i
ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ಬೆಸ್ಕಾಂ ಮಹಿಳಾ ಎಇಇ, ಎಇ ಸೇರಿದಂತೆ ಇಬ್ಬರ ಬಂಧನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಟ್ಟಡವೊಂದಕ್ಕೆ 30 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಹೊಂದಿದ್ದು, ಅದನ್ನು 60 ಕಿಲೋ ವ್ಯಾಟ್ಗೆ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಮಂಜೂರಾತಿ ನೀಡಲು 20,000 ಲಂಚ ಪಡೆದ ಬೆಸ್ಕಾಂ ಸುಮನಹಳ್ಳಿ (ಎನ್-6) ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭಾರತಿ ಮತ್ತು ಕಾಮಾಕ್ಷಿಪಾಳ್ಯ ಸೆಕ್ಷನ್ನ ಸಹಾಯಕ ಎಂಜಿನಿಯರ್ ಕನಾಲ್ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ಅನಂತರಾಜು ಕೆ.ಎಂ. ಎಂಬುವವರು ಬೆಸ್ಕಾಂ ಕಚೇರಿಗೆ ಹೆಚ್ಚುವರಿ ವಿದ್ಯುತ್ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರು. ಪ್ರಸ್ತಾವಕ್ಕೆ ಮಂಜೂರಾತಿ ನೀಡಲು 25,000 ಲಂಚ ನೀಡುವಂತೆ ಇಬ್ಬರೂ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಚೌಕಾಸಿ ನಡೆಸಿದಾಗ 20,000 ಕೊಟ್ಟರೆ ಕಡತ ವಿಲೇವಾರಿ ಮಾಡುವುದಾಗಿ ಹೇಳಿದ್ದರು. ಅರ್ಜಿದಾರರು ಈ ಕುರಿತು ಲೋಕಾಯುಕ್ತದ ಬೆಂಗಳೂರು ನಗರ ಘಟಕಕ್ಕೆ ದೂರು ಸಲ್ಲಿಸಿದ್ದು ಸಕಾಲದಲ್ಲಿ ಲೋಕಾಯುಕ್ತರು ದಾಳಿ ಮಾಡಿ ಇಬ್ಬರು ಆರೋಪಿ ಬೆಸ್ಕಾಂ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭಾರತಿ ಎದುರಿನಲ್ಲೇ ಸಹಾಯಕ ಎಂಜಿನಿಯರ್ ಲಂಚದ ಹಣ ಪಡೆದುಕೊಂಡರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ಭಾರತಿ ಮತ್ತು ಕನಾಲ್ ಕುಮಾರ್ ಅವರನ್ನು ಬಂಧಿಸಿ ವಿಚಾರಣೆಗೆ ಒಳ ಪಡಿಸಿ ನಂತರ ಜೈಲಿಗೆ ಕಳುಹಿಸಿದ್ದಾರೆ. ಲೋಕಾಯಕ್ತದ ಬೆಂಗಳೂರು ನಗರ ಘಟಕದ ಎಸ್ಪಿ ಕೆ.ವಿ. ಅಶೋಕ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪ್ರಕಾಶ್ ರೆಡ್ಡಿ, ಇನ್ಸ್ಪೆಕ್ಟರ್ಗಳಾದ ಆನಂದ್, ಮಹದೇವಯ್ಯ ಮತ್ತಿತರ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.