
ಬಿಜೆಪಿ ಶಾಸಕಿ ಪೂರ್ಣಿಮಾ ಅವರು ಕಾಂಗ್ರೆಸ್ ಮುಖಂಡ ಮಂಜುನಾಥ್ ಅವರನ್ನ ಭೇಟಿ ಬೆಂಬಲ ಕೋರುತ್ತಿರುವುದು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಿಜೆಪಿ ಪಕ್ಷದ ಹಿರಿಯೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಕಳೆದೆರಡು ದಿನಗಳಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಆಗಮಿಸಿದ ಸಂದರ್ಭದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಗೈರಾಗುವ ಮೂಲಕ ಪಕ್ಷಕ್ಕೆ ಬಿಸಿ ಮುಟ್ಟಿಸಿದ್ದರು. ಅಲ್ಲದೆ ಮಾ.19 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಹೊಳಲ್ಕೆರೆ ಮತ್ತು ಹೊಸದುರ್ಗ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿರುವುದಲ್ಲದೆ, ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮಗಳಿಗೂ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೈರಾಗಿರುವುದು ಎದ್ದು ಕಾಣುತ್ತಿತ್ತು.
ಇದಾದ ನಂತರ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಪಕ್ಷ ಗಾಳ ಹಾಕಿದೆ, ಹಿರಿಯೂರು ಟಿಕೆಟ್ ಪೂರ್ಣಿಮಾ ಗೆ ಫಿಕ್ಸ್ ಆಗಿದೆ ಎಂದೆಲ್ಲ ಜೋರ್ ಜೋರು ಸುದ್ದಿಗಳು ಪ್ರಕಟವಾಗಿದ್ದವು. ಇದರ ಮಧ್ಯ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಚಿತ್ರದುರ್ಗ ಜಿಲ್ಲೆಯ ಮಾದಿಗ ಸಮುದಾಯದ ಮುಖಂಡ ಜಿ.ಎಸ್.ಮಂಜುನಾಥ್ ಅವರನ್ನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಅವರ ಪತಿ ಡಿ.ಟಿ.ಶ್ರೀನಿವಾಸ್ ಇವರು ಭೇಟಿ ಮಾಡಿ ಬೆಂಬಲ ಕೋರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೋಟೋ ವೈರಲ್ ಆಗಿದೆ.
ಈ ಎಲ್ಲ ಅಂತೆ ಕಂತೆಗಳ ಮಧ್ಯ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರು ಮಾತ್ರ ಮಂಕು ಕವಿದಂತೆ ಆತಂಕದಲ್ಲಿ ಯಾರು ಪಕ್ಷದಲ್ಲಿರುತ್ತಾರೆ, ಯಾರು ಪಕ್ಷ ಬಿಡುತ್ತಾರೆ ಎನ್ನುವ ಚಿಂತೆಯಲ್ಲಿದ್ದಾರೆ.