
ವಿಜಯ ಸಂಕಲ್ಪ ಯಾತ್ರೆಗೆ ಶಾಸಕಿ ಪೂರ್ಣಿಮಾ ಗೈರು!?, ಹಿರಿಯೂರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುತ್ತಾ?…
ವರದಿ-ಹೆಚ್.ಸಿ.ಗಿರೀಶ್ ಹರಿಯಬ್ಬೆ, ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಕೋಟೆನಾಡು ಚಿತ್ರದುರ್ಗ ಮತ್ತು ಕಲ್ಪತರ ನಾಡು ತುಮಕೂರು ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದ ಬೃಹತ್ ವಿಜಯ ಸಂಕಲ್ಪ ಯಾತ್ರೆಗೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ಹಿಂದುಳಿದ ವರ್ಗಗಳ ಗೊಲ್ಲ ಸಮುದಾಯ ನಾಯಕಿ ಪೂರ್ಣಿಮಾ ಶ್ರೀನಿವಾಸ್ ಅವರ ಗೈರು ಎದ್ದು ಕಾಣುತ್ತಿತ್ತು.
ಕೋಟೆನಾಡು ಚಳ್ಳಕೆರೆ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಮಾ.17 ರಂದು ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ಪೂರ್ಣಿಮಾ ಶ್ರೀನಿವಾಸ್ ಗೈರು ಆಗಿದ್ದು ಒಂದು ಕಡೆಯಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಲ್ಪತರ ನಾಡು ಮಧುಗಿರಿ, ತುಮಕೂರು, ಚಿಕ್ಕನಾಯಕನಹಳ್ಳಿ ಕ್ಷೇತ್ರಗಳಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೈರು ಆಗುವ ಪಕ್ಷ ತೊರೆಯುವುದು ನೂರಷ್ಟು ಸತ್ಯ ಎನ್ನುವ ಮಾಹಿತಿಯನ್ನು ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದಂತೆ ಕಾಣುತ್ತಿದೆ.
ಚಿತ್ರದುರ್ಗ ಜಿಲ್ಲೆಯ ವಿಜಯ ಸಂಕಲ್ಪ ಯಾತ್ರೆಗೆ ಪೂರ್ಣಿಮಾ ಶ್ರೀನಿವಾಸ್ ಗೈರಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನಡೆ ನಿಗೂಢವಾಗಿಯೇ ಇದೆ. ಅದರಲ್ಲೂ ವಿಜಯ ಸಂಕಲ್ಪ ಯಾತ್ರೆಯ ಉಸ್ತುವಾರಿ ಸಮಿತಿ ಸದಸ್ಯರಾಗಿದ್ದ ಶಾಸಕಿ ಪೂರ್ಣಿಮಾ ಅವರು ಖುದ್ದು ಕೋಟೆ ನಾಡಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಿದರು ಶಾಸಕಿ ಪೂರ್ಣಿಮಾ ಗೈರು ಹಲವು ವ್ಯಾಖ್ಯಾನಗಳನ್ನು ಹುಟ್ಟು ಹಾಕಿದೆ.
ವಿಜಯ ಸಂಕಲ್ಪ ಯಾತ್ರೆಯ ಜಿಲ್ಲೆಯ ಉಸ್ತುವಾರಿ ಸಮಿತಿ ಸದಸ್ಯೆ ಶಾಸಕಿ ಪೂರ್ಣಿಮಾ ಅವರೇ ಗೈರಾಗುವ ಮೂಲಕ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರವೂ ಆಗಿದೆ. ಪೂರ್ಣಿಮಾ ನಡೆಗೆ ಜಿಲ್ಲಾ ಬಿಪಿಜೆ ಪಕ್ಷದಲ್ಲಿ ಗುಸು ಗುಸು ಚರ್ಚೆ ನಡೆಯುತ್ತಿದ್ದು ಶಾಸಕಿಯವರು ಪಕ್ಷ ತೊರೆಯುವ ಸಾಧ್ಯತೆ ನಿಚ್ಚಳವಾಗಿದೆ ಎನ್ನಲಾಗುತ್ತಿದೆ. ಅವರು ಈ ಬಾರಿ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ ಎನ್ನವ ಅಂಶವು ಹರಿದಾಡುತ್ತಿದೆ. ಇದರ ಮಧ್ಯ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಕಾಂಗ್ರೆಸ್ ಸೇರ್ಪಡೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪೂರ್ಣಿಮಾ ಕಾಂಗ್ರೆಸ್ ಸೇರುತ್ತಾರೆ ಎಂದು ಜಿಲ್ಲೆಯಲ್ಲಿ ಬಾರಿ ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ಚರ್ಚೆಗೆ ಶಾಸಕಿ ಪೂರ್ಣಿಮಾ ಗೈರು ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಬಿಜೆಪಿ ಪಕ್ಷವು ಶಿರಾ ಉಪ ಚುನಾವಣೆ ಸೇರಿದಂತೆ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಗೊಲ್ಲ ಸಮುದಾಯ ಇರುವ ಎಲ್ಲ ಕಡೆಗಳಲ್ಲೂ ಶಾಸಕಿ ಪೂರ್ಣಿಮಾ ಅವರನ್ನು ಆಹ್ವಾನಿಸಿ ಮತ ಪ್ರಚಾರ ಮಾಡಿಸಿತ್ತು. ಆದರೆ 2023ರ ವಿಧಾನಸಭಾ ಚುನಾವಣೆ ತಿಂಗಳೊಪ್ಪತ್ತು ಬಾಕಿ ಇರುವಂತ ಸಂದರ್ಭದಲ್ಲಿ ಅದರಲ್ಲೂ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲೇ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಇದ್ದರೂ ಕೂಡಾ ವಿಜಯ ಸಂಕಲ್ಪ ಯಾತ್ರೆ ಕಡೆ ಸುಳಿಯದಿರುವುದನ್ನು ನೋಡಿದರೆ ರಾಜಕೀಯ ವಿಶ್ಲೇಷಕರು ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುವುದು ನಿಶ್ಚಿತ ಎನ್ನುವ ಮಾತುಗಳನ್ನಾಡುತ್ತಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತೆ ಕಳೆದೊಂದು ತಿಂಗಳಿಂದ ಪೂರ್ಣಿಮಾ ಶ್ರೀನಿವಾಸ್ ಅಥವಾ ಅವರ ಪತಿ ಡಿ.ಟಿ.ಶ್ರೀನಿವಾಸ್ ಅವರು ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವುದು ಫೈನಲ್ ಆಗಿದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಪೂರ್ಣಿಮಾ ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿ ಅವರು ಕೇಳುವ ಕ್ಷೇತ್ರಕ್ಕೆ ಟಿಕೆಟ್ ನೀಡಿದರೆ ಹಿರಿಯೂರು ಕ್ಷೇತ್ರದಲ್ಲಿ ಗೆಲುವು ಸಾಧಿಸುವುದಲ್ಲದೆ ಅಕ್ಕ ಪಕ್ಕ ಕ್ಷೇತ್ರಗಳು ಸೇರಿದಂತೆ ರಾಜ್ಯದ ಇತರೆ ಗೊಲ್ಲ ಸಮುದಾಯ ಇರುವಂತ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸಲಿದೆ ಎನ್ನುವ ಅಂಶವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದು ಹೈ ಕಮಾಂಡ್ ಮಟ್ಟದಲ್ಲಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಹಿರಿಯೂರು ಟಿಕೆಟ್ ಫೈನಲ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.
ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತ್ರ ತಮ್ಮ ರಾಜಕೀಯ ಶಿಷ್ಯ, ಮಾಜಿ ಸಚಿವ ಡಿ.ಸುಧಾಕರ್ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಸಡಿಲಿಸಿಲ್ಲ. ಇದಲ್ಲದೆ ಸ್ವತಃ ಡಿ.ಸುಧಾಕರ್ ಅವರೇ ಟಿಕೆಟ್ ನೀಡಿಕೆಯಲ್ಲಿ ಗೊಂದಲವಿಲ್ಲ, ನನಗೇ ಟಿಕೆಟ್ ಸಿಗಲಿದೆ, ಯಾರೂ ಅನುಮಾನ ಮಾಡುವುದು ಬೇಡ ಎನ್ನುವುದಾಗಿ ಹೇಳಿಕೆಯನ್ನೂ ನೀಡಿದ್ದಾರೆ. ಹಾಗಾಗಿ ಕೊನೆ ಕ್ಷಣದಲ್ಲಿ ಮಾಜಿ ಸಚಿವ ಸುಧಾಕರ್ ಅವರಿಗೆ ಹಿರಿಯೂರು ಟಿಕೆಟ್ ಸಿಕ್ಕರೆ ಆಗ ಪೂರ್ಣಿಮಾ ಶ್ರೀನಿವಾಸ್ ಅವರು ಅನಿವಾರ್ಯವಾಗಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗುತ್ತಿದೆ. 2023 ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬರುವುದು ಅನುಮಾನ ಆಗಿರುವುದರಿಂದ ಮತ್ತು ರಾಜಕೀಯ ಸಮೀಕ್ಷೆಗಳು ಕೂಡಾ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎನ್ನುವ ಅಂಶವನ್ನು ಹೊರ ಹಾಕಿರುವುದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಅಧಿಕಾರ ರಚನೆ ಮಾಡುವಂತ ಪಕ್ಷಕ್ಕೆ ಬೆಂಬಲ ನೀಡಿ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಖಾತೆ ಅಂತಹ ಪ್ರಮುಖ ಖಾತೆಯನ್ನು ಪಡೆಯಬಹುದು ಎನ್ನುವ ಉದ್ದೇಶ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಇದ್ದಂತೆ ಕಾಣುತ್ತಿದ್ದು ಕೈ ಟಿಕೆಟ್ ತಪ್ಪಿದರೆ ಅಂತಿಮವಾಗಿ ಜೆಡಿಎಸ್ ಪಕ್ಷಕ್ಕೂ ಹೋಗದೆ ಪಕ್ಷೇತರರಾಗಿ ಸ್ಪರ್ಧಿಸುವ ಮಹಾದಾಸೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅವರಿಚ್ಚೆಯಂತೆ ಯಾವುದೇ ಪಕ್ಷಕ್ಕೆ ಬಹುಮತ ಬಾರದೆ ಒಂದಿಷ್ಟು ಸೀಟುಗಳ ಅಗತ್ಯ ಬಿದ್ದು ಇವರು ಪಕ್ಷೇತರರಾಗಿ ಗೆದ್ದು ಸಚಿವರಾದರೆ ಹಿರಿಯೂರು ಕ್ಷೇತ್ರದ ಅಭಿವೃದ್ಧಿ ಜೊತೆಯಲ್ಲಿ ಇಡೀ ರಾಜ್ಯದಲ್ಲಿ ಪೂರ್ಣಿಮಾ ಗಮನ ಸೆಳೆಯುವುದರಲ್ಲಿ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.