12 ರಿಂದ 14 ವರ್ಷದ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಶೇ.100 ರಷ್ಟು ಪ್ರಗತಿ ಸಾಧಿಸಿ-ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಮಕ್ಕಳಿಗೆ ಲಸಿಕಾಕರಣವು ಪ್ರಮುಖ ಪಾತ್ರವಹಿಸಲಿದ್ದು, 12 ರಿಂದ 14 ವರ್ಷದ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವಿಕೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 12 ರಿಂದ 14 ವರ್ಷದ ಶಾಲಾ ಮಕ್ಕಳ ಕೋವಿಡ್ ಲಸಿಕಾ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್ ಲಸಿಕೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಗ್ರಾಮವಾರು ಪ್ರತ್ಯೇಕ ಕ್ರಿಯಾಯೋಜನೆ ತಯಾರಿಸಬೇಕು. ನಿಗಧಿತ ಗುರಿ ಸಾಧಿಸಿದ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸಿಬ್ಬಂದಿಗಳಿಗೆ ಜಿಲ್ಲಾಡಳಿತದ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
12 ರಿಂದ 14 ವರ್ಷದ ಮಕ್ಕಳ ಪೋಷಕರ ಸಭೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಮಾಡಿ ಲಸಿಕೆ ಮಹತ್ವದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿಯನ್ನು ಆರೋಗ್ಯ ಇಲಾಖೆಗೆ ನೀಡಿ ಹಾಗೂ ಲಸಿಕಾ ಅಧಿವೇಶನದ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದು, ಸುಗಮವಾಗಿ ಲಸಿಕಾ ಅಧಿವೇಶನ ನಡೆಸಬೇಕು ಎಂದರು.
ಆರ್.ಸಿ.ಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ ಮಾತನಾಡಿ,28 ಮಾರ್ಚ್ 2010ರಂದು ಅಥವಾ ಅದಕ್ಕೂ ಮುನ್ನ ಹುಟ್ಟಿರುವ ಎಲ್ಲಾ ಮಕ್ಕಳು ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕಾಕರಣಕ್ಕೆ ಅರ್ಹರಾಗಿರುತ್ತಾರೆ. 12 ವರ್ಷ ಪೂರೈಸಿದ ಮಕ್ಕಳು ಮಾತ್ರ ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕೆ ಪಡೆಯಬಹುದಾಗಿದೆ. 28 ದಿನ ನಂತರ 2ನೇ ಡೋಸ್ ಲಸಿಕೆ ನೀಡಲಾಗುತ್ತದೆ. ಅರ್ಹ ಮಕ್ಕಳಿಗೆ ಶಾಲೆಗಳಲ್ಲಿಯೇ ಲಸಿಕಾಕರಣ ಆಯೋಜಿಸಿ ಮುಂಚಿತವಾಗಿಯೇ ಲಸಿಕಾಕರಣದ ದಿನಾಂಕ ತಿಳಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು ಇದ್ದರು.