ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ದಿನೇದಿನೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯು ಕೇವಲ ಉದ್ಯೋಗಿಗಳಿಗಷ್ಟೇ ಅಲ್ಲದೆ, ಶಾಲೆಗೆ ಹೋಗುವ ಪುಟ್ಟ ಮಕ್ಕಳು ಹಾಗೂ ಶಿಕ್ಷಕರ ದೈನಂದಿನ ನೆಮ್ಮದಿಯನ್ನೇ ಕಸಿದುಕೊಳ್ಳುತ್ತಿದೆ. ಗಂಟೆಗಟ್ಟಲೆ ವಾಹನಗಳ ನಡುವೆ ಸಿಲುಕಿ ಪರದಾಡುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು, ನಗರದ ಶಾಲಾ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆ ತರಲು ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ, ಶಾಲಾ-ಕಾಲೇಜುಗಳ ಸಮಯದ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಹಾಗೂ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸಮಯ ಬದಲಾವಣೆಗೆ ಕಾರಣವೇನು?:
ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್ಗಳಲ್ಲಿ ಕಚೇರಿ ಸಿಬ್ಬಂದಿಯ ವಾಹನಗಳ ಜೊತೆಗೆ ಶಾಲಾ ವಾಹನಗಳೂ ಏಕಕಾಲದಲ್ಲಿ ರಸ್ತೆಗಿಳಿಯುವುದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಸಾರ್ವಜನಿಕರ ಹಾಗೂ ಉದ್ಯೋಗಿಗಳ ಸಮಯದ ಜೊತೆಗೆ ಶಾಲಾ ಸಮಯ ಪರಸ್ಪರ ಮುಖಾಮುಖಿಯಾಗದಂತೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಶಾಲಾ ಸಮಯವನ್ನು 30 ನಿಮಿಷಗಳಿಂದ 1 ಗಂಟೆಯವರೆಗೆ ಬದಲಾಯಿಸುವ (ಮುಂದೂಡುವ ಅಥವಾ ಮುಂಚಿತವಾಗಿ ಆರಂಭಿಸುವ) ಸಾಧ್ಯತೆಗಳಿವೆ.
ವಿವಿಧ ವಲಯಗಳಿಂದ ಬಂದ ಮನವಿಗಳು:
ಸದ್ಯ ಬೆಂಗಳೂರಿನ ಸರ್ಕಾರಿ ಶಾಲೆಗಳು ಬೆಳಗ್ಗೆ 10:30 ರಿಂದ ಸಂಜೆ 4:30 ರವರೆಗೆ ನಡೆಯುತ್ತಿವೆ. ಟ್ರಾಫಿಕ್ ದಟ್ಟಣೆಯಿಂದಾಗಿ ಶಾಲೆಗೆ ತಲುಪಲು ತಡವಾಗುತ್ತಿರುವುದರಿಂದ, ಈ ಸಮಯವನ್ನು ಬೆಳಗ್ಗೆ 8:30 ರಿಂದ ಮಧ್ಯಾಹ್ನ 3:30 ಕ್ಕೆ ಬದಲಾಯಿಸುವಂತೆ ಸರ್ಕಾರಿ ಶಾಲಾ ಶಿಕ್ಷಕರು ಈಗಾಗಲೇ ಮನವಿ ಮಾಡಿದ್ದಾರೆ. ಇದರೊಂದಿಗೆ ಖಾಸಗಿ ಶಾಲೆಗಳ ಒಕ್ಕೂಟವೂ ಸಹ ಸಮಯ ಬದಲಾವಣೆಗೆ ಬೇಡಿಕೆ ಇಟ್ಟಿತ್ತು. ಅಲ್ಲದೆ, ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸಲು ಶಾಲಾ-ಕಾಲೇಜುಗಳು ಹಾಗೂ ಐಟಿ/ಬಿಟಿ ಕಂಪನಿಗಳ ಕೆಲಸದ ಸಮಯವನ್ನು ಪರಿಷ್ಕರಿಸುವಂತೆ ಈ ಹಿಂದೆ ಕರ್ನಾಟಕ ಹೈಕೋರ್ಟ್ ಕೂಡ ಸರ್ಕಾರಕ್ಕೆ ಸಲಹೆ ನೀಡಿತ್ತು.
ಅಂತಿಮ ನಿರ್ಧಾರ ಯಾವಾಗ?:
ಬೆಂಗಳೂರು ಟ್ರಾಫಿಕ್ ಪೊಲೀಸರು, ಪೋಷಕರು, ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮತ್ತು ಶಾಲಾ ವಾಹನ ಚಾಲಕರ ಸಂಘಟನೆಗಳೊಂದಿಗೆ ಶಿಕ್ಷಣ ಇಲಾಖೆಯು ಸಭೆ ನಡೆಸಲಿದೆ. ಎಲ್ಲರ ಅಭಿಪ್ರಾಯ ಹಾಗೂ ಅನುಕೂಲಗಳನ್ನು ಕ್ರೋಢೀಕರಿಸಿದ ನಂತರವೇ ಸರ್ಕಾರ ಈ ಬಗ್ಗೆ ಅಂತಿಮ ಆದೇಶ ಹೊರಡಿಸಲಿದೆ.




