
ಕಾಮಗಾರಿ ಆರಂಭಿಸದ ಗುತ್ತಿಗೆದಾರ ಕಪ್ಪು ಪಟ್ಟಿಗೆ-ಜಿಲ್ಲಾ ಕಾರ್ಯದರ್ಶಿ ಡಾ.ರಾಮ್ ಪ್ರಸಾತ್.ವಿ ಮನೋಹರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗುತ್ತಿಗೆ ಕಾರ್ಯಾದೇಶ ಪಡೆದು ಇದುವರೆಗೂ ಕೆಲಸ ಪ್ರಾರಂಭಿಸದ ಗುತ್ತಿಗೆದಾರರಿಗೆ ನೋಟಿಸ್ ನೀಡಿ,15 ದಿನದಲ್ಲಿ ಕೆಲಸ ಪ್ರಾರಂಭಿಸದೆ ಇದ್ದರೆ, ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಿ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ವಿ ಮನೋಹರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ನಗರದ ಜಿಲ್ಲಾ ಪಂಚಾಯಿತಿ ಮುಖ್ಯ ಕಚೇರಿ ಸಭಾಂಗಣದಲ್ಲಿ, ಜಲ ಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಅನುμÁ್ಠನ ಕುರಿತಂತೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅನುμÁ್ಠನಕ್ಕೆ ಅನುದಾನದ ಕೊರತೆ ಇಲ್ಲ. ಆದರೂ ಯೋಜನೆಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳುತ್ತಿಲ್ಲ. ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಬಿಲ್ ಪಡೆಯುವುದಕ್ಕೆ ಮುಂದಾಗುತ್ತಾರೆಯೇ ಹೊರತು, ಕಾಮಗಾರಿ ಪೂರ್ಣಗೊಳಿಸುವ ಪ್ರಾಮಾಣಿಕ ಯತ್ನ ಮಾಡುತ್ತಿಲ್ಲ. ಅಧಿಕಾರಿಗಳು ಮೇಲ್ವಿಚಾರಣೆ ನಡೆಸಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ನೀರು ಒದಗಿಸಲು ಪ್ರಯತ್ನಿಸಬೇಕು. ಕಾಮಗಾರಿಯ ವಿಸ್ತೃತ ಯೋಜನಾ ವರದಿ ಸಿದ್ದಪಡಿಸುವ ಮುನ್ನ ನೀರಿನ ಮೂಲಗಳ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ನಂತರವೇ ಪೈಪ್ ಲೈನ್ ಅಳವಡಿಕೆ ಮಾಡಬೇಕು. ಪೈಪ್ ಲೈನ್ ಅಳವಡಿಕೆ ಮಾಡಿ ಹಲವು ವರ್ಷಗಳ ಕಾಲ ನೀರು ಹರಿಸದೆ ಇದ್ದರೆ ಪೈಪ್ ಲೈನ್ ಗಳು ಒಡೆದು ಹಾಳಾಗುತ್ತವೆ. ಇದರಿಂದ ಸಾರ್ವಜನಿಕರ ಹಣ ಹಾಗೂ ಸಮಯ ವ್ಯರ್ಥವಾಗುತ್ತದೆ. ಇಂತಹ ಪ್ರಕರಣಗಳು ಕಂಡು ಬಂದರೆ ಸಂಬಂಧಪಟ್ಟ ಅಭಿಯಂತರರನ್ನು ಸಂಪೂರ್ಣ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕಾಮಗಾರಿಯಲ್ಲಿ ಬಳಸುತ್ತಿರುವ ಪ್ಲಾಸ್ಟಿಕ್ ಪೈಪ್ ಹಾಗೂ ಇತರೆ ವಸ್ತುಗಳ ಗುಣಮಟ್ಟದ ಬಗ್ಗೆ ಮೌಲ್ಯಮಾಪನ ಮಾಡಿಸಬೇಕು. ಜಲ ಜೀವನ್ ಮಿಷನ್ ಅಡಿಯಲ್ಲಿ ಈಗ ಹಳ್ಳಿಯೊಂದನ್ನು ಘಟಕವನ್ನಾಗಿ ಪರಿಗಣಿಸಿ ಟೆಂಡರ್ ಕರೆಯಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಸ್ಥಳೀಯ ಗುತ್ತಿಗೆದಾರರು ಹೆಚ್ಚು ಭಾಗವಹಿಸುತ್ತಿಲ್ಲ. ಸೂಕ್ತ ಅನುಭವದ ಕೊರತೆ ಹಾಗೂ ನಿಯಮಗಳ ಮಾಹಿತಿಯ ಕೊರತೆಯಿಂದಾಗಿ ಸ್ಥಳೀಯ ಗುತ್ತಿಗೆದಾರರು ಟೆಂಡರ್ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಇದರ ಲಾಭ ಪಡೆದ ದೂರದ ಊರುಗಳ ಗುತ್ತಿಗೆದಾರರು ಪೈಪ್ ಲೈನ್ ಗಳ ಸರಬರಾಜು ಇಲ್ಲ, ಕೆಲಸಗಾರರಿಲ್ಲ ಎಂಬ ನೆಪವೊಡ್ಡಿ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ವಿವರವಾದ ವರದಿಯೊಂದಿಗೆ ಟೆಂಡರ್ನಲ್ಲಿ ನಿಯಮಗಳನ್ನು ಸರಳೀಕರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚನೆ ನೀಡಿದರು.
ಶುದ್ಧ ಕುಡಿಯುವ ನೀರಿನ ಘಟಕಗಳ ವಿವರ ಪಡೆದುಕೊಳ್ಳಿ:
ಜಿಲ್ಲೆಯಲ್ಲಿ 1080 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ 1001 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 51 ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಈ ಕುರಿತು ಜಿಲ್ಲಾ ಪಂಚಾಯತಿ ಸಿಇಓ ಅವರು ಸಂಪೂರ್ಣ ವರದಿ ಪಡೆದುಕೊಳ್ಳಬೇಕು. ಮುಂದಿನ ಬಾರಿ ಇಂತಹ ಆರ್.ಓ. ಘಟಕಗಳಿಗೆ ಭೇಟಿ ನೀಡುತ್ತೇನೆ ಎಂದು ಡಾ. ರಾಮ್ ಪ್ರಸಾತ್ ವಿ ಮನೋಹರ ಹೇಳಿದರು.
ಸಭೆಯಲ್ಲಿ ಜಿ.ಪಂ. ಸಿಇಓ ಎಂ. ಎಸ್ .ದಿವಾಕರ್, ಉಪ ಕಾರ್ಯದರ್ಶಿ ತಿಮ್ಮಪ್ಪ, ಮುಖ್ಯ ಲೆಕ್ಕಾಧಿಕಾರಿ ಗಾಯತ್ರಿ ಸಿ.ಎಸ್, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹಾಂತೇಶಪ್ಪ ಜಿ ಕನ್ನೂರು, ಜಲ ಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ .ಎಸ್ ನಾಡರ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.