
ಚಿತ್ರದುರ್ಗ ದತ್ತಣ್ಣ ಸೇರಿ ವಿವಿಧ ಕ್ಷೇತ್ರಗಳಲ್ಲಿನ 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ೬೭ ಮಂದಿ ಸಾಧಕರಿಗೆ ೨೦೨೨-೨೩ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು ೬೭ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇನ್ನು ೧೦ ಸಂಘ ಸಂಸ್ಥೆಗಳಿಗೂ ಸಹ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು, ನವೆಂಬರ್ ೧ ರಂದು ೬೭ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರ್ಕಾರದ ವತಿಯಿಂದ ನೀಡಲಾಗುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ನವೆಂಬರ್ ೧ರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಪ್ರಶಸ್ತಿಯು ಒಂದು ಲಕ್ಷ ರೂ ಗೌರವಧನ, 25 ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ.
ಚಿತ್ರದುರ್ಗ ಜಿಲ್ಲೆಯಿಂದ ರಂಗಭೂಮಿ ಕಲಾವಿದ ದತ್ತಣ್ಣ ಎಂದೇ ಪ್ರಖ್ಯಾತರಾದ ಎಚ್ ಜಿ ದತ್ತಾತ್ರೇಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ರಂಗಭೂಮಿ, ಕಿರುತೆರೆ, ಭಾರತೀಯ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ಮತ್ತು ಅದೆಲ್ಲಕ್ಕೂ ಮೀರಿದ ಸರಳ ಸದ್ಗುಣಗಳಿಂದ ದತ್ತಣ್ಣ ಹೆಸರಾಗಿದ್ದಾರೆ.
1942ರ ಏಪ್ರಿಲ್ 20ರಂದು ಚಿತ್ರದುರ್ಗದಲ್ಲಿ ದತ್ತಾತ್ರೇಯ ಜನಿಸಿದರು. ಅವರ ತಂದೆ ಹರಿಹರ ಗುಂಡೂರಾವ್. ತಾಯಿ ವೆಂಕಮ್ಮ. ಅವರಿಗೆ ಒಡಹುಟ್ಟಿದವರು ಆರು ಮಂದಿ. ಚಿತ್ರದುರ್ಗದಲ್ಲಿ ದತ್ತಣ್ಣನವರ ವಿದ್ಯಾಭ್ಯಾಸ ನಡೆಯಿತು. 1958ರಲ್ಲಿ ಮೆಟ್ರಿಕ್ಯುಲೇಶನ್ ಪ್ರಥಮ ರ್ಯಾಂಕ್, 1959ರಲ್ಲಿ ಇಂಟರ್ಮೀಡಿಯೆಟ್ ಎರಡನೇ ರ್ಯಾಂಕ್, 1964ರಲ್ಲಿ ಯುವಿಸಿಇ ಬೆಂಗಳೂರಿನಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ, 1978ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ನಿಂದ ಎಲೆಕ್ಟ್ರಿಕಲ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಮಾಸ್ಟರ್ಸ್ ಪದವಿಯನ್ನು ದತ್ತಣ್ಣ ಪಡೆದುಕೊಂಡಿದ್ದಾರೆ.
1964ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿದಾಗಲೆ ದತ್ತಣ್ಣನರು ಭಾರತೀಯ ವಾಯುಪಡೆಯ ತಾಂತ್ರಿಕ ವಿಭಾಗದಲ್ಲಿ ಕಮಿಷನ್ಡ್ ಆಫೀಸರ್ ಆಗಿ ವೃತ್ತಿ ಆರಂಭಿಸಿದರು. ಮುಂದೆ ಬೆಂಗಳೂರಿನ ಏರ್ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ತರಬೇತಿ ಪಡೆದರು. ದತ್ತಣ್ಣ ಅವರು ರಣಭೂಮಿಯಲ್ಲಿ ಹೋರಾಡಿದವರು. ಅವರು 1965ರ ಭಾರತ ಚೀನಾ ಯುದ್ಧದಿಂದ ಆರಂಭಿಸಿ 1972ರ ಭಾರತ ಪಾಕಿಸ್ತಾನದ ಯುದ್ಧದವರಗೆ ಮೂರು ಯುದ್ಧಗಳಲ್ಲಿ ವಾಯುಸೇನೆಯನ್ನು ಮುನ್ನಡೆಸಿ ದೇಶಕ್ಕೆ ಹೆಮ್ಮೆ ತಂದುಕೊಟ್ಟ ಕೀರ್ತಿ ದತ್ತಣ್ಣನವರಿಗಿದೆ.
ದತ್ತಣ್ಣನವರು ಇಂಡಿಯನ್ ಇನ್ಸ್ಟಿಟ್ಯೂಟ್ನಲ್ಲಿ ಸ್ನಾತಕೋತ್ತರ ಪದವಿಗೆ ಓದುವ ಸಂದರ್ಭದಲ್ಲಿ 1984ರಲ್ಲಿ ಅವರಿಗೆ ‘ಮ್ಯಾನೇಜ್ಮೆಂಟ್ ಅಂಡ್ ಅಡ್ವಾನ್ಸ್ಡ್ ಟೆಕ್ನಾಲಜೀಸ್’ ಕುರಿತಾದ ಯಶಸ್ವಿ ಪ್ರಾಜೆಕ್ಟ್ ನಿರ್ವಹಣೆಗಾಗಿನ ಪ್ರಮಾಣಪತ್ರ ಸಂದಿತು. ದತ್ತಣ್ಣನವರು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿ ಇಪ್ಪತ್ತು ವರ್ಷ ಕಾರ್ಯನಿರ್ವಹಿಸಿದ್ದರು. ಹಿಂದೂಸ್ತಾನ್ ಏರೋನಾಟಿಕ್ಸ್ಸಂಸ್ಥೆಯ ಮ್ಯಾನೇಜ್ಮೆಂಟ್ ಅಕಾಡೆಮಿಯ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮತ್ತು ಪ್ರಿನ್ಸಿಪಾಲರಾಗಿಯೂ ಅವರು ಕಾರ್ಯನಿರ್ವಹಿಸಿದರು.
ರಂಗಭೂಮಿ ನಂಟು-ಚಿತ್ರದುರ್ಗದಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಓದುವಾಗಿನಿಂದಲೇ ದತ್ತಣ್ಣನವರಿಗೆ ನಾಟಕದ ಗೀಳು. ಅಕ್ಕಪಕ್ಕದ ಹುಡುಗರನ್ನು ಸೇರಿಸಿ ಮಾಡಿದ ‘ಸೊಹ್ರಾಬ್-ರುಸ್ತುಂ’ ನಾಟಕ ಅವರಿಗೆ ಪ್ರಖ್ಯಾತಿ ತಂದಿತ್ತು. ಪ್ರೌಢಶಾಲೆಯ ನಾಟಕದಲ್ಲಿ ಅವರದ್ದು ಮದಕರಿ ನಾಯಕನ ಪಾತ್ರ. ಚಿತ್ರದುರ್ಗಕ್ಕೆ ಬರುತ್ತಿದ್ದ ಜಮಖಂಡಿ ಕಂಪನಿ, ಗುಬ್ಬಿ ಕಂಪನಿ ನಾಟಕಗಳ ಪ್ರಭಾವ ಅವರ ಮೇಲಿತ್ತು. ಚಿತ್ರದುರ್ಗದ ಪ್ರೌಢ ಶಾಲೆಯಲ್ಲಿ ‘ಅಳಿಯ ದೇವರು’ ನಾಟಕದಲ್ಲಿ ರುಕ್ಕುಪಾತ್ರ, ದುರ್ಗದ ಹವ್ಯಾಸಿ ತಂಡ ಅಭಿನಯಿಸಿದ ‘ದೇವದಾಸಿ’ ನಾಟಕದಲ್ಲಿ ಸೀತಾಲಕ್ಷ್ಮಿ ಪಾತ್ರ, ಬೆಂಗಳೂರಿನ ಅಂತರ ಕಾಲೇಜು ನಾಟಕ ಸ್ಪರ್ಧೆಗಾಗಿ ‘ಡನ್ಲಪ್ ಗರ್ಲ್’ನಲ್ಲೂ ಅವರದು ಹೆಣ್ಣು ಪಾತ್ರ. ಹೀಗೆ ಮೊದ ಮೊದಲು ಅವರಿಗೆ ಸಿಕ್ಕಿದ್ದು ಹೆಣ್ಣು ಪಾತ್ರಗಳೇ! ಏರ್ಫೋರ್ಸ್ ಅಡ್ಮಿನಿಸ್ಟ್ರೇಟಿವ್ ಕಾಲೇಜಿನಲ್ಲಿ ಸಹಾ ಅಂಬಾಸಿಡರ್ಪಾತ್ರದಲ್ಲಿ ಅಭಿನಯಿಸಿ ಪ್ರಶಂಸೆ ಪಡೆದಿದ್ದಾರೆ. ಚಂದ್ರವಳ್ಳಿ ಪತ್ರಿಕಾ ಬಳಗ ಜಿಲ್ಲೆಯ ಜನರ ಪರವಾಗಿ ಹಾಗೂ ಪತ್ರಿಕೆಯ ಪರವಾಗಿ ದತ್ತಣ್ಣನವರಿಗೆ ಅಭಿನಂದನೆಗಳನ್ನು ತಿಳಿಸುತ್ತದೆ.