i
ಮೀಸಲಾತಿ ಪಡೆಯಲು ಒಕ್ಕಲಿಗರು ಭಿಕ್ಷುಕರಲ್ಲ…
ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಒಕ್ಕಲಿಗ ಜನಸಂಖ್ಯೆ ಅನುಗುಣವಾಗಿ ಶೇ.12 ರಷ್ಟು ಮೀಸಲಾತಿ ಸಿಗಬೇಕು. ಕೇವಲ ಶೇ.3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರು ಭಿಕ್ಷುಕರಲ್ಲ. ಬೇರೆ ಸಮುದಾಯದವರನ್ನು ನಾವು ವಿರೋಧಿಸುವುದಿಲ್ಲ. ಆದರೆ ಒಕ್ಕಲಿಗ ಜಾತಿಗೆ ಸಿಗಬೇಕಾದ ಮೀಸಲಾತಿ ಹಕ್ಕನ್ನು ನಾವು ಕೇಳುತ್ತಿದ್ದು ಕೂಡಲೇ ಸರ್ಕಾರ ಈಡೇರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಕ್ಕಲುತನ ಮಾಡುವವರು ಶ್ರಮಪಟ್ಟು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಒಕ್ಕಲಿಗರಾರೂ ಭಿಕ್ಷುಕರಲ್ಲ. ಅವರು ಒಕ್ಕಲುತನ ಮಾಡಿಕೊಂಡು ಅನ್ನದಾತರಾಗಿದ್ದಾರೆ. ಒಕ್ಕಲಿಗರು ಶೇ. 3 ರಷ್ಟು ಮೀಸಲಿಗೆ ಯಾರೂ ಭಿಕ್ಷೆ ಬೇಡುತ್ತಿಲ್ಲ. ನಮ್ಮ ಸಮುದಾಯದ ಸ್ವಾಮೀಜಿಗಳ ಮುಖಂಡತ್ವದಲ್ಲಿ ಸಚಿವರಾದ ಅಶೋಕ್ ಅವರನ್ನು ಕರೆಸಿ ಅವರಿಗೆ ನಮ್ಮ ಮನವಿ ಸಲ್ಲಿಸಿದ್ದೇವೆ. ಒಕ್ಕಲಿಗ ಸಮುದಾಯದ ಜನಸಂಖ್ಯೆ ಶೇ.15-16 ರಷ್ಟು ಇದ್ದರೂ ನಾವು ಶೇ.12 ರಷ್ಟು ಮೀಸಲಾತಿ ಕೇಳಿದ್ದೇವೆ. ಒಕ್ಕಲಿಗ ಜಾತಿಗೆ ಅಷ್ಟು ಮೀಸಲಾತಿ ನೀಡಬೇಕು, ಬೇರೆಯವರ ಮೀಸಲಾತಿ ಕಿತ್ತುಕೊಂಡು ನಮಗೆ ಮೀಸಲಾತಿ ನೀಡುವುದು ಬೇಡ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರಿಗೆ ಏನು ಸಿಗಬೇಕೋ ಸಿಗಲಿ, ವೀರಶೈವರು, ಪಂಚಮಸಾಲಿಗಳು, ಬ್ರಾಹ್ಮಣರು, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗಗಳಿಗೆ ಏನು ಸಿಗಬೇಕೊ ಸಿಗಲಿ. ಅದಕ್ಕೆ ನಮ್ಮ ತಕರಾರಿಲ್ಲ. ನಮ್ಮ ಸಮಾಜದ ಜನಸಂಖ್ಯೆ ಆಧಾರದಲ್ಲಿ ನಾವು ಶೇ.12 ರಷ್ಟು ಕೇಳಿದ್ದು, ನಮ್ಮ ಹಕ್ಕು ನಾವದನ್ನು ಆಗ್ರಹಿಸುತ್ತೇವೆ ಎಂದು ತಿಳಿಸಿದರು.