i
ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಆಯ್ಕೆ, ಡಿಕೆಶಿ ನಡೆದು ಬಂದ ಹಾದಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ 135 ಸೀಟುಗಳೊಂದಿಗೆ ಭರ್ಜರಿ ಬಹುಮತ ತಂದು ಕೊಟ್ಟ ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ (ಜನನ ೧೫ ಮೇ ೧೯೬೨) ಮುಖ್ಯಮಂತ್ರಿ ಗಾದಿಗೆ ಬಿಗಿ ಪಟ್ಟು ಹಿಡಿದು ಕೊನೆಗೆ ಹೈಕಮಾಂಡ್ ಮಧ್ಯ ಪ್ರವೇಶದಿಂದ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಂಡಿದ್ದಾರೆ.
2 ವರ್ಷಗಳ ನಂತರ ಮುಖ್ಯಮಂತ್ರಿಯಾಗಿ ಇವರೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. 2018-19ರ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದರು. 2013-2018ರ ಅವಧಿಯ ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಸಾತನೂರು-ಕನಕಪುರ ಕ್ಷೇತ್ರದ ಶಾಸಕರು-
೧೯೮೯ರಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಮುಖೇನ ಸಾತನೂರು ವಿಧಾನ ಸಭಾಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸುವುದರೊಂದಿಗೆ ಜನತಾದಳದ ಪ್ರಾಬಲ್ಯ ಮೊಟಕುಗೊಳಿಸಿದ ಕೀರ್ತಿ ಡಿ.ಕೆ. ಶಿವಕುಮಾರ್ ಸಲ್ಲುತ್ತದೆ.
ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪ್ರಥಮ ಪುತ್ರನಾಗಿ 1962ರ ಮೇ 15 ರಂದು ಜನಿಸಿದ ಡಿ.ಕೆ. ಶಿವಕುಮಾರ್ ತಮ್ಮ ತಂದೆಯಿಂದಲೇ ನಾಯಕತ್ವದ ಗುಣಗಳನ್ನು ಪಡೆದುಕೊಂಡು ಬಂದರು. ೧೮ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಎನ್ಎಸ್ ಯುಐಗೆ ಸೇರ್ಪಡೆಗೊಂಡು ಅಲ್ಪ ಸಮಯದಲ್ಲೇ ಬೆಂಗಳೂರು ಜಿಲ್ಲೆಯ ಘಟಕದ ಅಧ್ಯಕ್ಷರಾದರು. ಬೆಂಗಳೂರು ಆರ್ ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರಾಗಿ ಕನಕಪುರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ವ್ಯವಸ್ಥೆಗೊಳಿಸಿ ಜನಮನವನ್ನು ಸೂರೆಗೊಂಡರು.
೧೯೮೫ರ ಸಾತನೂರು ವಿಧಾನಸಭಾಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ಮುಖಂಡರಾದ ಹೆಚ್.ಡಿ. ದೇವೇಗೌಡಅವರ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಅಭ್ಯರ್ಥಿ ಸಿಗುವುದು ದುರ್ಲಭವಾದಾಗ ಪಕ್ಷದ ವರಿಷ್ಠರ ಕಣ್ಣು ಡಿ.ಕೆ. ಶಿವಕುಮಾರ್ ಮೇಲೆ ಬಿತ್ತು. ಹೀಗಾಗಿ ರಾಜಕಾರಣದ ಪರಿಚಯವೇ ಇಲ್ಲದಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಹೆಚ್.ಡಿ. ದೇವೇಗೌಡ ಅವರ ವಿರುದ್ದ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಲಾಯಿತು. ಸಾಕಷ್ಟು ಪ್ರಬಲ ಪ್ರತಿರೋಧವನ್ನೇ ತೋರಿದ ಡಿ.ಕೆ. ಶಿವಕುಮಾರ್ ಚುನಾವಣೆಯಲ್ಲಿ ಹೆಚ್.ಡಿ. ದೇವೇಗೌಡರು ಅತ್ಯಂತ ಪ್ರಯಾಸದ ಜಯ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.
ವಿಧಾನಸಭಾ ಚುನಾವಣೆಯಾದ ಕೆಲವೇ ದಿನಗಳಲ್ಲಿ ೧೯೮೭ರಲ್ಲಿ ಅವರು ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಗೊಂಡರು. ೧೯೮೯ರಲ್ಲಿ ಸಾತನೂರು ವಿಧಾನ ಸಭಾಕ್ಷೇತ್ರದಿಂದ ಸ್ಪರ್ಧಿಸಿ ಶಿವಕುಮಾರ್ ಅತ್ಯಧಿಕ ಮತಗಳಿಂದ ಜಯಗಳಿಸಿದರು.
೧೯೯೧ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿ ತ್ಯಜಿಸಿದಾಗ ಸೋರೆಕೊಪ್ಪ ಬಂಗಾರಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗುವಂತೆ ಮಾಡುವಲ್ಲಿ ಡಿ.ಕೆ.ಶಿವಕುಮಾರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಬಂಗಾರಪ್ಪನವರು ಆಗ ರಾಜ್ಯಮಟ್ಟದ ಸಚಿವರನ್ನಾಗಿ ಮಾಡಿ ಬಂಧಿಖಾನೆ ಖಾತೆ ನೀಡಿದ್ದು ಇತಿಹಾಸ. ಹಲವು ವಿರೋಧಿಗಳ ಪಿತೂರಿಯಿಂದಾಗಿ ೧೯೯೪ರಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿಸಲಾಯಿತು. ಧೃತಿಗೆಡದೆ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಯಗಳಿಸಿ ಜಯದ ಪರಂಪರೆ ಮುಂದುವರೆಸಿದರು.
ಸಾತನೂರು ವಿಧಾನಸಭಾ ಕ್ಷೇತ್ರದಿಂದ 2004ರಲ್ಲಿ ೪ನೇ ಭಾರಿ ಆರಿಸಿ ಬಂದರು. ತಮ್ಮ ವಿರುದ್ದ ದೇವೇಗೌಡರು ನಡೆಸಿದ ಸೇಡಿನ ರಾಜಕಾರಣಕ್ಕೆ ತಮ್ಮದೇ ರೀತಿಯಲ್ಲಿ ಪ್ರತ್ಯುತ್ತರ ನೀಡುವಲ್ಲಿ ಶೀಘ್ರದಲ್ಲಿಯೇ ಯಶಸ್ವಿಯಾದರು. ೨೦೦೬ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ದ ರಾಜಕೀಯವಾಗಿ, ಸಾರ್ವಜನಿಕವಾಗಿ ಅಷ್ಟೇನು ಪರಿಚಿತರಲ್ಲದ ಅಜ್ಞಾತ ಹೆಣ್ಣು ತೇಜಸ್ವಿನಿಗೌಡರನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ವಿಲಾಸ್ರಾವ್ ದೇಶ್ಮುಖ್ ಸಮ್ಮಿಶ್ರ ಸರ್ಕಾರ ಎನ್ಸಿಪಿ ಪಕ್ಷದೊಂದಿಗೆ ಸೆಣಸಾಟಕ್ಕಿಳಿದಾಗ ಸರ್ಕಾರ ಅಲ್ಪಮತದ ಅಪಾಯಕ್ಕೆ ಸಿಕ್ಕಿಕೊಂಡಿತ್ತು. ಆಗ ಎನ್ಸಿಪಿ ಮತ್ತು ವಿರೋಧ ಪಕ್ಷಗಳು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರಕ್ಕೆ ಇಳಿದಿದ್ದವು. ತಕ್ಷಣ ಕಾಂಗ್ರೆಸ್ ಹೈಕಮಾಂಡಿನ ಆದೇಶದಂತೆ ಕಾರ್ಯಪ್ರವೃತ್ತರಾದ ಡಿ.ಕೆ. ಶಿವಕುಮಾರ್ ರವರು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಮುಂಬೈಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ೧೨ ದಿನಗಳ ಕಾಲ ಬೆಂಗಳೂರಿನ ರೆಸಾರ್ಟ್ ನಲ್ಲಿ ಇರಿಸಿ ರಕ್ಷಣೆ ನೀಡಿ ಶಾಸಕರನ್ನು ಕಳುಹಿಸಿದರು.
೨೦೦೪ರಲ್ಲಿ ಎಸ್.ಎಂ. ಕೃಷ್ಣ ರವರನ್ನು ಕಡೆಗಣಿಸಿ ದೇವಗೌಡರ ಒಪ್ಪಿಗೆಯಂತೆ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿದಾಗ ಎಸ್.ಎಂ. ಕೃಷ್ಣ ಅವರಿಗೆ ಮಹಾರಾಷ್ಟ್ರದ ರಾಜ್ಯಪಾಲರಾಗುವಂತೆ ಮಾಡುವಲ್ಲಿ ಡಿಕೆಶಿ ಯಶಸ್ವಿಯಾದರು. ಎಸ್.ಎಂ. ಕೃಷ್ಣ ಅವರು ರಾಜ್ಯಸಭೆಗೆ ಸ್ಪರ್ಧಿಸುವಂತೆ ಮಾಡಿ ಜೆಡಿಎಸ್ ನಿಂದ ಅಗತ್ಯ ಸದಸ್ಯರ ಬೆಂಬಲ ಪಡೆದು ಎಸ್.ಎಂ. ಕೃಷ್ಣ ರಾಜ್ಯಸಭೆಗೆ ಆಯ್ಕೆಯಾಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
೧೯೯೯ರಲ್ಲಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ಡಿ.ಕೆ. ಶಿವಕುಮಾರ್ ಅವರ ಹಿಂದೆ ಬೆನ್ನೆಲುಬಾಗಿ ನಿಂತು ಕಾಂಗ್ರೆಸ್ ಪಕ್ಷ ಅಭೂತಪೂರ್ವ ರೀತಿಯಲ್ಲಿ ಜಯಗಳಿಸಿ ಸರ್ಕಾರ ರಚಿಸುವಲ್ಲಿ ಕಾರಣೀಭೂತರಾದರು. ಎಸ್.ಎಂ. ಕೃಷ್ಣ ಚುನಾವಣಾ ಪೂರ್ವದಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಚುನಾವಣಾ ಸಮರ ಆರಂಭಿಸಿದಾಗ, ಈ ಐತಿಹಾಸಿಕ ಯಾತ್ರೆಯನ್ನು ಆಯೋಜಿಸಿದವರು ಡಿ.ಕೆ. ಶಿವಕುಮಾರ್, ಇದರಿಂದಲೇ ಕಾಂಗ್ರೆಸ್ ಪಕ್ಷ ೧೩೯ ಸ್ಥಾನಗಳನ್ನು ಗಳಿಸಿ ಸ್ವಂತ ಬಲದ ಮೇಲೆ ಸರ್ಕಾರವನ್ನು ರಚಿಸುವಂತಾಗಿದ್ದು ಇತಿಹಾಸ. ಎಸ್.ಎಂ. ಕೃಷ್ಣ ಅವರು ಡಿಕೆಶಿಗೆ ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ನೇಮಿಸಿ ಮಹತ್ವದ ಸಹಕಾರ ಖಾತೆ ನೀಡುವ ಮೂಲಕ ಡಿ.ಕೆ. ಶಿವಕುಮಾರ್ ಅವರ ಶ್ರಮಕ್ಕೆತಕ್ಕ ಮನ್ನಣೆ ನೀಡಿದರು. ೨೦೦೨ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿ, ರಾಜ್ಯ ನಗರಯೋಜನಾ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರಾಗಿ ಯುವಕರನ್ನು ಸಂಘಟಿಸಿ ಜೀವನದಲ್ಲಿ ನೆಲೆಗೊಳಿಸುವ “ರಾಜೀವ್ಯುವ ಶಕ್ತಿ” ಸಂಘಟನೆಗಳು ರಾಜ್ಯದಲ್ಲಿ ತಲೆಎತ್ತಲು ಕಾರಣೀಭೂತರಾದರು. ವಿಶ್ವದಲ್ಲೇ ಮೊದಲು ಸ್ತ್ರೀ ಶಕ್ತಿ ಸಂಘಟನೆಗಳನ್ನು ಆರಂಭಿಸುವಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾಲು ಮಹತ್ವದ್ದು.
ಕನಕಪುರ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಸ್ಥಾಪಿಸಿ ಮತದಾರರೊಂದಿಗೆ ನೇರಾ ನೇರಾ ಸಂಪರ್ಕ ಸಾಧಿಸಿದ ದೇಶದ ಪ್ರಥಮ ಶಾಸಕರೆಂಬ ಕೀರ್ತಿಗೆ ಭಾಜನರಾದವರು.
೨೦೧೩ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾಗಿ ಆಯ್ಕೆಗೊಂಡಾಗ ಪಕ್ಷದ ವಿರೋಧಿಗಳು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಸಚಿವ ಸ್ಥಾನ ತಪ್ಪುವಂತೆ ಮಾಡಿದರು. ಇದರಿಂದ ದೃತಿಗಡೆದ ಡಿ.ಕೆ. ಶಿವಕುಮಾರ್, ಪಕ್ಷದ ನಾಯಕತ್ವದ ವಿರುದ್ದ ಬಹಿರಂಗವಾಗಿ ಯಾವುದೇ ಪ್ರತಿಭಟನೆ ತೋರದೆ, ತಮ್ಮ ವಿರುದ್ಧ ಆಪಾದನೆಗಳ ಬಗ್ಗೆ ನ್ಯಾಯಾಂಗ ತಜ್ಞರಿಂದ ವಿಮರ್ಶೆ ಮಾಡಿಸುವಂತೆ ವರಿಷ್ಠರನ್ನು ಕೋರಿಕೊಂಡರು ಪಕ್ಷದಿಂದ ನೇಮಿತರಾದ ಇಬ್ಬರು ನ್ಯಾಯಾಂಗ ತಜ್ಞರು ಡಿ.ಕೆ. ಶಿವಕುಮಾರ್ ಯಾವುದೇ ರೀತಿಯ ಅಕ್ರಮ ಎಸಗಿಲ್ಲ ಎಂಬ ಅಭಿಪ್ರಾಯಕ್ಕೆ ಬಂದು ಅವರನ್ನು ಆರೋಪ ಮುಕ್ತರನ್ನಾಗಿಸಿದರು. ನಂತರ ಡಿ.ಕೆ. ಶಿವಕುಮಾರ್ ಸಿದ್ಧರಾಮಯ್ಯ ಸಂಪುಟದಲ್ಲಿ ಇಂಧನ ಖಾತೆಯಂತಹ ಪ್ರಮುಖ ಖಾತೆ ನೀಡಲಾಯಿತು.
ಇಂಧನ ಸಚಿವರಾಗಿ ಡಿ.ಕೆ. ಶಿವಕುಮಾರ್ ಜಡ್ಡುಗಟ್ಟಿದ್ದ ಇಂಧನ ಇಲಾಖೆಗೆ ಅಮೂಲಾಗ್ರ ಸುಧಾರಣೆ ಮಾಡಿದರು. ರೈತ ಸೂರ್ಯ ಯೋಜನೆ ರೂಪಿಸಿ ಭೂ ಮಾಲೀಕರಾದ ರೈತರು ಸ್ವಯಂ ೧ ರಿಂದ ೩ ಮೆ.ವ್ಯಾ. ಸೌರವಿದ್ಯುತ್ ಉತ್ಪಾದನೆ ಮಾಡುವಂತೆ ಅವಕಾಶ ಕಲ್ಪಿಸಿದರು.
೨೦೧೮ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮೊದಲಿಗೆ ಜಲಸಂಪನ್ಮೂಲ ನಂತರ ಹೆಚ್ಚುವರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಪಡೆದ ಡಿ.ಕೆ.ಶಿವಕುಮಾರ್ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಮಹದಾಯಿ ಸಮಸ್ಯೆ ಪರಿಹಾರ, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದರು. ಮೈತ್ರಿ ಸರ್ಕಾರದ ಉಳಿವಿಗೆ ಟೊಂಕ ಕಟ್ಟಿ ನಿಂತಿದ್ದರೂ ಕುತಂತ್ರದಿಂದ ಸರ್ಕಾರವನ್ನು ಬೀಳಿಸಲಾಯಿತು.
೪ ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇನಾನಿಯಾಗಿ ಕಾರ್ಯ ನಿರ್ವಹಿಸಿರುವ ಡಿ.ಕೆ.ಶಿವಕುಮಾರ್ ಅವರು ಯಾವುದೇ ಸಂದರ್ಭದಲ್ಲೂ ಯಾವುದೇ ಆಮಿಷಗಳಿಗೂ ಬಲಿಯಾಗದೇ ಪಕ್ಷ ನಿಷ್ಠೆಯನ್ನು ಬದಲಿಸಲಿಲ್ಲ. ೨೦೧೭ರಲ್ಲಿ ಹೈಕಮಾಂಡ್ ವಹಿಸಿದ ಜವಾಬ್ದಾರಿಯ ಮೇರೆಗೆ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಟ್ಟುಕೊಂಡ ಅವರು ಅದಕ್ಕಾಗಿ ಕೇಂದ್ರ ಸರ್ಕಾರವು ಐಟಿ ಇಡಿ ಮತ್ತಿತರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಜೈಲಿಗೂ ಅಟ್ಟಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಸಂಘಟನೆ: ಕಾಂಗ್ರೆಸ್ ಪಕ್ಷದಲ್ಲಿ ಖಾಲಿ ಇದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಅವರು ಮಾರ್ಚ್ ೧೧, ೨೦೨೦ರಂದು ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಿದರು.
ಈ ನೇಮಕವಾದ ಕೆಲವೇ ದಿನಗಳಲ್ಲಿ ಕೋವಿಡ್ ಮಹಾಮಾರಿ ದೇಶದೆಲ್ಲೆಡೆ ಆವರಿಸಿತು. ಈ ಸಂದರ್ಭದಲ್ಲಿ ಮನೆಯಲ್ಲಿ ಕೂರದ ಶಿವಕುಮಾರ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಉತ್ತೇಜನ ನೀಡಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ಕರೆ ನೀಡಿದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಪಕ್ಷವನ್ನು ಸಂಘಟಿಸಿದ ರೀತಿ ಎಲ್ಲಾ ರಾಜಕೀಯ ನಾಯಕರಿಗೆ ಮಾದರಿಯಾಗಿ ಉಳಿದಿದೆ ಎಂದರೆ ತಪ್ಪಾಗುವುದಿಲ್ಲ.
ಕೇಂದ್ರ ಸರ್ಕಾರದ ಕೃಷಿ ಕರಾಳ ಕಾಯ್ದೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿ ರೈತರ ಬೆನ್ನಿಗೆ ನಿಂತರು. ಇನ್ನು ಸರ್ಕಾರದ ಭ್ರಷ್ಟಾಚಾರ, ೪೦% ಕಮಿಷನ್, ಪೇ ಸಿಎಂ, ನೇಮಕಾತಿ ಅಕ್ರಮ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದರು. ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಆರಂಭಿಸಿದ ನಂತರ ಕರ್ನಾಟಕದಲ್ಲಿ ೨೧ ದಿನಗಳ ಕಾಲ ೫೫೦ ಕಿ.ಮೀ ಉದ್ದದ ಭಾರತ ಜೋಡೋ ಯಾತ್ರೆ ಯಶಸ್ವಿ ಆಯೋಜನೆ ಮಾಡಿದರು. ಇದು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಕಾರಣವಾಯಿತು. ಪ್ರಜಾಧ್ವನಿ ಯಾತ್ರೆ ಮಾಡಿ ಮತದಾರರಿಗೆ ಮತ್ತಷ್ಟು ಹತ್ತಿರವಾದರು.
ನಾ ನಾಯಕಿ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಉತ್ತೇಜನ ನೀಡಿ ಮಹಿಳೆಯರನ್ನು ಕಾಂಗ್ರೆಸ್ ಪಕ್ಷದ ಕಡೆ ಸೆಳೆಯುವಲ್ಲಿ ಯಶಸ್ವಿಯಾದರು. ವೈಯಕ್ತಿಕ ಜೀವನದಲ್ಲಿ ಪ್ರಗತಿಪರ ರೈತರಾಗಿ, ವಸತಿ ಯೋಜನೆಗಳ ನಿರ್ಮಾತೃರಾಗಿರುವ ಡಿ.ಕೆ. ಶಿವಕುಮಾರ್, ನ್ಯಾಷನಲ್ ಎಜುಕೇಶನ್ ಫೌಂಡೇಷನ್ನ ಸ್ಥಾಪಕ ಅಧ್ಯಕ್ಷರಾಗಿ ಇಂಜಿನಿಯರಿಂಗ್, ನರ್ಸಿಂಗ್ ಹಾಗೂ ಮ್ಯಾನೇಜ್ಮೆಂಟ್ ವಿದ್ಯಾಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅಲ್ಲದೆ ವಿಶ್ವಮಟ್ಟದ ಎರಡು ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ನೇತೃತ್ವದ ಡಿ.ಕೆ.ಎಸ್. ಚಾರಿಟೇಬಲ್ ಟ್ರಸ್ಟ್ಕ್ಷೇತ್ರದ ಹಲವಾರು ಸಮಸ್ಯಾತ್ಮಕ ಗ್ರಾಮಗಳಲ್ಲಿ ಶುದ್ಧಕುಡಿಯುವ ನೀರು ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಕೇವಲ ೧೦ ಪೈಸೆಗೆ ಒಂದು ಲೀಟರ್ ಪರಿಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಿದ್ದಾರೆ.