ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ, ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ನಾಲ್ವರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಆರೋಪಿಗಳು ತಮ್ಮ ಪಾದಗಳ ಅಡಿಯಲ್ಲಿ ಹಾಗೂ ಅಕ್ಕಪಕ್ಕದಲ್ಲಿ ಕಪ್ಪು ಟೇಪ್ ಬಳಸಿ ಚಿನ್ನದ ಬಾರ್ಗಳನ್ನು ಗಟ್ಟಿಯಾಗಿ ಕಟ್ಟುಕೊಂಡು ವಿಮಾನ ನಿಲ್ದಾಣದಿಂದ ಹೊರಡಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.
ದುಬೈನಿಂದ ಬಂದಿದ್ದ ಗ್ಯಾಂಗ್: ಚೆನ್ನೈನ ವ್ಯಾಸರ್ಪಾಡಿ ಮೂಲದ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷ ಸೇರಿದಂತೆ ಒಟ್ಟು ನಾಲ್ವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.
ಆರೋಪಿಗಳನ್ನು ರಂಜಾನ್ ಬೇಗಂ ಸಿರಾಜುದ್ದೀನ್, ನಸ್ರಿನ್ ಬಾನು ಸಿರಾಜುದ್ದೀನ್, ಹೈರುನ್ ಫಾತಿಮಾ ಸಿರಾಜುದ್ದೀನ್ ಮತ್ತು ಅಶಾರುದ್ದೀನ್ ಚೆಲ್ಲದುರೈ ಎಂದು ಗುರುತಿಸಲಾಗಿದೆ.
ಇವರಲ್ಲಿ ನಸ್ರಿನ್ ಹಾಗೂ ಹೈರುನ್ ಸಹೋದರಿಯರಾಗಿದ್ದು, ಉಳಿದವರು ಸಂಬಂಧಿಕರಾಗಿದ್ದಾರೆ. ದುಬೈನಿಂದ ಆಗಮಿಸಿದ್ದ ಈ ತಂಡವು ಒಟ್ಟು 28 ಚಿನ್ನದ ಬಾರ್ಗಳನ್ನು ಕದ್ದುಮುಚ್ಚಿ ಸಾಗಿಸುತ್ತಿತ್ತು.
ಅಂದಾಜು 2.6 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ವಶ: ಕಸ್ಟಮ್ಸ್ ಅಧಿಕಾರಿಗಳ ಗುಪ್ತಚರ ಮಾಹಿತಿ ಮತ್ತು ಕರಾರುವಾಕ್ ಪ್ರೊಫೈಲಿಂಗ್ ಆಧಾರದ ಮೇಲೆ ಟರ್ಮಿನಲ್ 2ರ ನಿರ್ಗಮನ ದ್ವಾರದಲ್ಲಿ ಈ ತಂಡವನ್ನು ತಡೆದು ತೀವ್ರ ತಪಾಸಣೆ ನಡೆಸಲಾಗಿದೆ.
ಈ ವೇಳೆ ಇವರು ಪಾದಗಳ ಅಡಿಯಲ್ಲಿ ಬಚ್ಚಿಟ್ಟಿದ್ದ ಸುಮಾರು 1.6 ಕೆಜಿ ತೂಕದ 28 ಚಿನ್ನದ ಬಾರ್ಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ ಅಂದಾಜು 2.6 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಚಿನ್ನದ ಜೊತೆಗೆ 13 ನವೀಕರಿಸಿದ ಮೊಬೈಲ್ ಫೋನ್ಗಳು ಮತ್ತು 8 ಲ್ಯಾಪ್ಟಾಪ್ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.
ತನಿಖೆ ಮುಂದುವರಿಕೆ: ವಿಚಾರಣೆ ವೇಳೆ ಆರೋಪಿಗಳು ಅಧಿಕಾರಿಗಳೊಂದಿಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. ತಪಾಸಣೆ ವೇಳೆ ಕೆಲ ಚಿನ್ನದ ಬಾರ್ಗಳು ಟ್ರಾಲಿಗಳ ಮೇಲೂ ಪತ್ತೆಯಾಗಿವೆ. ಈ ಪ್ರಕರಣದ ಕುರಿತು ಕಸ್ಟಮ್ಸ್ ಕಾಯ್ದೆ 1962ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಈ ಅಕ್ರಮ ಸಾಗಣೆ ಜಾಲದ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯೇ ಎಂಬುದರ ಕುರಿತು ತೀವ್ರ ತನಿಖೆ ಮುಂದುವರಿಸಿದ್ದಾರೆ.




