲ್ಲೆ ಜನ ಕೇಳಿದ್ದು ಸರ್ಕಾರಿ ಮೆಡಿಕಲ್ ಕಾಲೇಜ್, ಆದರೆ ಯಡಿಯೂರಪ್ಪ ಕೊಟ್ಟಿದ್ದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜ್, ಸರ್ಕಾರ ದ್ವಂದ್ವದ ತೀರ್ಮಾನ ಪಡೆಯುವ ಮೂಲಕ ಜಿಲ್ಲೆಯ ಜನರಿಗೆ ಕಾಲೇಜ್ ಕೊಟ್ಟಂಗೂ ಆಗಬೇಕು, ಕೊಡದಂಗೂ ಆಗಬೇಕು ಎನ್ನುವಂತಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಯಾರ ಪ್ರಭಾವಕ್ಕೆ ಮಣಿದರೋ ಗೊತ್ತಿಲ್ಲ, ಪೂರ್ಣ ಪ್ರಮಾಣದ ಸರ್ಕಾರಿ ಮೆಡಿಕಲ್ ಕಾಲೇಜ್ ಕನಸು ಸಂಪೂರ್ಣ ಭಗ್ನಗೊಂಡಿದೆ. ಚಿತ್ರದುರ್ಗ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಸಿಐಎಂಎಸ್-ಸಿಮ್ಸ್) ಬಂದೇ ಬಿಟ್ಟಿತು ಎನ್ನುವಂತೆ ಜಿಲ್ಲೆಯ ಬಿಜೆಪಿ ಶಾಸಕರು, ಬಿಜೆಪಿ ಪಕ್ಷದವರು ದಿನಕ್ಕೊಂದು ಹೇಳಿಕೆ ನೀಡಿ ಜನರನ್ನು ತಣ್ಣಗೆ ಮಾಡುತ್ತಿದ್ದರು. ಆದರೆ ಸರ್ಕಾರ ಈಗ ಕೈಗೊಂಡಿರುವ ತೀರ್ಮಾನದಿಂದ ಹಿಂದುಳಿದ ಜಿಲ್ಲೆಗೆ ಯಾವುದೇ ಪ್ರಯೋಜನವಾಗುವುದಿಲ್ಲ, ಬದಲಿಗೆ ಇಡೀ ವ್ಯವಸ್ಥೆ ಖಾಸಗಿ ಕೈಗೆ ಕೊಟ್ಟು ಜಿಲ್ಲೆಯ ಬಡ ಜನರನ್ನ ಹಣಿಯುವ ಕಾರ್ಯ ಮಾಡಿದಂತಾಗುತ್ತದೆ. ಇಡೀ ಆಡಳಿತ ಖಾಸಗಿಯವರ ಕಪಿಮುಷ್ಠಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಹಿಂದುಳಿದ ಜಿಲ್ಲೆ ಬಗ್ಗೆ ಅನುಕಂಪ ಬೇಡ, ಮೆಡಿಕಲ್ ಕಾಲೇಜ್ ಆರಂಭಿಸಿ ರಾಜ್ಯ ಸರ್ಕಾರ ತನ್ನ ಕರ್ತವ್ಯ ಪಾಲಿಸಬೇಕು.

ಈಡೇರದ ಬೇಡಿಕೆ: 1952ರಲ್ಲಿ ಆರಂಭವಾದ ಜಿಲ್ಲಾ ಆಸ್ಪತ್ರೆ 500 ಹಾಸಿಗೆ ಸಾಮರ್ಥ್ಯ ಹೊಂದಿದೆ. ವೈದ್ಯಕೀಯ ಕಾಲೇಜ್ ಮಂಜೂರಾತಿಗೆ ಅತ್ಯಂತ ಸೂಕ್ತ ಪ್ರದೇಶವಾಗಿದೆ. ಹಿಂದುಳಿದ ಜಿಲ್ಲೆಗೆ ಸಾಮಾಜಿಕ ನ್ಯಾಯ ದೊರೆಯಬೇಕಿದ್ದರೆ ಕೂಡಲೇ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜ್ ಮಂಜೂರು ಮಾಡುವ ಬದಲಿಗೆ ಪೂರ್ಣ ಪ್ರಮಾಣದ ಸರ್ಕಾರಿ ಮೆಡಿಕಲ್ ಕಾಲೇಜ್ ಬೇಕಾಗಿದೆ.  ಹಲವು ದಶಕಗಳ ಬೇಡಿಕೆ ಇದಾಗಿದ್ದು ರಾಜ್ಯ ಸರ್ಕಾರ ಗಂಭೀರ ಚಿಂತನೆ ಮಾಡಿ ಕಾಲೇಜ್ ನೀಡಬೇಕು. ಜಿಲ್ಲಾಸ್ಪತ್ರೆಯನ್ನು 1000 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಬೇಕು ಎನ್ನುವ ಪ್ರಸ್ತಾವನೆಯೂ ನೆನೆಗುದಿಗೆ ಬಿದ್ದಿದೆ.
ಆಸ್ಪತ್ರೆಯಲ್ಲಿ ರೋಗಿಗಳ ಒತ್ತಡ ಹೆಚ್ಚಾಗಿದೆ. ಹೊರರೋಗಿಗಳ ವಿಭಾಗಕ್ಕೆ ಪ್ರತಿದಿನ ಕನಿಷ್ಠ ಒಂದೂಕಾಲು ಸಾವಿರ ರೋಗಿಗಳು ತಪಾಸಣೆಗೆ ಆಗಮಿಸುತ್ತಾರೆ. ಪ್ರತಿ ತಿಂಗಳು ಕನಿಷ್ಠ 500 ರಿಂದ 600 ಹೆರಿಗೆಯಾಗುತ್ತವೆ. ಒಬ್ಬ ಮಕ್ಕಳ ತಜ್ಞ ದಿನಕ್ಕೆ ೩೦೦ ರಿಂದ ೪೦೦ ಮಕ್ಕಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ಇದೆ. ಇಂಥ ಒತ್ತಡ ಮತ್ತು ಕೊರತೆ ನೀಗಿಸಲು ವೈದ್ಯಕೀಯ ಕಾಲೇಜು ಪೂರಕವಾಗಿ ನೆರವಾಗಲಿದೆ.
ಮಂಜೂರು ಮಾಡಲಾಗಿತ್ತು- ಕಳೆದ ಬಿ.ಜಿ.ಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್‌ರವರು ರಾಜ್ಯದಲ್ಲಿ ಕೊಪ್ಪಳ, ಗದಗ, ಚಾಮರಾಜನಗರ, ಚಿತ್ರದುರ್ಗ, ಮಡಿಕೇರಿ, ಹಾವೇರಿ ಹಾಗೂ ತುಮಕೂರುಗಳಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸಲು ಮಂಜೂರಾತಿ ನೀಡಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯನವರು ಅತ್ಯಂತ ಹಿಂದುಳಿದ ಚಿತ್ರದುರ್ಗ ಜಿಲ್ಲೆಗೆ ಮೋಸ ಮಾಡಿದರು. ಸಿದ್ದರಾಮಯ್ಯನವರ ಆಡಳಿತದಲ್ಲಿ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜ್ ಕೈತಪ್ಪಿತು.
ಭೂಮಿ-ನಗರದ ಹೃದಯ ಭಾಗದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಒಟ್ಟು 23 ಎಕರೆ ಭೂಮಿ ಇದೆ. ಇದರಲ್ಲಿ 14.20 ಎಕರೆ ಜಾಗವನ್ನು ಮೆಡಿಕಲ್ ಕಾಲೇಜ್ ಗೆ ಮೀಸಲಿಟ್ಟು ಚಿತ್ರದುರ್ಗ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಸಿಐಎಂಎಸ್-ಸಿಮ್ಸ್) ಸಂಸ್ಥೆ ನೋಂದಣಿ ಮಾಡಿ ಅಷ್ಟು ಭೂಮಿಯನ್ನು ನೋಂದಣಿ ಮಾಡಿಕೊಡಲಾಗಿದೆ. ಈಗಾಗಲೆ ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ) ಮತ್ತು ರಾಜೀವ್ ಗಾಂಧಿ ವಿಶ್ವ ವಿದ್ಯಾಲಯಗಳು ಪ್ರತ್ಯೇಕವಾಗಿ ಭೇಟಿ ನೀಡಿ ಜಿಲ್ಲಾಸ್ಪತ್ರೆಯ ಮೂಲ ಸೌಕರ್ಯ, 450 ಹಾಸಿಗೆಗಳು, ಶಸ್ತ್ರ ಚಿಕಿತ್ಸೆ ನಡೆಯುತ್ತಿರುವ ಪ್ರಮಾಣ ಮತ್ತಿತರ ಸೇವೆಗಳು, ಸಿಮ್ಸ್ ಗೆ ನೀಡಿರುವ ಖಾಲಿ ಜಾಗ, ಇತರೆ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ಮೆಡಿಕಲ್ ಕಾಲೇಜ್ ಆರಂಭಕ್ಕೆ ಹಸಿರು ನಿಶಾನೆ ತೋರಿಸಿದ್ದರು. 

ರಾಜೀವ್ ಗಾಂಧೀ ಆರೋಗ್ಯ ವಿವಿ ಸಮಿತಿ ಸದಸ್ಯರು ಈ ಹಿಂದೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಎಂಸಿಐ ನಿಯಮಾವಳಿ ಪ್ರಕಾರ ನಗರ ವ್ಯಾಪ್ತಿಯಿಂದ 4 ಕಿಲೋ ಮೀಟರ್ ಒಳಗಡೆ ವೈದ್ಯಕೀಯ ಕಾಲೇಜ್ ತೆರೆಯಬೇಕು. ಹಾಲಿ 24 ಎಕರೆ 20 ಗುಂಟೆ ಜಾಗವಿದ್ದು ಇದರಲ್ಲಿ 14 ಎಕರೆ ಜಾಗವನ್ನು ಎಂಸಿಐಗೆ ನೋಂದಣಿ ಮಾಡಿಕೊಡಲಾಗಿದೆ. ಇದೆಲ್ಲ ಮುಂದೆ ಖಾಸಗಿಯವರು ಪ್ರಭುತ್ವ ಸ್ಥಾಪಿಸಲು ಮುಖ್ಯಮಂತ್ರಿಗಳು ಅನುಕೂಲ ಮಾಡಿಕೊಟ್ಟಿರುವ ಸಾಧ್ಯತೆ ಕಂಡು ಬರುತ್ತಿದೆ. ಮೆಡಿಕಲ್ ಕಾಲೇಜ್ ಹೋರಾಟ ಸಮಿತಿಯವರು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಕಾಲೇಜ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿ ಪೂರ್ಣ ಪ್ರಮಾಣದ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಿಸಬೇಕೆಂದು ಹೋರಾಟ ಮಾಡಿ ನ್ಯಾಯ ಪಡೆಯಬೇಕಿದೆ. ವರದಿ-ಹರಿಯಬ್ಬೆ ಹೆಂಜಾರಪ್ಪ.

What’s your Reaction?
+1
0
+1
0
+1
0
+1
0
+1
0
+1
0
+1
1
Chandravalli Ad Space

ನಿಮ್ಮ ಜಾಹೀರಾತು ನಮ್ಮ ನ್ಯೂಸ್ ಚಾನೆಲ್ ನಲ್ಲಿ ನೀಡಬೆಕೆ? ಈ ಕೇಳಗಿನ ಲಿಂಕ್ ಒತ್ತಿ ನಮ್ಮನ್ನು ಸಂಪರ್ಕಿಸಿ

Leave a Reply

Open chat
ಸಂಪರ್ಕಿಸಿ
%d bloggers like this: