
ಯಡಿಯೂರಪ್ಪ ರಾಜೀ ಸಂಧಾನ ಯಶಸ್ವಿ, ಮನಸ್ಸು ಬದಲಾಯಿಸಿದ ಪೂರ್ಣಿಮಾ, ನಿಟ್ಟುಸಿರು ಬಿಟ್ಟ ಸುಧಾಕರ್!?…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ಮಾರ್ಚ್-17 ರಂದು ಹಮ್ಮಿಕೊಂಡಿದ್ದ ಬೃಹತ್ ವಿಜಯ ಸಂಕಲ್ಪ ಯಾತ್ರೆಗೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾ.19 ರಂದು ಹೊಳಲ್ಕೆರೆ-ಹೊಸದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಗೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಮತ್ತು ವಿಜಯ ಸಂಕಲ್ಪ ಯಾತ್ರೆಯ ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯೆಯಾದ ಹಾಗೂ ಹಿಂದುಳಿದ ವರ್ಗಗಳ ಗೊಲ್ಲ ಸಮುದಾಯ ನಾಯಕಿ ಪೂರ್ಣಿಮಾ ಶ್ರೀನಿವಾಸ್ ಅವರ ಗೈರು ಆಗುವ ಮೂಲಕ ತೀವ್ರ ಚರ್ಚೆ ಹುಟ್ಟು ಹಾಕಿದ್ದರು.
ವಿಜಯ ಸಂಕಲ್ಪ ಯಾತ್ರೆಗೆ ಗೈರಾಗುವ ಮೂಲಕ ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ, ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್ ಒಪ್ಪಿಕೊಂಡಿದ್ದು ಕಾಂಗ್ರೆಸ್ ಟಿಕೆಟ್ ಪೂರ್ಣಿಮಾ ಅವರಿಗೆ ಸಿಗಲಿದೆ ಎನ್ನುವ ಸುದ್ದಿ ಹಿರಿಯೂರು ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಸಂಚಲನ ಸೃಷ್ಠಿಸಿತ್ತು.
ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಧ್ಯ ಪ್ರವೇಶ ಮಾಡಿ ರಾಜೀ ಸಂಧಾನದ ಮೂಲಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಲ್ಲಿದ್ದ ಮುನಿಸು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪನವರ ಸಂಧಾನದಿಂದ ಪೂರ್ಣಿಮಾ ಅವರು ಮನಸ್ಸು ಬದಲಾಯಿಸಿದ್ದು ಮಾರ್ಚ್-20 ರಂದು ಮಾಜಿ ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ಹಿರಿಯೂರು ನಗರದಲ್ಲಿ ಬೃಹತ್ ರೋಡ್ ಶೋ ಮತ್ತು ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆ.
ಇದಕ್ಕಾಗಿ ಭಾನುವಾರ ದಿನವೀಡಿ ಮೂಲ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಶಾಸಕಿ ಪೂರ್ಣಿಮಾ ಅವರು ವಿಶ್ವಾಸಕ್ಕೆ ತೆಗೆದುಕೊಂಡು ಐದಾರು ಸಾವಿರದಷ್ಟು ಜನರನ್ನು ಸೇರಿಸುವ ಮೂಲಕ ವಿಜಯ ಸಂಕಲ್ಪ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು ಎನ್ನಲಾಗಿದೆ.
ಪೂರ್ಣಿಮಾ ಅವರು ಬಿಜೆಪಿ ಪಕ್ಷದ ನಾಯಕರೊಂದಿಗೆ ಮುನಿಸು ಮಾಡಿಕೊಳ್ಳಲು ಪ್ರಮುಖ ಕಾರಣ ಮುಖ್ಯಮಂತ್ರಿಗಳು ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಿಲ್ಲ, ಹಿಂದುಳಿದ ವರ್ಗಗಳ ಅದರಲ್ಲೂ ಮಹಿಳಾ ಕೋಟಾದಡಿ ಸಚಿವರನ್ನಾಗಿ ಮಾಡಲಿಲ್ಲ, ಅಲ್ಲದೆ ಪಕ್ಷವು ತನ್ನ ಪತಿ ಅವರನ್ನು ಉಚ್ಚಾಟನೆ ಮಾಡಿದ್ದರಿಂದಾಗಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಪತಿ ಪಾಲ್ಗೊಳ್ಳದಿರುವುದು ಕೂಡಾ ಶಾಸಕಿ ಪೂರ್ಣಿಮಾ ಅವರ ಮುನಿಸಿಗೆ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ. ಯಡಿಯೂರಪ್ಪ ಮಧ್ಯ ಪ್ರವೇಶದಿಂದ ಸುಖಾತ್ಯ ಕಂಡಿದ್ದು ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಪೂರ್ಣಿಮಾ ಅವರು ಭರವಸೆ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಈ ಹೊಸ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಡಿ.ಸುಧಾಕರ್ ನಿಟ್ಟುಸಿರು ಬಿಟ್ಟಿದ್ದು ದೊಡ್ಡ ಗಂಡಾಂತರ ತಪ್ಪಿತೆಂದು ನೆಮ್ಮದಿಯಾಗಿ ಹಿರಿಯೂರು ನಗರದ ವಾಣಿ ಸಕ್ಕರೆ ಕಾರ್ಖಾನೆ ಸಮೀಪ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳಿಗೆ ಭಾನುವಾರ ಸುಧಾಕರ್ ಅವರು ಔತಣ ಕೂಟ ಏರ್ಪಡಿಸಿದ್ದರು ಎನ್ನುವ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ.
ಔತಣ ಕೂಟ ಒಂದು ಕಡೆಯಾದರೆ ವಿವಿಧ ಗ್ರಾಮಗಳಲ್ಲಿ ಸುಧಾಕರ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೂ ಮತ್ತೊಬ್ಬ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಿ.ಸೋಮಶೇಖರ್ ಎಲ್ಲಿ ಅಡ್ಡಗಾಲು ಹಾಕುತ್ತಾರೆ ಎನ್ನುವ ಆತಂಕ ಇದ್ದೆ ಇದೆ ಎನ್ನಲಾಗಿದೆ.
ಒಟ್ಟಾರೆ ಯಡಿಯೂರಪ್ಪನವರು ಪೂರ್ಣಿಮಾ ಶ್ರೀನಿವಾಸ್ ಅವರ ಮನವೊಲಿಸುವ ಮೂಲಕ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಉಂಟಾಗಿದ್ದ ಆತಂಕಗಳು ದೂರವಾಗಿದೆ. ಆಯಾಯ ಪಕ್ಷದಲ್ಲೇ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ.