i
ಸೋಲು ಕಂಡರೂ ಮನೆ ಮನೆಗೆ ತೆರಳಿ ಧನ್ಯವಾದ ಹೇಳುತ್ತಿರುವ ನಿಖಿಲ್ ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ರಾಮನಗರ:
ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಮತದಾರ ಮಾತ್ರ ನಿಖಿಲ್ ಸೋಲಿಗೆ ಕಾರಣವಾಗಿದ್ದರೂ ಒಂದಿಷ್ಟು ಬೇಸರ ಮಾಡಿಕೊಳ್ಳದ ನಿಖಿಲ್ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದಲ್ಲಿ ಮತದಾರರ ಮನೆ ಮೆಗೆ ತೆರಳಿ ಮತದಾರರಿಗೆ ಧನ್ಯವಾದ ಅರ್ಪಿಸುತ್ತಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಎದುರು ಸೋತಿದ್ದ ನಿಖಿಲ್ ಕುಮಾರಸ್ವಾಮಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದರು. ಆದರೆ, ಹುಸಿಯಾಗಿದೆ. ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಎದುರು 10,715 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ ಫೇಸ್ಬುಕ್ನಲ್ಲಿ ಭಾವುಕ ಪೋಸ್ಟ್ ಬರೆದುಕೊಂಡಿದ್ದಾರೆ.
ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು. ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜೊತೆಯಲ್ಲೇ ಇರುತ್ತೇನೆ. ನಿಮಗಾಗಿ ಜೀವಿಸುತ್ತೇನೆ. ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಹೆಚ್.ಡಿ ದೇವೇಗೌಡ ಸಾಹೇಬರಿಂದ, ತಂದೆ ಹೆಚ್.ಡಿ ಕುಮಾರಸ್ವಾಮಿ ಅವರಿಂದ ಕಲಿತ ಪಾಠ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ನಾನು ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಾತ್ಯತೀತ ಜನತಾದಳವನ್ನ ಹರಸಿದ ಸಾರ್ವಜನಿಕ ಬಂಧುಗಳನ್ನು ಅವರು ಸ್ಮರಿಸಿದ್ದಾರೆ.
ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ. ಈ ಪರಾಜಯದಿಂದ ಪಾಠ ಕಲಿಯುತ್ತೇವೆ, ಪುನಾ ಪುಟಿದೆದ್ದು ಬರುತ್ತೇವೆ. ಪ್ರತಿಯೊಬ್ಬರಿಗೂ ಪ್ರಣಾಮಗಳು ಎಂದು ಭಾವನಾತ್ಮಕವಾಗಿ ನಿಖಿಲ್ ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.