
ಹೆಣ್ಣು ಹೆತ್ತವರು ರೈತರ ಮನೆಗೆ ಹುಡುಕಿಕೊಂಡು ಬಂದು ಹುಡುಗಿ ಕೊಡಬೇಕು ಹಾಗೆ ಮಾಡುವೆ-ಎಚ್ ಡಿಕೆ…
ಚಂದ್ರವಳ್ಳಿ ನ್ಯೂಸ್, ಮಂಡ್ಯ:
ರೈತಾಪಿ ಕೆಲಸ ಮಾಡುವಂತ ರೈತ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ, ಇದರಿಂದ ಪ್ರಕೃತಿ ಅಸಮತೋಲನಕ್ಕೆ ಕಾರಣವಾಗಲಿದ್ದು ಕೃಷಿ ಮಾಡುವ ರೈತರ ಮನೆಗೆ ಹೆಣ್ಣು ಹೆತ್ತವರು ಹುಡುಕಿಕೊಂಡು ಬಂದು ಹೆಣ್ಣು ಕೊಡಬೇಕು, ಹಾಗೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹೆಣ್ಣು ಹೆತ್ತವರು ಯುವ ರೈತರಿಗೆ ಹುಡುಕಿಕೊಂಡು ಬಂದು ಹೆಣ್ಣು ಕೊಡಬೇಕು, ಹಾಗೆ ಮಾಡದಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡುವೆ ಎಂದು ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.
ಪಂಚರತ್ನ ಯಾತ್ರೆ ವೇಳೆ ರೈತ ಕುಟುಂಬದ ಯುವಕನೊಬ್ಬ ಬಂದು ನಮಗೆ ಯಾರು ಹೆಣ್ಣು ಕೊಡಲು ಮುಂದೆ ಬರುತ್ತಾರೆ, ಹೆಣ್ಣು ಮಕ್ಕಳನ್ನು ಆಫೀಸರ್ ಗಳು ಬಂದು ಮದುವೆ ಮಾಡಿಕೊಂಡು ಹೋಗುತ್ತಾರೆ ಎಂದು ಕಣ್ಣೀರಿಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಕೃಷಿ ಮಾಡುವ ರೈತರ ಮನೆಗೆ ಹೆಣ್ಣು ಹೆತ್ತವರು ಹುಡುಕಿಕೊಂಡು ಬಂದು ಹುಡುಗಿ ಕೊಡಬೇಕು, ಹಾಗೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಚುನಾವಣಾ ಗಿಮಿಕ್ ಮಾಡಿಕೊಂಡು ಜನರ ಮೂಗಿಗೆ ನಾನು ತುಪ್ಪ ಸವರುವ ಕೆಲಸ ಮಾಡುವುದಿಲ್ಲ. ಬಿಜೆಪಿ ಸರ್ಕಾರ ಆ ಕೆಲಸ ಮಾಡುತ್ತಿದೆ ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದರು.