
ವಿಧಾನ ಪರಿಷತ್ ಸದಸ್ಯ ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ಮಹತ್ವದ ದಾಖಲೆ ವಶ…
ಚಂದ್ರವಳ್ಳಿ ನ್ಯೂಸ್, ರಾಣೆಬೆನ್ನೂರು:
ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಅವರ ರಾಣೇಬೆನ್ನೂರಿನ ಬೀರೇಶ್ವರ ನಗರದಲ್ಲಿರುವ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ತಡರಾತ್ರಿವರೆಗೂ ಪರಿಶೀಲನೆ ಮಾಡಿರುವ ಘಟನೆ ನಡೆದಿದೆ.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಸಂದರ್ಭದಲ್ಲಿ ಶಂಕರ್ ಅವರ ಗೃಹ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲು ಸಂಗ್ರಹಿಸಿಟ್ಟಿದ್ದ ಶಂಕರ್ ಭಾವಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ- ಲೋಟ ಹಾಗೂ ಎಲ್ಕೆಜಿಯಿಂದ ಪದವಿ ಕಾಲೇಜುಗಳವರೆಗೆ ಹಂಚಲು ತಂದಿರುವ ಸ್ಕೂಲ್ ಬ್ಯಾಗ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹಾವೇರಿ ಉಪವಿಭಾಗಾಧಿಕಾರಿಗೆ ದಾಖಲೆ ಪತ್ರ, ಬಿಲ್ ಮತ್ತು ಸ್ಟಾಕ್ ಚೆಕ್ ತಪಾಸಣೆ ನಡೆಸುವಂತೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಆಕ್ರೋಶ: ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಶಂಕರ್ ಮನೆ ಮೇಲೆ ದಾಳಿ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಶಂಕರ್ ಅವರ ಮನೆ ಬಳಿ ನೆರೆದ ಬೆಂಬಲಿಗರು ರಾಜಕೀಯ ದುರುದ್ದೇಶದಿಂದ ದಾಳಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಲು ಶಂಕರ್ ಅವರ ತ್ಯಾಗ ಕಾರಣವಾಗಿದೆ. ಅದನ್ನೆಲ್ಲ ಮರೆತು ತ್ಯಾಗ ಮಾಡಿದವರ ಮನೆ ಮೇಲೆ ದಾಳಿ ನಡೆಸಿದ್ದು ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.