
ಪ್ರಭಾವಿ ಗಣಿ ಕಂಪನಿಗಳಿಂದ ಸರ್ಕಾರಿ ಹಳ್ಳ ಬಂದ್, ಕಣ್ಮುಚ್ಚಿ ಕೂತ ಜಿಲ್ಲಾಡಳಿತ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಭಾವಿ ಎರಡು ಗಣಿ ಕಂಪನಿಗಳಿಂದ ಕಾನೂನು ಬಾಹಿರವಾಗಿ ಸರ್ಕಾರಿ ಹಳ್ಳ ಬಂದ್ ಮಾಡಿ ಮಾರ್ಗ ಬದಲಾಯಿಸಿರುವುದರಿಂದ ಆ ಭಾಗದ ರೈತರಿಗೆ ತೀವ್ರ ತೊಂದರೆಯಾಗಿ ತೋಟಗಳು ಒಣಗಿ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದ್ದು ಸಂತ್ರಸ್ತ ರೈತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು ಎಂದು ಸಂತ್ರಸ್ತ ರೈತ ಎಸ್.ವಿರೇಶ್ ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡು ಗಣಿ ಕಂಪನಿಗಳು ಅಕ್ರಮವಾಗಿ ಸರ್ಕಾರಿ ಹಳ್ಳದ ಮಾರ್ಗ ಬದಲಾಯಿಸಿದ್ದರಿಂದಾಗಿ ಮಳೆ ನೀರು ಬೇರೆ ಕಡೆದು ಹರಿದು ಹೋಗುತ್ತಿರುವುದರಿಂದ ಆ ಭಾಗದ ತೋಟ, ಹೊಲ ಗದ್ದೆಗಳಿಗೆ ನೀರು ಸಿಗದೆ ತೊಂದರೆಯಾಗಿದೆ, ಇದರಿಂದ ಅಂರ್ತಜಲ ಮಟ್ಟ ಪಾತಾಳ ಕಂಡಿದ್ದು ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂ.ಗಳನ್ನು ಭೂಮಿ ಸುರಿದು ಸಾಲದ ಸುಳಿಗೆ ಸಿಲುಕುತ್ತಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು. ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಸಮೀಪದ ದಿಂಡದಹಳ್ಳಿಯ ರಿ.ಸ.ನಂ. ೨೦/೪ ಮತ್ತು ೨೦/೫ರ ಜಮೀನಿನಲ್ಲಿ ಎರಡು ಪ್ರಭಾವಿ ಗಣಿ ಕಂಪನಿಯವರು ಸರ್ಕಾರಿ ಹಳ್ಳವನ್ನು ಬೇರೆಡೆಗೆ ತಿರುಗಿಸಿ ಅಕ್ರಮವಾಗಿ ಗಣಿ ಚಟುವಟಿಕೆ ನಡೆಸಲು ಮತ್ತು ಲಾರಿಗಳ ಸಂಚಾರ ಮಾಡಲು ಸರ್ಕಾರಿ ಹಳ್ಳದ ಜಾಗ ಬಳಸಿಕೊಂಡಿರುತ್ತಾರೆ. ಸ್ಥಳೀಯ ಆಡಳಿತ, ತಾಲೂಕು ಆಡಳಿತ ಸರ್ಕಾರಿ ಹಳ್ಳಿದ ಮಾರ್ಗ ಬದಲಾಯಿಸಿ ತೊಂದರೆ ನೀಡಿರುವ ಬಗ್ಗೆ ಅಗತ್ಯ ವರದಿಯನ್ನು ಜಿಲ್ಲಾಡಳಿತಕ್ಕೆ ಮಾಡಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ರೈತ ವಿರೋಧಿ ಧೋರಣೆಯಾಗಿದೆ ಎಂದು ನೋವು ತೋಡಿಕೊಂಡರು. ಒಣಗುತ್ತಿರುವ ತೋಟಗಳನ್ನು ಉಳಿಸಿಕೊಳ್ಳಲು ಆರ್ಥಿಕವಾಗಿ ಬಲಿಷ್ಠರಾಗಿರುವವರು ೩-೪ ಕಿ.ಮೀ ದೂರದಿಂದ ನೀರನ್ನು ತಮ್ಮ ತೋಟಗಳಿಗೆ ಪೈಪ್ ಮಾಡಿ ನೀರು ತರುತ್ತಿದ್ದಾರೆ. ಆದರೆ ಆರ್ಥಿಕ ದುರ್ಬಲರು ಸಂಕಷ್ಟಕ್ಕೆ ಸಿಲುಕಿದ್ದು ಮನೆ ಮಠ ಮಾರಾಟ ಮಾಡುವಂತ ದುಸ್ಥಿತಿಗೆ ಬಂದಿದ್ದೇವೆ ಎಂದು ನೋವು ತೋಡಿಕೊಂಡರು.
ಇದಲ್ಲದೆ ಗಣಿ ಕಂಪನಿಗಳು ರೈಲ್ವೆಯಾರ್ಡಿನಲ್ಲಿ ಸರಿಯಾದ ರೀತಿ ನಿರ್ವಹಣೆ ಮಾಡಿಲ್ಲ, ಸೂಕ್ತ ನಿಯಮಾವಳಿಗಳನ್ನು ಪಾಲಿಸಿಲ್ಲ, ಲಾರಿಗಳ ಓಡಾಟದಿಂದ ಉಂಟಾಗಯವ ಧೂಳಿನಿಂದ ತೋಟಗಳು ಹಾಳಾಗಿವೆ. ಸಾಕಷ್ಟು ಆದಾಯ ಬಾರದೆ ಕುಂಠಿತವಾಗಿದೆ ಎಂದು ವಿರೇಶ್ ದೂರಿದರು.
ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಿದ್ದರೂ ಇದುವರೆವಿಗೂ ಸಮಸ್ಯೆ ಬಗೆಹರಿದಿಲ್ಲ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಾರೆ. ಇದರ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದೆ. ಆದರೂ ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕೂ ಬೆಲೆ ನೀಡಿಲ್ಲ, ತುರ್ತು ಪರಿಹಾರ ಮಾಡದಿದ್ದಲ್ಲಿ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.
ಡಾ.ವಿಜಯಕುಮಾರ್ ಮಾತನಾಡಿ, ಗಣಿ ಕಂಪನಿಗಳ ಲಾರಿಗಳು ಮತ್ತು ಅದಿರು ತುಂಬಿದ ಲಾರಿಗಳ ಓಡಾಟದಿಂದ ರೈತರ ಫಸಲುಗಳ ಮೇಲೆ ಧೂಳು ಬಿದ್ದು ಉತ್ಪಾದಿಸುವ ಆಹಾರ ಧಾನ್ಯಗಳು ವಿಷಪೂರಿತವಾಗಿರುತ್ತದೆ. ಅಲ್ಲದೆ ಜನ ವಸತಿ ಪ್ರದೇಶದ ಜನತೆ ಇಂತಹ ಧೂಳು ಸೇವನೆ ಮಾಡುವುದರ ಮುಲಕ ವಿವಿಧ ರೀತಿಯ ರೋಗಗಳಿಗೆ ಜನತೆ ಬಲಿಯಾಗುತ್ತಾರೆ. ಇದರಿಂದ ಅಸ್ತಮಾ ಸೇರಿದಂತೆ ಇತರೆ ರೋಗಗಳಿಗೆ ತುತ್ತಾಗಿ ಔಷಧೋಪಾಚಾರ ಪಡೆಯಲು ಸಾವಿರಾರು ರೂ.ಗಳನ್ನು ವ್ಯಯ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಗಣಿ ಕಂಪನಿಗಳು ಸೃಷ್ಠಿಸುತ್ತಿರುವ ವಾಯು ಮಾಲಿನ್ಯ ತಡೆಯಬೇಕು, ಜನ ಜಾನುವಾರುಗಳಿಗೆ ಶುದ್ಧ ಗಾಳಿ, ನೀರು ದೊರೆಯುವಂತೆ ಮಾಡಬೇಕೆಂದು ಅವರು ಒತ್ತಾಯಿಸಿದರು.