
ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ವಿಮಾನದಿಂದ ಬಂದ ಸದಸ್ಯರು…
ಚಂದ್ರವಳ್ಳಿ ನ್ಯೂಸ್, ರಾಣಿಬೆನ್ನೂರ:
ರಾಜಕಾರಣವೇ ಹಾಗೆ, ಅಧಿಕಾರ ಹಿಡಿಯಬೇಕು ಎನ್ನುವುದಾದರೇ ಏನು ಬೇಕಾದರೂ ಮಾಡಲು ಸಿದ್ದ ಇರಬೇಕು. ಕೇವಲ ರೆಸಾರ್ಟ್, ಧಾರ್ಮಿಕ ಕೇಂದ್ರಗಳಿಗೆ ಪ್ರವಾಸಕ್ಕೆ ಸೀಮಿತವಾಗಿದ್ದ ಅವಿಶ್ವಾಸ ನಿರ್ಣಯ ಇಂದು ಅದರ ತೂಕ ಹೆಚ್ಚಿಸಿಕೊಂಡಿದೆ. ಈಗ ವಿಮಾನ ಏರುವ ಅವಕಾಶ ಬಂದೊದಗಿದೆ.
ರಾಣಿಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಪಂ ಅಧ್ಯಕ್ಷ ಮಾಲತೇಶ ದುರ್ಗಪ್ಪ ನಾಯರ್ ವಿರುದ್ಧ ಮಂಗಳವಾರ ಸದಸ್ಯರು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಗೆಲುವಾಗಿದೆ. ಆದರೆ ಅವಿಶ್ವಾಸ ಗೊತ್ತುವಳಿ ದಿನ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ, ಅಲ್ಲಿಂದ ದೇವರಗುಡ್ಡಕ್ಕೆ ತೆರಳಿ ಅವಿಶ್ವಾಸದ ಪರ ಮತ ಚಲಾಯಿಸುವ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರು ಇಡೀ ರಾಜ್ಯದ ಗಮನ ಸೆಳೆದರು.
ದೇವರಗುಡ್ಡ ಗ್ರಾಪಂನಲ್ಲಿ ಒಟ್ಟು 13 ಸದಸ್ಯರ ಸಂಖ್ಯಾಬಲವಿದೆ. ಸಂತೋಷ್ ಭಟ್ ಗುರೂಜಿ ಬಣದ 9 ಸದಸ್ಯರು ಕೇರಳ, ತಮಿಳುನಾಡು, ಬೆಂಗಳೂರು ಮತ್ತಿತರ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದರು. ಕಳೆದ ಎರಡು ತಿಂಗಳಿನಿಂದ ಕುತೂಹಲ ಮೂಡಿಸಿದ್ದ ಅವಿಶ್ವಾಸ ಮಂಡನೆ ಕೊನೆಗೂ ಯಶಸ್ವಿಯಾಗಿದೆ. ಇದೀಗ ಗ್ರಾಪಂಗೆ ನೂತನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಗಿದೆ.
ಹಾವೇರಿ ಉಪ ವಿಭಾಗಾಧಿಕಾರಿ ಶಿವಾನಂದ ಉಳಾಗಡ್ಡಿ, ತಾಪಂ ಇಒ ಟಿ.ಆರ್. ಮಲ್ಲಾಡದ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.