
ಎಲೆಕ್ಷನ್ ಎಫೆಕ್ಟ್, ಅಧಿಕಾರಿಗಳ ವರ್ಗಾವಣೆ ಮಾರ್ಗಸೂಚಿ ಪ್ರಕಟ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2023ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸದರಿ ಆದೇಶದನ್ವಯ ಸರ್ಕಾರಿ ನೌಕರರ ವರ್ಗಾವಣೆಗಳನ್ನು ದಿನಾಂಕ 01.05.2022 ರಿಂದ 15,06,2022 ರವರೆಗೆ ಮಾಡಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ಪ್ರಸ್ತುತ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣಾ ಅವಧಿಯು ಮುಕ್ತಾಯಗೊಂಡಿದೆ.
ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಮಾರ್ಗಸೂಚಿ:
ಭಾರತೀಯ ಚುನಾವಣಾ ಆಯೋಗವು ದಿನಾಕ 08.12.2022 ರಂದು ರಾಜ್ಯ ಸರ್ಕಾರಕ್ಕೆ ಬರದಿರುವ ಪತ್ರದಲ್ಲಿ ಕರ್ನಾಟಕ ವಿಧಾನ ಸಭೆಗೆ 2023 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಹಿನ್ನಲೆಯಲ್ಲಿ ಅಧಿಕಾರಿ ಅಥವಾ ಸಿಬ್ಬಂದಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನು ನೀಡಿರುತ್ತದೆ. ಮುಂದುವರಿದು, ಈ ಮಾರ್ಗಸೂಚಿಗಳ ಅನುಸಾರ ಕ್ರಮವಹಿಸಿ ಆಯೋಗಕ್ಕೆ ದಿನಾಂಕ 31.01,2023 ರ ಒಳಗಾಗಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿರುತ್ತದೆ.
ವರ್ಗಾವಣಾ ಅವಧಿ ಮುಗಿದ ನಂತರ, ಕೆಲವೊಂದು ವಿರಳ ಸಂದರ್ಭಗಳಲ್ಲಿ ಮಾತ್ರ ಮುಖ್ಯಮಂತ್ರಿಯವರ ಅನುಮೋದನೆ ಪಡೆದು ವರ್ಗಾವಣೆಗಳನ್ನು ಮಾಡಲಾಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಅನುಸರಿಸುವಂತೆ ಸೂಚನೆ ನೀಡಲಾಗಿದೆ.
ಕಾಲಮಿತಿಯಲ್ಲಿ ಈ ವರ್ಗಾವಣೆ ಸ್ಥಳನಿಯುಕ್ತಿಗಳನ್ನು ಮಾಡಬೇಕಿರುವುದರಿಂದ, ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚನೆಗಳ ಅನುಸಾರ ದಿನಾಂಕ 31.01.2023ರ ಒಳಗಾಗಿ ವರ್ಗಾವಣೆ ಮತ್ತು ಸ್ಥಳನಿಯುಕ್ತಿಗೊಳಿಸುವ ಅಧಿಕಾರವನ್ನು ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣಾ ಅವಧಿಯಲ್ಲಿ ಯಾವ ನಿರ್ದಿಷ್ಟ ಪ್ರಾಧಿಕಾರಗಳ ವರ್ಗಾವಣೆಯನ್ನು ಕೈಗೊಳ್ಳುತ್ತಿದ್ದರೋ ಅವರಿಗೇ ಪ್ರತ್ಯಾಯೋಜಿಸಿ ಆದೇಶಿಸಲಾಗಿದೆ.
ವರ್ಗಾವಣೆ ಮಾರ್ಗಸೂಚಿ-
2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ವರ್ಗಾವಣೆಗಳನ್ನು ಸಂಪೂರ್ಣವಾಗಿ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳ ಅನುಸಾರ ಕೈಗೊಳ್ಳಲಾಗಿರುತ್ತದೆ ಎಂದು ಸಂಬಂಧಿಸಿದ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಪ್ರಮಾಣೀಕರಿಸುವುದು. ಈ ಮೇಲ್ಕಂಡ ಅಂಶಗಳನ್ನು ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಅನುಸರಿಸುವಂತೆ ಸೂಚಿಸಿ ಸರ್ಕಾರ ಆದೇಶಿಸಿದೆ.