ಪೋಷಕರು ಮಕ್ಕಳಿಗೆ ಇಷ್ಟೇ ಅಂಕ ತೆಗೆ, ಇಂಥದ್ದೇ ಓದು ಎಂದು ಒತ್ತಡ ಹಾಕುವುದು ಬೇಡ-ಶಾಸಕ ಜಿ.ಎಚ್.ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಹೆಚ್ಚಿನ ಅಂಕಗಳಿಗೆ ಮನ್ನಣೆ. ಆದ್ದರಿಂದ ವಿದ್ಯಾರ್ಥಿಗಳು ಸತತ ಪರಿಶ್ರಮದ ಮೂಲಕ ಓದು ಬರಹ ಮಾಡಬೇಕು, ಶಿಕ್ಷಣ ಜೊತೆ ಜೊತೆಯಲ್ಲೇ ಕ್ರೀಡೆ ಇತರೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ “ಪ್ರತಿಭೋತ್ಸವ ಸಮಾರಂಭ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭೋತ್ಸವದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಒಂಟಿ ತನ ಹೋಗಲಾಡಿಸುತ್ತದೆ. ಶೈಕ್ಷಣಿಕ ಪ್ರಗತಿಗೆ ಬೇಕಾದ ಉತ್ಸಾಹ ತುಂಬಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುತ್ತದೆ. ವಿದ್ಯಾರ್ಥಿಯ ಬೆಳವಣಿಗೆ ಕೇವಲ ಶಿಕ್ಷಣದಿಂದಲೇ ಸಾಧ್ಯವಿಲ್ಲ. ಶಾಲಾ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರಲ್ಲಿ ವ್ಯಕ್ತಿಯಲ್ಲಿ ಪ್ರತಿಭೆ ಅಡಗಿರುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿಯಿದ್ದು ಅಂತಹ ಪ್ರತಿಭೆಯನ್ನು ಹೊರ ತರುವ ಕೆಲಸವನ್ನು ಪ್ರತಿಭೋತ್ಸವ ಮಾಡುತ್ತದೆ ಎಂದು ಶಾಸಕರು ತಿಳಿಸಿದರು.
ಪೋಷಕರು ತಮ್ಮ ಮಕ್ಕಳಿಗೆ ಕ್ರೀಡೆಗಿಂತ ಅಂಕ ಮುಖ್ಯ ಎಂಬ ದೆಸೆಯಲ್ಲಿ ಮಕ್ಕಳನ್ನು ಕೊಂಡೊಯ್ಯವ ಕೆಲಸ ಮಾಡುತ್ತಿದ್ದಾರೆ. ಆದರೆ ಮಕ್ಕಳಿಗೆ ವಿದ್ಯಾಭ್ಯಾಸ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಭಾಗವಹಿಸಿದರೆ ಮಕ್ಕಳಿಗೆ ಸ್ಪರ್ಧೆ ನೀಡುವ ಗುಣ ಬೆಳೆಯುತ್ತದೆ. ತಮ್ಮ ಜೀವನದಲ್ಲಿ ಧೈರ್ಯದಿಂದ ನಿರ್ಧಾರಗಳನ್ನು ಮಾಡುವ ಶಕ್ತಿಯನ್ನು ಕ್ರೀಡೆ ನೀಡುತ್ತದೆ.
ಯುವ ಸಮೂಹ ಕ್ರಿಕೆಟ್ ಹಿಂದೆ ಹೆಚ್ಚು ಪ್ರೇರಣೆಗೊಳ್ಳುತ್ತಿದೆ. ಆದರೆ ಪುಟಬಾಲ್, ವಾಲಿಬಾಲ್, ಖೊಖೋ, ಲಾಂಗ್ ಜಂಪ್, ಹೈ ಜಂಪ್ , ಗುಪು ಕ್ರೀಡೆಗಳು ಮತ್ತು ಅಥ್ಲೆಟಿಕ್ಸ್ ಆಟಗಳನ್ನು ಹೆಚ್ಚೆಚ್ಚು ಆಟವಾಡಬೇಕು. ಇಂತಹ ಆಟಗಳಿಂದ ಬುದ್ದಿಮಟ್ಟ ಹೆಚ್ಚುತ್ತದೆ ಎಂದರು.
ಭಾರತ ದೇಶ ಆರ್ಥಿಕತೆಯಲ್ಲಿ ಬ್ರಿಟನ್ ಹಿಂದಿಕ್ಕಿ ಐದನೇ ಸ್ಥಾನದಲ್ಲಿದೆ ಎಂಬ ಹೆಮ್ಮೆ ನಮಗಿದೆ. ನಮ್ಮ ವಿಜ್ಞಾನಿಗಳು ಹೊರದೇಶ ಮಿಲಿಟರಿಗೆ ಸ್ಪರ್ಧೆ ನೀಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನದಲ್ಲಿ ನಮ್ಮ ದೇಶದ ಭದ್ರತೆ ಬೇಕಾದ ಎಲ್ಲಾ ಉಪಕರಣಗಳನ್ನು ನಾವೇ ತಯಾರು ಮಾಡುವ ದಿನಗಳು ಹತ್ತಿರದಲ್ಲಿವೆ. ಇಂತಹ ಮಹತ್ವದ ಹೆಜ್ಜೆಗಳನ್ನ ಇಡುವಲ್ಲಿ ತಾವುಗಳು ಇದ್ದು ಎಲ್ಲಾರೂ ತಮಗೆ ಕೈಲಾದ ಸೇವೆಯನ್ನು ದೇಶಕ್ಕಾಗಿ ಮಾಡಬೇಕು ಎಂದರು.
ಎಲ್ಲಾ ರಂಗದಲ್ಲಿ ಯುವಕರು ಭಾಹವಹಿಸಬೇಕು. ಎಲ್ಲಾರೂ ಒಂದಲ್ಲಿ ಅಧಿಕಾರ ಸಿಕ್ಕಾಗ ನಿಮ್ಮ ಹಳೆಯ ಕಷ್ಟಗಳನ್ನು ಮರೆಯಬೇಡಿ. ಬಡವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ, ನಿಮ್ಮನ್ನ ಸಾಕಿ ಸಲುವಿದ ತಂದೆ ತಾಯಿಯನ್ನು ಕೊನೆಯವರೆಗೂ ಸಂತಸದಿಂದ ಹಾರೈಕೆ ಮಾಡಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಕಳೆದ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಬಿ.ಕಾಂ.ವಿಭಾಗದಲ್ಲಿ 9 ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ ಆರ್.ಎಂ.ವಿದ್ಯುಲತಾ ಅವರನ್ನು ಶಾಸಕರು ಸನ್ಮಾನಿಸಿದರು.
ಕಾಲೇಜಿನಲ್ಲಿ ಏರ್ಪಡಿಸಿದ್ದ ದೇಶಭಕ್ತಿ ಗೀತೆ, ಜನಪದ ಗೀತೆ,ಭರತ ನಾಟ್ಯ, ಪ್ರಬಂಧ ಸ್ವರ್ಧೆ, ಚರ್ಚಾ ಸ್ವರ್ಧೆ, ಏಕಪಾತ್ರ ಅಭಿನಯ, ಆಶುಭಾಷಣ ಸ್ವರ್ಧೆ, ಯೋಗ ಸ್ವರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಣೆ ಮಾಡಲಾಯಿತು.
ಪ್ರಾಂಶುಪಾಲ ಡಾ.ಗುಡ್ಡದೇಶ್ವರಪ್ಪ ಅಧ್ಯಕ್ಷತೆ ವಹಸಿದ್ದರು. ಸಮಾರೋಪ ಭಾಷಣ ಡಾ.ಆರ್.ತಾರಿಣಿ ಶುಭದಾಯಿನಿ ನೇರವೇರಿಸಿದರು, ಐಕ್ಯೂಎಸಿ ಸಂಚಾಲಕ ಸಿ.ಬಸವರಾಜ್, ಕ್ರೀಡಾ ಸಂಚಾಲಕ ಬಿ.ಹೆಚ್. ಕುಮಾರಸ್ವಾಮಿ, ಪತ್ರಾಂಕಿತ ವ್ಯವಸ್ಥಾಪಕ ಕೆ.ಎನ್.ಬಸಣ್ಣಗೌಡ ಮತ್ತು ಉಪನ್ಯಾಸಕರಾದ ಚನ್ನಕೇಶವ್, ಸಿದ್ದಪ್ಪ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.