
ವಕೀಲರುಗಳೇ ಅಭಿನಯ ಮಾಡಲಿರುವ ಅದ್ಧೂರಿ ಪೌರಾಣಿಕ ಕುರುಕ್ಷೇತ್ರ ನಾಟಕ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಕೀಲರ ದಿನಾಚರಣೆ ಪ್ರಯುಕ್ತ ಡಿ.3 ರಂದು ರಾತ್ರಿ ಎಂಟು ಗಂಟೆಗೆ ವಕೀಲರ ಭವನದಲ್ಲಿ ಪ್ರಥಮ ಬಾರಿಗೆ ಕುರುಕ್ಷೇತ್ರ
ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಲ್ಲಿನ ನ್ಯಾಯಾಲಯಕ್ಕೆ ನೂರು ವರ್ಷಗಳ
ಇತಿಹಾಸವಿದೆ. ಲೋಕ ಅದಾಲತ್ ಮತ್ತು ರಾಜಿ ಸಂಧಾನಗಳ ಮೂಲಕ ಕೇಸುಗಳನ್ನು ಇತ್ಯರ್ಥಪಡಿಸಲು ಅನುಕೂಲವಾಗಲಿ
ಎನ್ನುವ ಸಂದೇಶವನ್ನು ನಾಟಕದಲ್ಲಿ ಪ್ರದರ್ಶಿಸಲಾಗುವುದು. ರಾಜಿಸಂಧಾನವನ್ನು ಕೆಲವೊಮ್ಮೆ ಎರಡು ಕಡೆಯವರು ಒಪ್ಪದಿದ್ದರೆ
ಮುಂದೆ ಏನೆಲ್ಲಾ ಪರಿಣಾಮಗಳು ಎದುರಾಗುತ್ತವೆ ಎನ್ನುವ ಅಂಶವನ್ನಿಟ್ಟುಕೊಂಡು ನಾಟಕದಲ್ಲಿ ಅಭಿನಯಿಸಲಾಗುತ್ತದೆ ಎಂದರು.
ಮೂರು ತಿಂಗಳಿನಿಂದ ನಾಟಕಕ್ಕೆ ವಕೀಲರುಗಳು ಅಭ್ಯಾಸದಲ್ಲಿ ತೊಡಗಿದ್ದೇವೆ. ಸದಾ ಒತ್ತಡದ ನಡುವೆ ಜೀವಿಸುವ
ವಕೀಲರುಗಳಿಗೂ ಮನರಂಜನೆಯನ್ನು ನಾಟಕದ ಮೂಲಕ ನೀಡಬೇಕೆಂಬುದು ನಮ್ಮ ಉದ್ದೇಶ. ಅಂದು ಸಂಜೆ ಎಂಟು ಗಂಟೆಗೆ
ಆರಂಭಗೊಳ್ಳುವ ನಾಟಕ ಬೆಳಗಿನ ಜಾವ ಮೂರು ಗಂಟೆಯವರೆಗೂ ಪ್ರದರ್ಶನವಾಗಬಹುದು. ವಕೀಲ ವೃತ್ತಿಯಲ್ಲಿ 25 ವರ್ಷಗಳಿಂದ
ಸೇವೆ ಸಲ್ಲಿಸುತ್ತಿರುವ ಹಿರಿಯರನ್ನು ಗುರುತಿಸಿ ಸನ್ಮಾನಿಸಲಾಗುವುದು. ಹಾಗೆಯೇ ಯುವ ವಕೀಲರುಗಳಿಗೆ ಸ್ವಾಗತ
ಕೋರಲಾಗುವುದು. ಡಿ.3 ರಂದು ಮಧ್ಯಾಹ್ನ 12-30 ಕ್ಕೆ ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ.
ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇವರುಗಳು ಆಗಮಿಸಲಿದ್ದಾರೆಂದು
ಹೇಳಿದರು.
ವಕೀಲರ ಸಂಘದ ಉಪಾಧ್ಯಕ್ಷ ಜಿ.ಸಿ.ದಯಾನಂದ್, ಪ್ರಧಾನ ಕಾರ್ಯದರ್ಶಿ ಎಂ.ಮೂರ್ತಿ, ಸಹಕಾರ್ಯದರ್ಶಿ
ಬಿ.ಆರ್.ವಿಶ್ವನಾಥರೆಡ್ಡಿ, ಖಜಾಂಚಿ ಕೆ.ಎಂ.ಅಜ್ಜಯ್ಯ, ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್, ಎಸ್.ಓ.ಸಕ್ರಯ್ಯ,
ಬಿ.ಇ.ಪ್ರದೀಪ್, ಟಿ.ಶಿವಮೂರ್ತಿ, ಟಿ.ರವಿಸಿದ್ದಾರ್ಥ್, ಬಿ.ಗಿರೀಶ್, ಕೆ.ಶ್ರೀರಾಮು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.