
ಶಾಸಕಿ ಪೂರ್ಣಿಮಾ ವಿರುದ್ಧ ರೈತರ ಅಸಮಾಧಾನ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆ ದಿವ್ಯಪ್ರಭು, ಸಂಸದ ನಾರಾಯಣಸ್ವಾಮಿ ಅವರ ವಿರುದ್ಧ ಹಿರಿಯೂರು ತಾಲೂಕಿನ ರೈತರು, ರೈತ ಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದೆ.
80 ದಶಕಗಳ ನಂತರ ಹಿರಿಯೂರು ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಯಾಗಿದೆ. ಸತತವಾಗಿ ಮೂರು ತಿಂಗಳ ಕಾಲ ಕೋಡಿ ಭರ್ತಿಯಾಗಿ ಹರಿದು ಪೋಲಾಗಿದೆ. ಕನಿಷ್ಠ ಅಚ್ಚುಕಟ್ಟು ಪ್ರದೇಶಕ್ಕೆ ನಿರ್ದಿಷ್ಟ ಸಮಯದಲ್ಲಿ ನೀರು ಹರಿಸಲಾಗುತ್ತದೆ ಎನ್ನುವ ಒಂದು ವೇಳಾ ಪಟ್ಟಿಯನ್ನು ಜಿಲ್ಲಾಡಳಿತ ಪ್ರಕಟಿಸಲಿಲ್ಲ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.
ಇಲ್ಲಿನ ವೀರಶೈವ ಪತ್ತಿನ ಸಹಾಕರ ಸಂಘದಲ್ಲಿ ಸಭೆ ಸೇರಿದ್ದ ರೈತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಮಾತನಾಡಿದರು.
ಜಿಲ್ಲಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ರೈತರ ಸಭೆ ನಡೆಸಿ ವಾರ್ಷಿಕವಾಗಿ ಇಂತಿಂಥ ತಿಂಗಳಲ್ಲಿ ನೀರು ಹರಿಸಲಾಗುತ್ತದೆ ಎಂದು ವೇಳಾ ಪಟ್ಟಿ ಪ್ರಕಟಿಸಿದ್ದರೆ ರೈತರು ತಡಿ ಫಸಲು ಅಥವಾ ಬೇರೆ ಯಾವುದೇ ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ಕೆಲಸವನ್ನು ಜಿಲ್ಲಾಧಿಕಾರಿಗಳಾಗಲಿ, ಜಿಲ್ಲೆಯ ಜನಪ್ರತಿನಿಧಿಗಳಾಗಲಿ ಮಾಡಲಿಲ್ಲ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದರು.
ಡ್ಯಾಂ ಭರ್ತಿಯಾಗಿರುವುದರಿಂದ ಭವಿಷ್ಯದಲ್ಲಿ ವಿವಿ ಸಾಗರಕ್ಕೆ ನಿರಂತರವಾಗಿ ನೀರು ಹರಿಯುವ ಸಾಧ್ಯತೆ ಇರುವುದರಿಂದ ರೈತರು ಕಬ್ಬು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಆದರೆ ಸಮಾಪನಗೊಂಡಿರುವ ವಾಣಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕಾಗಿ ಯಾರೊಬ್ಬರು ಪ್ರಯತ್ನ ಮಾಡಲಿಲ್ಲ. ಕೇವಲ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ವಾಣಿ ಸಕ್ಕರೆ ಕಾರ್ಖಾನೆ ಆರಂಭ ಕುರಿತು ಒಂದು ಸಭೆ ನಡೆಸಿದರು. ಮುಖ್ಯಮಂತ್ರಿಗಳು ತಜ್ಞರ ಸಮಿತಿ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು. ಯಾವ ಭರವಸೆಯೂ ಈಡೇರಲಿಲ್ಲ ಎಂದು ರೈತ ಪರ ಸಂಘಟನೆಗಳು ಬೇಸರ ವ್ಯಕ್ತಪಡಿಸಿದವು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರಿಯಬ್ಬೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿವಿ ಸಾಗರಕ್ಕೆ 5 ಟಿಎಂಸಿ ನೀರು ನೀಡುವ ಕುರಿತು ಭರವಸೆ ನೀಡಿದ್ದರು. ಇಂದಿನ ಡ್ಯಾಂ ನೀರಿನ ಬಳಕೆ 9 ಟಿಎಂಸಿ ಅಷ್ಟು ಆಗಿದೆ. ಆದರೆ ಭದ್ರಾ ಮೇಲ್ದಂಡೆಯಲ್ಲಿ ಕೇವಲ 2 ಟಿಎಂಸಿ ನೀರು ನಿಗದಿ ಮಾಡಲಾಗಿದೆ. ಭವಿಷ್ಯದಲ್ಲಿ ಕೈಗಾರಿಕಾ ಹಬ್ ಗೆ ನೀರು ನೀಡಬೇಕಾಗುತ್ತದೆ, ಜೊತೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿಗಳಿಗೂ ಕುಡಿಯುವ ನೀರು ಸೇರಿದಂತೆ ಕೆರೆ ಭರ್ತಿ ಮಾಡುವ ಪ್ರಯತ್ನ ಸಾಗಿದೆ, 2 ಟಿಎಂಸಿ ನೀರಿನಲ್ಲಿ ಕುಡಿಯುವ ನೀರಿಗೆ ಸಾಲದು, ಪರಿಸ್ಥಿತಿ ಈಗಾದರೆ ಅಚ್ಚುಕಟ್ಟು ಪ್ರದೇಶದ ರೈತರ ಪರಿಸ್ಥಿತಿ ಅತ್ಯಂತ ಗಂಭೀರವಾಗಿರಲಿದೆ ಎಂದು ರೈತರು ಆತಂಕ ವ್ಯಕ್ತ ಪಡಿಸಿದರು.
ಇದೇ ಜನವರಿ 31ರೊಳಗೆ ಅಚ್ಚುಕಟ್ಟು ಪ್ರದೇಶಕ್ಕೆ ವಿವಿ ಸಾಗರದ ನೀರು ಹರಿಸುವ ಕುರಿತು ಅಂತಿಮ ತೀರ್ಮಾನ ಮಾಡಬೇಕು. ಅಲ್ಲದೆ ವಾರ್ಷಿಕವಾಗಿ 5 ಸಲ ಅಂದರೆ ಪ್ರತಿ ಎರಡು ತಿಂಗಳಿಗೊಮ್ಮೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಕುರಿತು ವೇಳಾ ಪಟ್ಟಿ ಪ್ರಕಟಿಸಬೇಕು ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ರೈತರು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಇನ್ನೂ ಕಳೆದ ಎರಡು ವರ್ಷಗಳಿಂದ ಭದ್ರಾ ಮೇಲ್ದಂಡೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಜೊತೆಗೆ ಅಜ್ಜಂಪುರ ಸಮೀಪ ಇರುವ ರೈತರ ಸಮಸ್ಯೆ ಈಡೇರಿಸಿಲ್ಲ, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ವಿವಿ ಸಾಗರಕ್ಕೆ ನೀರು ಹರಿಯುವುದು ಮಿಲಿಯನ್ ಡಾಲರ್ ಯಕ್ಷ ಪ್ರಶ್ನೆ ಆಗಲಿದೆ ಎಂದು ರೈತರು ಆತಂಕ ವ್ಯಕ್ತ ಪಡಿಸಿದರು.
ರೈತ ಮುಖಂಡರಾದ ಕಸವನಹಳ್ಳಿ ರಮೇಶ್, ಹುಚ್ಚವ್ವನಹಳ್ಳಿ ಎಚ್.ಆರ್.ತಿಮ್ಮಯ್ಯ, ಆರನಕಟ್ಟೆ ಎಸ್.ಬಿ.ಶಿವಕುಮಾರ್, ಆಲೂರು ಸಿದ್ದರಾಮಣ್ಣ, ಬಬ್ಬರೂ ಎಂ.ಟಿ.ಸುರೇಶ್, ಮೂಡಲಗಿರಿಯಪ್ಪ, ಪಿಟ್ಲಾಲಿ ಶ್ರೀನಿವಾಸ್, ಆದಿವಾಲ ಫಾರಂ ಎಂ.ರಾಜೇಂದ್ರನ್(ಮಣಿ), ಆರ್.ಕೆ.ಗೌಡ, ನಾರಾಯಣಾಚಾರ್, ಮಾಳಿಗೆ ಮಂಜುನಾಥ್, ವಿವಿ ಪುರ ವಿಶ್ವನಾಥ್, ಶಿವಣ್ಣ ಸೇರಿದಂತೆ ಮತ್ತಿತರ ರೈತ ನಾಯಕರು, ರೈತರು ಸಭೆಯಲ್ಲಿ ಹಾಜರಿದ್ದರು.