
ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ನಟ ಕಿಚ್ಚ ಸುದೀಪ್…
ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಪರವಾಗಿ ಚಿತ್ರನಟ ಕಿಚ್ಚ ಸುದೀಪ್ ರೋಡ್ ಶೋ ನಡೆಸಿ ಪ್ರಚಾರ ಮಾಡಿದರು. ನಟ ಸುದೀಪ್ ನೋಡಲು ಸಾವಿರಾರು ಮಂದಿ ಅಭಿಮಾನಿಗಳು ಆಗಮಿಸಿ ಜೈಕಾರ ಹಾಕಿದರು. ಇದೇ ಸಂದರ್ಭದಲ್ಲಿ ಸುದೀಪ್ ಅವರಿಗೆ ಅಭ್ಯರ್ಥಿ ತಿಪ್ಪೇಸ್ವಾಮಿ ಹೂಮಾಲೆ ಹಾಕಿ ಅಭಿನಂದಿಸಿದರು.
ಸುದೀಪ್ ಅವರು ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳ ಒಟ್ಟು 6 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ.
ಮೊಳಕಾಲ್ಮೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸುದೀಪ್, ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಪರವಾಗಿ ಮತಯಾಚನೆ ಮಾಡಿದರು. ಈ ವೇಳೆ ಸುದೀಪ್ ನೋಡಲು ಸಾವಿರಾರು ಜನರು ರಸ್ತೆಗಳಲ್ಲಿ ಕಿಕ್ಕಿರಿದು ನೆರೆದಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಅವರನ್ನು ಬೆಂಬಲಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆಯೂ ನಟ ಸುದೀಪ್ ಅವರು ಮನವಿ ಮಾಡಿಕೊಂಡರು.
ನಟ ಸುದೀಪ್ ಚುನಾವಣಾ ಪ್ರಚಾರಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂಗೆ ಮಾತು ಕೊಟ್ಟಿದ್ದು ಚುನಾವಣೆ ಪ್ರಚಾರ ಕಾರ್ಯ ಮುಗಿಯುವವರೆಗೂ ಬಿಜೆಪಿ ಜೊತೆ ಇರುತ್ತೇನೆ. ಹೋದ ಕಡೆಯಲ್ಲೆಲ್ಲಾ ಜನ ತುಂಬಾ ಪ್ರೀತಿ ತೋರಿಸುತ್ತಿದ್ದಾರೆ. ಪ್ರಚಾರಕ್ಕೆ ಹೋಗುವುದರಲ್ಲಿ ನನ್ನ ಸ್ವಾರ್ಥ ಕೂಡ ಇದೆ. ಚುನಾವಣಾ ಪ್ರಚಾರದ ನೆಪದಲ್ಲಿ ನನ್ನ ಅಭಿಮಾನಿಗಳನ್ನು ಭೇಟಿ ಮಾಡಬಹುದು ಎಂದು ಹೇಳಿದರು.
ಹೆಬ್ಬುಲಿ ಚಲನಚಿತ್ರ ಬಿಡುಗಡೆ ಸಂದರ್ಭದಲ್ಲಿ ರೋಡ್ ಶೋ ಮಾಡಿದ್ದು ಬಿಟ್ಟರೆ ಈಗ ರೋಡ್ ಶೋ ಮಾಡುತ್ತಿದ್ದೇನೆ, ಇಂದಿನಿಂದ ಸಂಪೂರ್ಣವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ. ಬಿಸಿಲು ಜಾಸ್ತಿ ಇರುತ್ತೆ ಎಂದು ಮಧ್ಯಾಹ್ನ ರೋಡ್ ಶೋ ಆಯೋಜನೆ ಮಾಡಿರಲಿಲ್ಲ, ಆದರೂ ನಾನು ರೋಡ್ ಶೋ ಮಾಡಲು ಪ್ರಯತ್ನಿಸುತ್ತೇನೆ. ಎಲ್ಲಾ ಕಡೆ ಸ್ನೇಹಿತರು ಇದ್ದಾರೆ, ಚುನಾವಣಾ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಎಂದು ಅವರು ತಿಳಿಸಿದರು.