
ಚುನಾವಾಣೆಯಲ್ಲಿ ನಿಷ್ಪಕ್ಷ-ಶಾಂತಿಯುತವಾಗಿ ಕರ್ತವ್ಯ ನಿರ್ವಹಿಸಲು ಪೊಲೀಸ್ರಿಗೆ ಕರೆ:ವಂದಿತಾ ಶರ್ಮಾ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾನೂನು ಸುವ್ಯವಸ್ಥೆ ಹಾಗೂ ದಕ್ಷ ಆಡಳಿತದಲ್ಲಿ ಕರ್ನಾಟಕವು ದೇಶದಲ್ಲಿ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಈ ಬಾರಿ ಉತ್ತಮ ಸೇವೆ ಸಲ್ಲಿಸಿದ ೧೩೭ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಸೇವೆ ಪದಕ ದೊರತಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ರವರು ತಿಳಿಸಿದರು.
ಪೊಲೀಸ್ ಧ್ವಜಾ ದಿನಾಚರಣೆ ಅಂಗವಾಗಿ ಕೋರಮಂಗಲದ ಕೆ.ಎಸ್.ಆರ್.ಪಿ ಫರೇಡ್ ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಕವಾಯುತ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಯಾವುದೇ ಕಳಂಕ ಬಾರದ ರೀತಿಯಲ್ಲಿ ನಿಷ್ಪಕ್ಷ-ನಿಷ್ಕಳಂಕ ಮತ್ತು ಶಾಂತಿಯುತವಾಗಿ ಸಾರ್ವಜನಿಕರ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸುವುದು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.
ಕರ್ನಾಟಕದ ಬೆಂಗಳೂರು ಸಿಲಿಕಾನ್ ಸಿಟಿಯಾಗಿದ್ದು ದೇಶ-ವಿದೇಶಗಳಿಂದ ಬಂಡವಾಳ ಹೂಡಿಕೆದಾರರು ಆಗಮಿಸುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಇಲ್ಲಿನ ಕಾನೂನು ಸುವ್ಯವಸ್ಥೆ ತುಂಬಾ ಉತ್ತಮ ಹಾಗೂ ಕಟ್ಟುನಿಟ್ಟಾಗಿರುವುದು ಎಂದರು. ಇಲಾಖೆಯು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ವಿಧಾನ, ವೃತ್ತಿಪರ ಕುಶಲತೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನೇರ, ಸರಳ ಮತ್ತು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತದೆ ಎಂದರು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಡಿಮೆ ಅವಧಿಯಲ್ಲಿ ಪ್ರಕರಣಗಳನ್ನು ಬಗೆಹರಿಸಲಾಗಿದೆ. ಸೈಬರ್ ಅಪರಾಧಗಳನ್ನು ಕಂಡುಹಿಡಿದು ದೂರುದಾರರಿಗೆ ನ್ಯಾಯ ದೊರಕಿಸಲಾಗುತ್ತಿದೆ ಎಂದರು.
ಏಪ್ರಿಲ್ ೦೨ರಂದು ಪೊಲೀಸ್ ಧ್ವಜಾ ದಿನಾಚರಣೆಯನ್ನಾಗಿ ಆಚರಿಸಿ ಪೊಲೀಸ್ ಸೇವೆಯಲ್ಲಿ ಇರುವವರೆಲ್ಲರೂ ತಮ್ಮನ್ನು ಸೇವೆಗೆ ಪುನರ್ ಸಮರ್ಪಿಸಿಕೊಳ್ಳುವುದಲ್ಲದೆ ಈ ದಿನವನ್ನು ಪೊಲೀಸ್ ಕಲ್ಯಾಣ ದಿನವನ್ನಾಗಿ ಕೂಡ ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ನೆನಸಿ ಅವರ ಹಾಗೂ ಕುಟುಂಬದವರ ಬಗ್ಗೆ ಚಿಂತಿಸಲಾಗುತ್ತದೆ ಎಂದರು. ಕೋವಿಡ್ ಸಂದರ್ಭದಲ್ಲಿ ಹಗಲು-ರಾತ್ರಿ ಶ್ರಮವಹಿಸಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪ್ರಾಮಾಣಿಕ ಸೇವೆ ಗೈದಿರುವ ಪೊಲೀಸ್ರನ್ನು ಸ್ಮರಿಸಲಾಗುವುದು. ಈ ಪೊಲೀಸ್ ಧ್ವಜಾ ದಿನಾಚರಣೆಯನ್ನು ನೈತಿಕವಾಗಿ ಬೆಂಬಲಿಸಿ ಪೊಲೀಸ್ ಧ್ವಜವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿ ಅವರ ಪ್ರಾಮಾಣಿಕ ಸೇವೆಗೆ ಬೆಂಬಲ ನೀಡುವಂತೆ ತಿಳಿಸಿದರು.
ಡಿಜಿ ಐಜಿಪಿ ಪ್ರವೀಣ ಮಸೂದ್ ಸ್ವಾಗತಿಸಿ ಮಾತನಾಡಿ ೧೯೬೫ರಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಯಾಗಿದ್ದು ಈ ನೆನಪಿಗಾಗಿ ಪೊಲೀಸ್ ಧ್ವಜಾ ಹಾಗೂ ಕಲ್ಯಾಣ ದಿನವನ್ನಾಗಿ ಆಚರಿಸಲಾಗುತ್ತಿದೆ. ಸೇವಾ ನಿರತ ಹಾಗೂ ನಿವೃತ್ತಿ ಸಿಬ್ಬಂದಿಗಳ ಸೇವೆ-ಸ್ಮರಣೆಗಾಗಿ ಹಣ ನಿಧಿ ಸಂಗ್ರಹವನ್ನು ಮಾಡಲಾಗುತ್ತಿದೆ. ಈ ಬಾರಿ ೧೩೭ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಸೇವೆ ಪದಕ ದೊರೆತಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಪದಕಗಳನ್ನು ವಿತರಿಸಲಾಗಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ಪೊಲೀಸ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕೆ.ಎಸ್.ಆರ್.ಪಿ, ಸಿಎಆರ್, ಕೆಎಸ್ಐಎಸ್ಎಫ್, ರೈಲ್ವೆ, ಟ್ರಾಫಿಕ್ ಹಾಗೂ ಬಿಸಿಪಿ ಮಹಿಳಾ ತುಕಡಿ ಸೇರಿದಂತೆ ಶ್ವಾನದಳ ಮತ್ತು ಅಶ್ವದಳಗಳು ಭಾಗವಹಿಸಿದ್ದವು.