ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದರ ಹಿಂದೆ ವರದಕ್ಷತೆ ಕಿರುಕುಳ, ಲವ್ ಜಿಹಾದ್ ಹಾಗೂ ಮತಾಂತರದ ಒತ್ತಡವಿತ್ತೆಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಹಿರಿಯೂರು ನಗದಲ್ಲಿ ವಾಸವಿದ್ದ ಇಮ್ರಾನ್ ಹಾಗೂ ಆಶಾ ಕಳೆದ ಮೂರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಮುದ್ದಾದ ಮಗುವೂ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪತಿ ಇಮ್ರಾನ್ ತನ್ನ ಪತ್ನಿಯನ್ನು ವರದಕ್ಷಣೆಗಾಗಿ ಹಾಗೂ ಸ್ವಂತ ಧರ್ಮ ತೊರೆದು ಮತಾಂತರಗೊಳ್ಳುವಂತೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರೆಂದು ಆಶಾ ಅವರ ತಂದೆ ನಾಗರಾಜ್ ಆರೋಪಿಸಿದ್ದಾರೆ.
ಘಟನೆ ದಿನದಂದು ಆಶಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿ, ಪತಿ ಇಮ್ರಾನ್ ಮೃತದೇಹವನ್ನು ಆಸ್ಪತ್ರೆಗೆ ತಂದು ವೈದ್ಯರಿಗೆ ಸುಳ್ಳು ಮಾಹಿತಿ ನೀಡಿ ಪರಾರಿಯಾಗಿದ್ದಾನೆ. ಗಂಡನೇ ಹೆಂಡತಿಯ ಮೃತದೇಹವನ್ನು ಆಸ್ಪತ್ರೆಗೆ ತಂದು ನೇರವಾಗಿ ಪೊಲೀಸರಿಗಾಗಲಿ ಅಥವಾ ಪೋಷಕರಿಗೆ ತಿಳಿಸದೆ ಪರಾರಿಯಾಗಿರುವುದು ಕೊಲೆಯ ಅನುಮಾನಕ್ಕೆ ಪುಷ್ಟಿ ನೀಡಿದೆ ಎಂದು ಹಿಂದೂಪರ ಸಂಘಟನೆಗಳ ಮುಖಂಡರು, ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೃತ ಯುವತಿಯ ಪೋಷಕರು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಪ್ರಮುಖರು, ವಿಶ್ವ ಹಿಂದೂ ಪರಿಷತ್ ಶ್ರೀನಿವಾಸ್ ಘಟನೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಮೂರು ವರ್ಷಗಳ ಹಿಂದೆ ಹೊಸಯಳನಾಡು ಗ್ರಾಮದ ಆಶಾ ಎನ್ನುವ ಹುಡುಗಿಯನ್ನು ಡ್ರೈವರ್ ಇಮ್ರಾನ್ ಎಂಬ ವ್ಯಕ್ತಿ 'ಲವ್ ಜಿಹಾದ್' ಗೆ ಬೀಳಿಸಿ ಮದುವೆಯಾಗಿದ್ದನು.


ಮತಾಂತರ ಯತ್ನ: ಮದುವೆಯಾದ ಬಳಿಕ ಆ ಹುಡುಗಿಯನ್ನು ತನ್ನ ಧರ್ಮಕ್ಕೆ ಮತಾಂತರಗೊಳಿಸಲು ಇಮ್ರಾನ್ ಸುಮಾರು ದಿನಗಳಿಂದ ಪ್ರಯತ್ನಿಸುತ್ತಿದ್ದನು. ಆದರೆ ಹುಡುಗಿ "ನಾನು ನಮ್ಮ ಧರ್ಮದಲ್ಲೇ ಇರುತ್ತೇನೆ" ಎಂದು ಒಪ್ಪಿರಲಿಲ್ಲ.
ಕಿರುಕುಳ ಮತ್ತು ಕೊಲೆ ಶಂಕೆ: ಹುಡುಗಿ ಒಪ್ಪದ ಕಾರಣಕ್ಕೆ ಆಕೆಯನ್ನು ಹೊಡೆದು, ಟಾರ್ಚರ್ ನೀಡಿ ಹಣ ವಸೂಲಿ ಮಾಡಿಕೊಳ್ಳುತ್ತಿದ್ದರಲ್ಲದೆ ಮತಾಂತರಕ್ಕಾಗಿ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದಾರೆ.
ಪೊಲೀಸರಿಗೆ ಆಗ್ರಹ: ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಮೃತಪಟ್ಟ ಯುವತಿಗೆ ನ್ಯಾಯ ಒದಗಿಸಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಸಮಾಜಕ್ಕೊಂದು ಎಚ್ಚರಿಕೆ ಮತ್ತು ಸಂದೇಶ: ಇಂದಿನ ದಿನಗಳಲ್ಲಿ ಪ್ರೀತಿ ಮತ್ತು ಮದುವೆ ಎನ್ನುವುದು ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಪರಸ್ಪರ ನಂಬಿಕೆಯ ಮೇಲೆ ನಿಂತಿರುತ್ತದೆ. ಆದರೆ, ಪ್ರೀತಿಯ ಹೆಸರಿನಲ್ಲಿ ನಂಬಿಸಿ ಮೋಸ ಮಾಡುವುದು, ಮದುವೆಯಾದ ಬಳಿಕ ವರದಕ್ಷಣೆಗಾಗಿ ಕಿರುಕುಳ ನೀಡುವುದು ಹಾಗೂ ಬಲವಂತದ ಮತಾಂತರಕ್ಕೆ ಒತ್ತಾಯಿಸುವುದು ಅಕ್ಷಮ್ಯ ಅಪರಾಧ.
ಯಾವುದೇ ಸಂಬಂಧದಲ್ಲಿ ಬಲವಂತ, ಹಿಂಸೆ ಮತ್ತು ಕಿರುಕುಳಕ್ಕೆ ಜಾಗವಿರಬಾರದು. ಕಾನೂನು ಎಲ್ಲರಿಗೂ ಸಮಾನವಾಗಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು.
ಯುವಜನರು ಪ್ರೀತಿ-ವಿವಾಹದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನಾತ್ಮಕ ಆವೇಶಕ್ಕಿಂತ ಭವಿಷ್ಯದ ವಾಸ್ತವಿಕತೆ ಮತ್ತು ಸುರಕ್ಷತೆಯ ಬಗ್ಗೆ ಗಂಭೀರವಾಗಿ ಯೋಚಿಸುವುದು ಅತ್ಯಗತ್ಯ.
ಇಂತಹ ಪ್ರಕರಣಗಳು ಕೋಮು ಸೌಹಾರ್ದತೆಗೆ ಧಕ್ಕೆ ತರದಂತೆ, ಕಾನೂನು ತನ್ನ ಹಾದಿಯಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನೈಜ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಮೃತ ಯುವತಿಗೆ ನ್ಯಾಯ ಒದಗಿಸಬೇಕು. ಪ್ರತಿಯೊಬ್ಬರ ಜೀವವೂ ಅಮೂಲ್ಯವಾಗಿದ್ದು, ಸಂಸಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದಾಗ ದೌರ್ಜನ್ಯಕ್ಕೆ ಒಳಗಾಗದೆ ಕಾನೂನು ಅಥವಾ ಆಪ್ತರ ಮೊರೆ ಹೋಗುವ ಜಾಗೃತಿ ಸಮಾಜದಲ್ಲಿ ಮೂಡಬೇಕಿದೆ.




