
ನನ್ನ ಬರವಣಿಗೆಗೆ ಚಿತ್ರ ಕಲಾವಿದ ಪಿ.ಆರ್.ತಿಪ್ಪೇಸ್ವಾಮಿಯವರೇ ಪ್ರೇರಣೆ-ರುದ್ರಣ್ಣ ಹರ್ತಿಕೋಟೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಾಲೇಜು ವ್ಯಾಸಂಗ ಮಾಡುವ ದಿನಗಳಲ್ಲಿ ಹವ್ಯಾಸಿ ಬರಹಗಾರರಾಗಿ ಪತ್ರಿಕೆಗಳಲ್ಲಿ ಸುದ್ದಿ ಬರೆಯುತ್ತಿದ್ದೆ. ನನ್ನ ಬರವಣಿಗೆಗೆ ಮೂಲ ಪ್ರೇರಣೆ ನಮ್ಮ ತಾತ ಪಿ.ಆರ್.ತಿಪ್ಪೇಸ್ವಾಮಿ ಆಗಿದ್ದರು ಎಂದು ಭಾರತೀಯ ಪ್ರೆಸ್ ಕೌನ್ಸಿಲ್ ರಾಷ್ಟ್ರೀಯ ಉತ್ಕೃಷ್ಠ ಪ್ರಶಸ್ತಿ ಪುರಸ್ಕೃತ ರುದ್ರಣ್ಣ ಹರ್ತಿಕೋಟೆ ಅಭಿಪ್ರಾಯ ಪಟ್ಟರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ, ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘ ಸಕ್ಕರ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಘಟಕದ ದಶಮಾನೋತ್ಸವದ ಸವಿನೆನಪಿಗಾಗಿ ಆಯೋಜಿಸಿದ್ದ ಜಾನಪದ ಗಾನ ಸಂಭ್ರಮ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಹಿರಿಯೂರು ಸೀಮೆ ಸಾಹಿತ್ಯ, ಸಂಗೀತ, ಜಾನಪದ, ಹಾಗೂ ರಂಗಭೂಮಿಗೆ ಬೆಸುಗೆ ನೀಡಿದ ತವರೂರು. ನಾನು ಚಿಕ್ಕವಯಸ್ಸಿನಲ್ಲಿದ್ದಾಗ ನೆಹರು ಮೈದಾನದಲ್ಲಿ ಭಾರತಿ ಕಲಾವಿದರು ಏರ್ಪಡಿಸಿದ ಹಲವಾರು ನಾಟಕಗಳನ್ನು ವೀಕ್ಷಣೆ ಮಾಡಿದ್ದೇನೆ. ಹರ್ತಿಕೋಟೆಯ ಸುಬ್ಬರಾಯ, ಜೆ.ಎನ್.ಕೋಟೆ ನಿಜಲಿಂಗಪ್ಪ, ಮಲ್ಲಪ್ಪನಹಳ್ಳಿಯ ಎಂ.ಆರ್.ಲಕ್ಷ್ಮಣಪ್ಪ, ಪಾಂಡುರಂಗನಾಯಕ, ರಾಮಜೋಗಿಹಳ್ಳಿ ಹನುಮಂತಪ್ಪ, ಪರಮೇನಹಳ್ಳಿ ಪಟೇಲ್ ತಿಪ್ಪೇಸ್ವಾಮಿ ಇವರ ಅಭಿನಯವನ್ನು ಎಂದಿಗೂ ಮರೆಯುವಂತಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಕವಿ ಬಬ್ಬೂರು ರಂಗ, ಯಳನಾಡು ಅಂಜನಪ್ಪ, ಪತ್ರಿಕಾ ರಂಗದಲ್ಲಿ ಹೇಮದಳ ರಾಮದಾಸ್, ರಾಜಣ್ಣಶ್ರೇಷ್ಠಿ ಯವರ ಕೊಡುಗೆ ಅಪಾರವಾಗಿದೆ. ತಾಲ್ಲೂಕಿನ ಪ್ರತಿ ಹಳ್ಳಿಯಲ್ಲಿಯೂ ಸೋಬಾನೆ, ಭಜನೆ, ಕೋಲಾಟ ಪ್ರದರ್ಶನ ನೀಡುವ ಕಲಾವಿದರನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಕನ್ನಡ ಪ್ರಾಧ್ಯಾಪಕ ಡಾ. ಜೆ.ಕರಿಯಪ್ಪಮಾಳಿಗೆ ಮಾತನಾಡಿ, ರಾಗಿ ಬೀಸುವಾಗ, ಭತ್ತ ಕುಟ್ಟುವಾಗ, ಗಿಡ ನಾಟಿ ಮಾಡುವಾಗ, ಹುಟ್ಟಿದ ಹಾಡುಗಳು ಬದುಕಿನ ನೆಮ್ಮದಿಗೆ ನಾಂದಿಯಾಗಿವೆ. ಸುಗ್ಗಿಯ ಕಾಲದಲ್ಲಿ ಆಡುವ ಐತಿಹಾಸಿಕ, ಸಾಮಾಜಿಕ, ಪೌರಾಣಿಕ ನಾಟಕಗಳು ಮನೋರಂಜನೆಯ ಭಾಗವಾಗದೆ ಬದುಕಿನ ವಿವಿಧ ಸ್ತರಗಳನ್ನು ತಿಳಿಸುತ್ತವೆ. ಭಜನಾ ಪದ ಜಾನಪದ ಗೀತೆ, ಸೋಬಾನೆ ಪದ ತತ್ವಪದ, ದಾಸರಪದ, ರಂಗ ಗೀತೆಗಳು ಬದುಕಿಗೆ ಬೇಕಾದ ನೀತಿ ಪಾಠಗಳನ್ನು ಕಲಿಸುತ್ತದೆ. ಮನು ಕುಲಕ್ಕೆ ಬೇಕಾದ ನೆಮ್ಮದಿ ಸಹಬಾಳ್ವೆ, ಸಂಸ್ಕಾರ, ಸೌಹಾರ್ಧತೆ, ಜೀವನ ಪ್ರೀತಿಯನ್ನು ಜನಪದ ಕಲೆ ಕಲಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಅಧ್ಯಕ್ಷೆ ಗೀತಾ ಗಂಗಾಧರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿರುವ ಗೊರವನ ಕುಣಿತ, ಕೋಲಾಟ, ಸುಗ್ಗಿಯ ಹಾಡುಗಳು, ತಮಟೆ ವಾಧ್ಯ ವೀರಗಾಸೆ, ಯಕ್ಷಗಾನ, ಕಂಬಳ, ದೇವರನಾಮ, ಇವುಗಳಿಂದ ಬದುಕು ಶುದ್ಧವಾಗುತ್ತದೆ. ಈ ಕಲೆಯನ್ನು ಉಳಿಸಿ ಬೆಳಸುವ ಕೆಲಸವನ್ನು ಯುವ ಪೀಳಿಗೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿವಿಲಾಸ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಸ್.ರಘುನಾಥ್ ಮಾತನಾಡಿ, ನಾಡಿನ ಭಾಷೆ, ಸಾಹಿತ್ಯ, ಸಂಗೀತ, ಜಾನಪದ ಕಲೆ, ರಂಗಕಲೆ, ಉಳುವಿಗೆ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿವೆ. ಈ ನಿಟ್ಟಿನಲ್ಲಿ ತಾಲ್ಲೂಕಿನಾಧ್ಯಂತ ಕರ್ನಾಟಕ ಜಾನಪದ ಪರಿಷತ್ತು ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅವುಗಳ ಉಳುವಿಗೆ ಶ್ರಮಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಭಾರತೀಯ ಪ್ರೆಸ್ ಕೌನ್ಸಿಲ್ ರಾಷ್ಟ್ರೀಯ ಉತ್ಕೃಷ್ಠ ಪ್ರಶಸ್ತಿ ಪುರಸ್ಕೃತ ರುದ್ರಣ್ಣ ಹರ್ತಿಕೋಟೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆಲೂರು ಹನುಮಂತರಾಯಪ್ಪ, ಚಿತ್ರದುರ್ಗದ ಹಿರಿಯ ಸಾಹಿತಿ ಪ್ರೊ.ಹೆಚ್.ಲಿಂಗಪ್ಪ, ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತೆ ಟಿ.ವಿಮಲಾಕ್ಷಿ, ಕಪಿಲೆಹಟ್ಟಿಯ ನಿವೃತ್ತ ಪ್ರಾಚಾರ್ಯ ಪ್ರೊ. ಜಿ.ಪರಮೇಶ್ವರಪ್ಪ, ಕೆ.ಯು.ಡಬ್ಲ್ಯೂ.ಜೆ ಗಿರಿಧರ, ರಾಜ್ಯ ಪ್ರಶಸ್ತಿ ಪುರಸ್ಕೃತ ಹೆಚ್.ಟಿ.ಪ್ರಸನ್ನ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ, ಮಾಜಿ ತಾ.ಪಂ. ಸದಸ್ಯ ಮಹಮದ್ ಫಕೃದ್ದೀನ್, ಸಮಾಜ ಸೇವಕ ಕೌಶಿಕ್ನಾಯ್ಡು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜೆ.ನಿಜಲಿಂಗಪ್ಪ, ಎಂ.ಬಿ.ಲಿಂಗಪ್ಪ, ಬಿ.ಟಿ. ಶಂಕರಲಿಂಗಯ್ಯ, ಜಿ.ಹನುಮಂತರೆಡ್ಡಿ, ಗಡಾರಿ ಕೃಷ್ಣಪ್ಪ, ಗಾಯಿತ್ರಿ ದೇವಿ, ಕ್ಲಾರಾರಾಣಿ, ಹಾರ್ಮೋನಿಯಂ ವಾದಕ ಎಸ್.ಶಿವಲಿಂಗಪ್ಪ ತಬಲ ವಾದಕ ಎಸ್.ಅಭಿಷೇಕ್ ಹಾಗೂ ಇತರರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ: ಹರಿಯಬ್ಬೆ ಜಿ.ಡಿ.ತಿಮ್ಮಯ್ಯ ಮತ್ತು ತಂಡದಿಂದ ರಂಗಗೀತೆ ಗಾಯನ, ಸುಲೋಚನ ಮತ್ತು ತಂಡದಿಂದ ದಾಸರ ಪದ, ಲತಾ ಮಂಜುನಾಥ್ ಮತ್ತು ತಂಡದಿಂದ ಭಕ್ತಿಗೀತೆ ಗಾಯನ, ಚಿಲ್ಲಹಳ್ಳಿ ನಾಗರಾಜ್ ಮತ್ತು ತಂಡದಿಂದ ತತ್ವಪದ ಗಾಯನ, ಸಿದ್ದೇಶ್ವರ ಭಜನಾ ತಂಡದಿಂದ ಭಜನಾ ಪದವನ್ನು ಕಲಾವಿದರು ಪ್ರಸ್ತುತಪಡಿಸಿದರು.