ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿಗದಿತ ಸರ್ಕಾರಿ ಕೆಲಸದ ಅವಧಿ ಮುಗಿದ ನಂತರವೂ, ರಾತ್ರಿ ವೇಳೆ ಕಛೇರಿಯ ಅರ್ಧ ಬಾಗಿಲು ಮುಚ್ಚಿ ರಹಸ್ಯವಾಗಿ ಕೆಲಸ ಮಾಡುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶ ಹಾಗೂ ಸಂಶಯಕ್ಕೆ ಕಾರಣವಾಗಿದೆ.
ಹಗಲು ಹೊತ್ತಿನಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡದ ಸಿಬ್ಬಂದಿ, ರಾತ್ರಿ 7.30 ರಿಂದ 8.30 ರ ಅವಧಿಯಲ್ಲಿ ಕಛೇರಿಯೊಳಗೆ ಏನು ಮಾಡುತ್ತಿದ್ದಾರೆ? ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ನಡೆಸಲಾಗುತ್ತಿರುವ ಈ ರಾತ್ರಿ ಕಸರತ್ತಿನ ಹಿಂದೆ ಯಾವ ಕಳ್ಳ ವ್ಯವಹಾರ ಅಡಗಿದೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಮೂಲಸೌಕರ್ಯಗಳ ಕೊರತೆ – ಸಾರ್ವಜನಿಕರಿಗೆ ಉಡಾಫೆ ಉತ್ತರ!:
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಕುಡಿಯುವ ನೀರಿನ ಅಭಾವ, ಕಳಪೆ ರಸ್ತೆಗಳು, ಬೀದಿ ದೀಪಗಳ ಕೊರತೆ ಮತ್ತು ಉದ್ಯೋಗಾವಕಾಶಗಳ ಕೊರತೆಯಂತಹ ಬಹುಮುಖಿ ಸಮಸ್ಯೆಗಳನ್ನು ಎದುರಿಸುತ್ತಿವೆ. ಗ್ರಾಮಗಳಲ್ಲಿ ಜನರು ಮನೆ ಕಟ್ಟಿ 40-50 ವರ್ಷಗಳು ಕಳೆದರೂ ಇಂದಿಗೂ ಸರಿಯಾದ ಖಾತೆಗಳೇ ಸಿಕ್ಕಿಲ್ಲ. ಗ್ರಾಮೀಣಾಭಿವೃದ್ಧಿಗಾಗಿ ಸರ್ಕಾರ ನೂರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದರೂ, ಸ್ಥಳೀಯ ಸಮಸ್ಯೆಗಳ ಬಗ್ಗೆ ಕೇಳಲು ಬರುವ ಜನಸಾಮಾನ್ಯರಿಗೆ ಇಲ್ಲಿನ ಅಧಿಕಾರಿಗಳು ಉಡಾಫೆ ಉತ್ತರ ನೀಡಿ ಸಾಗಹಾಕುತ್ತಿದ್ದಾರೆ ಎಂದು ಗ್ರಾಮದ ಯುವ ಮುಖಂಡ ಮೋಹನ್ ಆರೋಪಿಸಿದ್ದಾರೆ. ಹಗಲಿನಲ್ಲಿ ಜನರನ್ನು ಅಲೆದಾಡಿಸುವ ಅಧಿಕಾರಿಗಳು, ರಾತ್ರಿ ವೇಳೆ ತಮಗೆ ಬೇಕಾದ ಕಡತಗಳನ್ನು (ಫೈಲ್‌ಗಳು) ತೆಗೆದು ಅಕ್ರಮ ವ್ಯವಹಾರ ನಡೆಸಲು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಅವರ ನೇರ ಆಪಾದನೆಯಾಗಿದೆ.
ಬೀದಿ ದೀಪ ತಿರುಗಿಸಿ ರಹಸ್ಯ ಕಾರ್ಯಾಚರಣೆ?:
ಗ್ರಾಮ ಪಂಚಾಯಿತಿ ಕಛೇರಿಯ ಮುಂದೆ ಕಂಬದಲ್ಲಿದ್ದ ವಿದ್ಯುತ್ ದೀಪ ಉರಿಯುತ್ತಿಲ್ಲ ಎಂದು ಎರಡು ತಿಂಗಳ ಹಿಂದೆ 'ಪ್ರಜಾಪ್ರಗತಿ' ದಿನಪತ್ರಿಕೆಯಲ್ಲಿ ವರದಿ ಪ್ರಕಟವಾದಾಗ ಅಧಿಕಾರಿಗಳು ದೀಪ ಅಳವಡಿಸಿದ್ದರು. ಆದರೆ ಈಗ ಕಳ್ಳ ವ್ಯವಹಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆ ದೀಪವನ್ನು ಪಕ್ಕಕ್ಕೆ ತಿರುಗಿಸಿಡಲಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ರಾತ್ರಿ ವೇಳೆ ಪಂಚಾಯಿತಿಯ ಅರ್ಧ ಬಾಗಿಲು ತೆರೆದಿರುವುದನ್ನು ಕಂಡು, ಯಾರಾದರೂ ಕಳ್ಳರು ದಾಖಲೆಗಳನ್ನು ಕದಿಯಲು ಬಂದಿದ್ದಾರಾ ಎಂದು ಗ್ರಾಮಸ್ಥರು ಗಾಬರಿಯಿಂದ ನೋಡಲು ಹೋದಾಗ ಒಳಗೆ ಸಿಬ್ಬಂದಿಯೇ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪಂಚಾಯಿತಿ ಆಡಳಿತ ಅಧಿಕಾರಿಗಳಿಗೆ ಕರೆ ಮಾಡಿದರೆ, ಅವರು ಕರೆ ಸ್ವೀಕರಿಸದೆ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.
"ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದ ತಕ್ಷಣ ಜನಸಾಮಾನ್ಯರಿಗೆ ಸಮಸ್ಯೆಯಾಗಬಾರದು ಎಂದು ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಿಸಿದೆ. ಆದರೆ ಹಾಡೋನಹಳ್ಳಿ ಪಂಚಾಯಿತಿಯಲ್ಲಿ ಸಮಸ್ಯೆಗಳ ಬಗ್ಗೆ ಮಾಹಿತಿ ಕೇಳಲು ಹೋದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ರಾತ್ರಿಯ ಸಮಯದಲ್ಲಿ ಯಾರಿಗೂ ತಿಳಿಯದಂತೆ ಗುಪ್ತವಾಗಿ ಕಛೇರಿ ತೆರೆದು ಮಾಡುವ ಕೆಲಸವನ್ನು ನೋಡಿದರೆ, ಪಂಚಾಯಿತಿಯ ಪ್ರಮುಖ ದಾಖಲೆಗಳನ್ನೇ ಕದಿಯುತ್ತಿರುವಂತೆ ಅಥವಾ ತಿದ್ದುತ್ತಿರುವಂತೆ ಕಾಣುತ್ತದೆ. ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು."
ಆನಂದ್ ಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ.
ಸಾರ್ವಜನಿಕರ ಆಗ್ರಹ:
ಸ್ಥಳೀಯ ಸಂಸ್ಥೆಯಾಗಿ ಹಳ್ಳಿಗಳ ಉದ್ದಾರಕ್ಕೆ ಶ್ರಮಿಸಬೇಕಾದ ಪಂಚಾಯಿತಿಯು ಅಕ್ರಮಗಳ ಅಡ್ಡೆಯಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಈ ಕೂಡಲೇ ಸಂಬಂಧಪಟ್ಟ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ತೀವ್ರ ಒತ್ತಾಯ ಹತ್ತಿಕ್ಕಿದ್ದಾರೆ.



