i
ಇಂಜಿನಿಯರ್ ಗಳು ಸೇರಿದಂತೆ ಹಲವು ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ ಕೋಟ್ಯಂತರ ರೂ.ಗಳ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.
ಬೆಂಗಳೂರು, ತುಮಕೂರು, ಮೈಸೂರು, ಹಾವೇರಿ, ಕೊಪ್ಪಳ, ಕಲಬುರಗಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಸಂಪತ್ತು ಪತ್ತೆ ಮಾಡಿದ್ದಾರೆ.
ಸರ್ಕಾರಿ ಅಧಿಕಾರಿಗಳು ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯದ ಮೂಲ, ಆಸ್ತಿ ಪತ್ರಗಳು, ಬ್ಯಾಂಕ್ ವಿವರಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ.
ಕೊಪ್ಪಳದ ಕೆಆರ್ ಐಡಿಲ್ ಇಂಜಿನಿಯರ್ ಶರಣಪ್ಪ ಚಿಂಚೋಳಿಕರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿನ ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ ಶೆಟ್ಟರ್ ಅವರ ಮನೆ ಮತ್ತು ಕಚೇರಿಯ ಮೇಲೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತರ ದಾಳಿ ನಡೆದಿದೆ. ರಾಣೆಬೆನ್ನೂರು ನಗರದ ನಿವಾಸದಲ್ಲಿ ಹಾಗೂ ಹಾವೇರಿ ದೇವಗರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ನಿರ್ಮಿತಿ ಕೇಂದ್ರದಲ್ಲಿಯೂ ಲೋಕಾಯುಕ್ತರು ದಾಖಲೆ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗದಲ್ಲೂ ಲೋಕಾಯುಕ್ತ ತನಿಖಾಧಿಕಾರಿಗಳು ಸರ್ಕಾರಿ ಅಧಿಕಾರಿಗಳ ನಿವಾಸಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಶಿವಮೊಗ್ಗದಲ್ಲಿನ ಇಬ್ಬರು ಇಂಜಿನಿಯರ್ಗಳ ಮನೆಗಳ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರ್ ಶಂಕರ ನಾಯ್ಕ್ ಮನೆ ಮೇಲೆ ಶೋಧ ನಡೆಸಿ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗದ ಪ್ರಶಾಂತ್ ಅವರ ಹೊಸಮನೆ 3ನೇ ಮುಖ್ಯ ರಸ್ತೆಯ ಕೆ.ಹೆಚ್.ಬಿ ಕಾಲೋನಿಯ ವಾಸದ ಮನೆ, ಭದ್ರಾವತಿ ತಾಲೂಕು ಶೆಟ್ಟಿಹಳ್ಳಿಯ ಎರಡು ತೋಟದ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಇವರಿಗೆ ಶೆಟ್ಟಿಹಳ್ಳಿಯಲ್ಲಿ ಒಟ್ಟು 8 ಎಕರೆ ಅಡಿಕೆ ತೋಟವಿದೆ. ಇಲ್ಲಿನ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಶರಾವತಿ ನಗರದ ಬಿ ಬ್ಲಾಕ್ನ ಪ್ರಶಾಂತ್ ಪತ್ನಿಯ ತಮ್ಮ ನಾಗೇಶ್ ಅವರ ಮನೆ ಮೇಲೆಯೂ ದಾಳಿ ನಡೆದಿದೆ. ಪ್ರಶಾಂತ್ ಅವರು ಕಾರ್ಯ ನಿರ್ವಹಿಸುತ್ತಿರುವ ಸಾಗರ ರಸ್ತೆಯ ತುಂಗಾ ಮೇಲ್ದಂಡೆ ಕಚೇರಿಯ ಮೇಲೆ, ಪ್ರಶಾಂತ್ ಅವರ ಪತ್ನಿ ತಮ್ಮನ ಮನೆ, ತೋಟದ ಮನೆ ಹಾಗೂ ಕಚೇರಿ ಸೇರಿ ಒಟ್ಟು ಐದು ಕಡೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಜ್ಯೂನಿಯರ್ ಇಂಜಿನಿಯರ್ ಶಂಕರ ನಾಯ್ಕ್ ಅವರ ಮನೆ ಮೇಲೂ ದಾಳಿ ನಡೆದಿದ್ದು ಶಂಕರ ನಾಯ್ಕ್ ಅವರ ಮನೆ ಸೇರಿದಂತೆ ಒಟ್ಟು 3 ಕಡೆ ಶಿಕಾರಿಪುರದಲ್ಲಿ ಚಿತ್ರದುರ್ಗದ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಅವರ ನೇತೃತ್ವದಲ್ಲಿ ಬೆಳಗ್ಗೆ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಲೋಕಾಯುಕ್ತ ಡಿವೈಎಸ್ಪಿ ಈಶ್ವರ್ ಉಮೇಶ್ ನಾಯಕ್ ಹಾಗೂ ಲೋಕಾಯುಕ್ತ ಸಿಪಿಐ ಮೃತ್ಯುಂಜಯ ಅವರು ದಾಳಿಯಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಇಂಜಿಯರ್ ಮನೆ ಸೇರಿದಂತೆ ಒಟ್ಟು 8 ಕಡೆ ಲೋಕಾಯುಕ್ತ ದಾಳಿ ನಡೆಸಲಾಗಿದೆ ಎಂದು ಎಸ್ಪಿ ವಾಸುದೇವರಾಮ್ ತಿಳಿಸಿದ್ದಾರೆ.
ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಅವರ ಮನೆಯಲ್ಲಿ ಕೆ.ಜಿ ಗಟ್ಟಲೆ ಚಿನ್ನ ಹಾಗೂ ಬೆಳ್ಳಿ ವಸ್ತುಗಳು ಲಭ್ಯವಾಗಿವೆ. ಇವರ ಹೆಸರಿನಲ್ಲಿ ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಎಂಜಿ ಹೆಕ್ಟರ್, ಮಹೇಂದ್ರ ಥಾರ್ ಜೀಪ್, ಹೂಂಡಾ ಸಿಟಿ ಕಾರು, ಇವರು ಪತ್ನಿ ತಮ್ಮನ ನಾಗೇಶ್ ಅವರ ಮನೆಯಲ್ಲಿ ಎಂಜಿ ಹೆಕ್ಟರ್ ಕಾರು ಪತ್ತೆಯಾಗಿವೆ ಎನ್ನಲಾಗಿದೆ.
ತುಮಕೂರಿನ ಆರ್.ಟಿ. ನಗರದಲ್ಲಿರುವ ಕೆ.ಐ.ಎ.ಡಿ.ಬಿಯ ಭ್ರಷ್ಟ ಅಧಿಕಾರಿ ನರಸಿಂಹಮೂರ್ತಿ ಎಂಬವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಧಿಕಾರಿಗಳು ಸುದೀರ್ಘವಾಗಿ ಕಾಗದ ಪತ್ರಗಳು ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಡಿಎಸ್ಪಿಗಳಾದ ಮಂಜುನಾಥ್ ಹಾಗೂ ಹರೀಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮನೆಯಲ್ಲಿರುವ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿರುವ ಲೋಕಾಯುಕ್ತ ಅಧಿಕಾರಿಗಳು ನಿಖರವಾಗಿ ಅಕ್ರಮ ಆಸ್ತಿ ಎಷ್ಟು ಎಂದು ಪರಿಶೀಲನೆ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಬಸವೇಶ್ವರನಗರದಲ್ಲಿ ಇರುವ ಬೆಸ್ಕಾಂ ಟೆಕ್ನಿಕಲ್ ಡೈರೆಕ್ಟರ್ ರಮೇಶ್ ಮನೆ ಮೇಲೆ ದಾಳಿ ಆಗಿದೆ. ಇಂಡಸ್ಟ್ರೀಸ್ ಆಂಡ್ ಬಾಯ್ಲರ್ ಇಲಾಖೆ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ.
ಮೈಸೂರಿನ ನಿವೇದಿತಾ ನಗರದ ಸಂಕ್ರಾಂತಿ ವೃತ್ತದ ಬಳಿ ಇರುವ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ನಿವಾಸದ ಮೇಲೆ ದಾಳಿ ಆಗಿದೆ. ತೋಟದ ಮನೆ ಸೇರಿ ಹಲವು ಕಡೆ 13 ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದೆ ಎನ್ನಲಾಗಿದೆ.
ಬೀದರ್ ಭೂಸೇನಾ ನಿಗಮದ ಅಧಿಕಾರಿ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್, ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದ ಫಾರ್ಮ್ ಹೌಸ್ ಮೇಲೂ ಲೋಕಾಯುಕ್ತ ಡಿವೈಎಸ್ಪಿ ಓಲೆಕಾರ ನೇತೃತ್ವದಲ್ಲಿ ದಾಳಿ ದಾಳಿ ಮಾಡಲಾಗಿದ್ದು ಹಲವು ಮಹತ್ವದ ಆಸ್ತಿ ಪತ್ರಗಳು ಸೇರಿದಂತೆ ಮತ್ತಿತರ ಅಕ್ರಮ ಆಸ್ತಿ ಗಳಿಕೆ ಕಾಗದ ಪತ್ರಗಳನ್ನು ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗಿದೆ.