
ಅಸಮಾನತೆ ಹೋಗಲಾಡಿಸಲು ಹೆಣ್ಣಿಗೆ ಸಮಾನ ಅವಕಾಶ ನೀಡಿ–ಡಾ.ವಿಶ್ವನಾಥ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಹಾಗೂ ಪೋತ್ಸಾಹ ನೀಡಬೇಕು ಎಂದು ದಾವಣಗೆರೆ ವಿಶ್ವ ವಿದ್ಯಾಲಯದ ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ವಿಶ್ವನಾಥ ಹೇಳಿದರು.
ಮಂಗಳವಾರ ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜ್ಞಾನಗಂಗೋತ್ರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಪ್ರಯುಕ್ತ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕೋವಿಡ್ ಮುಂಜಾಗ್ರತಾ ಲಸಿಕಾ ಅಭಿಯಾನ ಮತ್ತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿರಾ ಗಾಂಧಿಯವರು ವಿಶ್ವದ ಮೊದಲ ಮಹಿಳಾ ಪ್ರಧಾನಿಯಾದ ನೆನಪಿಗಾಗಿ ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಮೊದಲ ಬಾರಿಗೆ 2008 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಯಿತು. ದಿನಾಚರಣೆ ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಹಿಂದೆ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ತಾರತಮ್ಯಕ್ಕೆ ಒಳಪಡಿಸುವ ಸಮಯವಿತ್ತು. ಇಂದು ಸನ್ನಿವೇಶವನ್ನು ಬದಲಾಯಿಸಿದೆ. ಮಹಿಳೆಯರು ಸಬಲೀಕರಣವಾಗಿ ಪ್ರತಿಯೊಂದು ವೃತ್ತಿಯಲ್ಲೂ ಮುಂದೆ ಬಂದಿದ್ದಾರೆ.
ಹೆಣ್ಣುಮಕ್ಕಳ ಸ್ವಾತಂತ್ರ್ಯ ಹಾಗೂ ಆರೋಗ್ಯ ಮತ್ತು ಪೋಷಣೆಗೆ ಉತ್ತೇಜನ ನೀಡಲಾಗಿದೆ. ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಉತ್ತೇಜಿಸುವಲ್ಲಿ ರಾಷ್ಟ್ರೀಯ ಬಾಲ ಹೆಣ್ಣು ದಿನವು ದೊಡ್ಡ ಮಹತ್ವವನ್ನು ಹೊಂದಿದೆ. ಈ ಬಾರಿಯ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಧ್ಯೇಯವಾಕ್ಯ “ಡಿಜಿಟಲ್ ಜನರೇಷನ್, ನಮ್ಮ ಪೀಳಿಗೆ” ಎನ್ನುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್ ರೆಡ್ಡಿ ಕೋವಿಡ್ ಲಸಿಕೆ ಮಹತ್ವವನ್ನು ತಿಳಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಾರುತಿಪ್ರಸಾದ್, ರಂಗಾರೆಡ್ಡಿ, ಪ್ರಶಾಂತ್, ಜ್ಯೋತಿ ಆರೋಗ್ಯ ಸುರಕ್ಷತಾಧಿಕಾರಿ ಮಂಜುಳಾ, ಶಿಲ್ಪ, ವನಜಾಕ್ಷಿ, ಕೆ.ಹೆಚ್.ಪಿ.ಟಿ. ಸಂಚಾಲಾಕಿ ತಿಪ್ಪಮ್ಮ, ಎನ್.ಎಸ್.ಎಸ್.ಅಧಿಕಾರಿ ಶಶಿಧರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 75 ಅರ್ಹ ವಿದ್ಯಾರ್ಥಿಗಳಿಗೆ ಕೋವಿಡ್ ಮುಂಜಾಗ್ರತಾ ಲಸಿಕೆ ನೀಡಲಾಯಿತು.