
ಹೆಜ್ಜೆ ಹೆಜ್ಜೆಗೂ ಬಂದೂಕು ಹಿಡಿದ ಸೈನಿಕರು, ಕಣ್ಣ ದೃಷ್ಟಿಗೆ ಸೌಂದರ್ಯ ರಾಶಿಯ ಹಿಮ ಕಣಿವೆಗಳು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೆಜ್ಜೆ ಹೆಜ್ಜೆಗೆ ಬಂದೂಕು ಹಿಡಿದ ಸೈನಿಕರು, ಕಣ್ಣ ದೃಷ್ಟಿಗೆ ಸೌಂದರ್ಯ ರಾಶಿಯ ಹಿಮ ಕಣಿವೆಗಳು, ಮನದೊಳಗೆ ಸಾವಿನ ನೆರಳ ಸುಳಿಗಳು……
ದೇಹ ಮತ್ತು ಮನಸ್ಸು, ಪ್ರಕೃತಿ ಮತ್ತು ಜೀವರಾಶಿ, ಧರ್ಮ ಮತ್ತು ಕಾನೂನು, ತಿಳಿವಳಿಕೆ ಮತ್ತು ನಡವಳಿಕೆ…..
ಜಮ್ಮು ಕಾಶ್ಮೀರ ಲಡಾಖ್ ಪ್ರಾಂತ್ಯದಲ್ಲಿ ಪ್ರವಾಸ ಮಾಡುತ್ತಿರುವ ಈ ಸಮಯದಲ್ಲಿ ಈ ವಿಷಯಗಳು ಒಂದು ಸವಾಲಿನಂತೆ ಕಾಡುತ್ತಿದೆ. ಒಂದು ಕಡೆ ಪ್ರಾಕೃತಿಕ ಸೌಂದರ್ಯ ತನ್ನ ಪರಾಕಾಷ್ಠೆಯ ಹಂತದಲ್ಲಿ ಇರುವಂತೆ ಭಾಸವಾಗುತ್ತದೆ. ಆದರೆ ಅದೇ ಸಮಯದಲ್ಲಿ ಮೈನಸ್ ಡಿಗ್ರಿಯ ಕೊರೆಯುವ ಚಳಿ ಸ್ಥಳೀಯರನ್ನು ಹೊರತುಪಡಿಸಿ ಇತರ ಎಲ್ಲರಿಗೂ ಬಹುದೊಡ್ಡ ಸವಾಲಾಗುತ್ತದೆ. ಸೌಂದರ್ಯ ಸವಿಯಲು ಸಹ ಕಷ್ಟವಾಗಿ ಆರೋಗ್ಯದ ದೃಷ್ಟಿಯಿಂದ ಅನೇಕರಿಗೆ ಮಾನಸಿಕವಾಗಿ ಹಿಂಸಾತ್ಮಕವೂ ಆಗುತ್ತದೆ. ದೇಹವನ್ನು ಸದಾಕಾಲವೂ ಸೈನಿಕ ಶಿಸ್ತಿನಿಂದ ಅತ್ಯಂತ ಶ್ರಮದಾಯಕವಾಗಿ ರೂಪಿಸಿಕೊಂಡಿದ್ದರೆ ಮಾತ್ರ ಸ್ವಲ್ಪ ಸಹಜವಾಗಿರುತ್ತದೆ. ದೇಹದ ಯಾವ ಭಾಗವನ್ನು ಸಹ ಹೊರ ಚಾಚುವುದು ತುಂಬಾ ಕಷ್ಟ. ತಣ್ಣಗಿನ ನೀರನ್ನು ಮುಟ್ಟುವುದು ಸಹ ನೋವಿನ ಅನುಭವ ನೀಡುತ್ತದೆ. ಮನಸ್ಸು ಕುಗ್ಗುತ್ತದೆ. ಪ್ರಕೃತಿಯ ಸೌಂದರ್ಯ ಸವಿಯಲು ಅಡ್ಡಿಯಾಗುತ್ತದೆ.
ಈ ಭಾಗದ ಇನ್ನೊಂದು ವಿಶೇಷತೆ ಹಿಂದೂ ಮತ್ತು ಮುಸ್ಲಿಂ – ಸೈನಿಕರು ಮತ್ತು ಭಯೋತ್ಪಾದಕರು – ದೇಶ ಪ್ರೇಮ ಮತ್ತು ದೇಶ ದ್ರೋಹ – ಇತಿಹಾಸ ಮತ್ತು ವರ್ತಮಾನ – ಭಾವುಕತೆ ಮತ್ತು ವಾಸ್ತವ ಇವುಗಳ ತಾಕಲಾಟ ಮತ್ತು ಸಮಗ್ರ ಚಿಂತನೆಯ ಕೊರತೆ.
ಸ್ವಾರ್ಥವು ನಮ್ಮ ವಿಶಾಲ ಮತ್ತು ಸತ್ಯ ಚಿಂತನೆಯನ್ನು ಮಂಕುಗೊಳಿಸುತ್ತದೆ. ಸೃಷ್ಟಿಯ ಸಹಜತೆಯನ್ನು ಅದರ ಮೂಲದಿಂದ ಯೋಚಿಸುವ ಬದಲು ನನ್ನ ದೇಶ ನನ್ನ ಧರ್ಮ ನನ್ನ ಜಾತಿ ನನ್ನ ಭಾಷೆ ಹೀಗೆ ಯೋಚಿಸುತ್ತಾ ಹೋದಾಗ ಸಮಸ್ಯೆಗಳು ಜಟಿಲವಾಗುತ್ತದೆ. ಕಾಶ್ಮೀರ ಭಾಗದ ಸಾಮಾಜಿಕ ವಾತಾವರಣವನ್ನು ಗಮನಿಸಿದಾಗ ಈ ಅಂಶಗಳೇ ಮೇಲುಗೈ ಪಡೆದಿವೆ.
ಒಂದು ಅಂದಾಜಿನ ಪ್ರಕಾರ ಕಾಶ್ಮೀರ ಕಣಿವೆಯ ಬಹುತೇಕ ಮುಸ್ಲಿಮರು ನಾವು ಇಲ್ಲಿನ ಮೂಲನಿವಾಸಿಗಳು. ಸುಮಾರು ಶತಮಾನಗಳ ಹಿಂದೆ ಆಕ್ರಮಣದಿಂದ ಮತ್ತು ವಲಸೆಯಿಂದ ಇಲ್ಲಿ ಬಂದು ನೆಲೆಸಿದ ಮೇಲೆ ಇಲ್ಲಿಯೇ ಹುಟ್ಟಿ ಬೆಳೆದವರು. ಇದು ನಮ್ಮ ಸ್ವತಂತ್ರ ದೇಶ. ಭಾರತದ ಸ್ವಾತಂತ್ರ್ಯ ಮತ್ತು ವಿಭಜನೆಯ ನಂತರ ನಮ್ಮದು ಸ್ವತಂತ್ರ ರಾಷ್ಟ್ರ ಎಂಬುದು ಅವರ ಅಭಿಪ್ರಾಯ.
ಅವರು ಸ್ವಾಯತ್ತ ಮತ್ತು ಸ್ವತಂತ್ರ ರಾಷ್ಟ್ರವನ್ನು ಬಯಸುತ್ತಾರೆ. ಇದರಲ್ಲಿಯೂ ಅನೇಕರು ವಿಶೇಷ ಸ್ಥಾನಮಾನ ಹೊಂದಿ ಭಾರತದ ಜೊತೆಯೇ ಇರಬೇಕು ಎಂಬ ಆಕಾಂಕ್ಷೆಯನ್ನು ಹೊಂದಿದ್ದಾರೆ. ಸುಮಾರು ಶೇಕಡಾ 10 ರಷ್ಟು ಇಸ್ಲಾಂ ಧರ್ಮದ ಕಟ್ಟಾ ಅನುಯಾಯಿಗಳು ಧರ್ಮ ಮತ್ತು ವ್ಯಾವಹಾರಿಕ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಸೇರಲು ಬಯಸುತ್ತಾರೆ. ಇಂತಹವರ ಬೆಂಬಲಕ್ಕಾಗಿ ನೆರೆಯ ಪಾಕಿಸ್ತಾನ ಅಧಿಕೃತವಾಗಿಯೇ ಕೆಲಸ ಮಾಡುತ್ತದೆ. ಅವರಿಗೆ ಜೊತೆಯಾಗಿ ಭಯೋತ್ಪಾದಕ ಸಂಘಟನೆಗಳು ನಿರಂತರ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಅದರ ಭಾಗವಾಗಿ ಅಲ್ಲಿನ ಹಿಂದುಗಳ ಹತ್ಯೆಯೂ ನಡೆಯುತ್ತಿದೆ. ಮತ್ತೂ ಮುಂದುವರಿದು ಭಾರತದ ರಾಜಕೀಯ ಪಕ್ಷಗಳು ಸಹ ಈ ವಿಷಯವನ್ನು ಭಾವನಾತ್ಮಕ ಮತ್ತು ರಾಜಕೀಯಗೊಳಿಸಿವೆ. ಸೈನ್ಯದ ಕೆಲವು ಅತಿರೇಕಗಳು, ರಾಜಕಾರಣಿಗಳ ತುಷ್ಟೀಕರಣ ಸಹ ಇದರಲ್ಲಿ ತಮ್ಮ ಪಾತ್ರ ನಿರ್ವಹಿಸಿದೆ.
ಒಟ್ಟಾರೆ ಕಾಶ್ಮೀರದ ಬಗ್ಗೆ ಸ್ಥಳೀಯರು, ಪಾಕಿಸ್ತಾನದವರು, ಭಾರತದವರು, ಭಯೋತ್ಪಾದಕರು ಬೇರೆ ಬೇರೆ ಅಭಿಪ್ರಾಯ ಹೊಂದಿದ್ದಾರೆ. ಆದರೆ ಸಮಸ್ಯೆ ಬಗೆಹರಿಯಲು ಯಾರು ಏನು ಮಾಡಬೇಕು ಮತ್ತು ಯಾವ ದೃಷ್ಟಿಕೋನದಿಂದ ಯೋಚಿಸಬೇಕು ಎಂಬುದು ಅನುಮಾನದ ಹುತ್ತದೊಳಗೆ ಸಿಲುಕಿ ಗೊಂದಲವಾಗಿದೆ.
ಪಾಕಿಸ್ತಾನದವರಿಗೆ ಕಾಶ್ಮೀರದ ಅವಶ್ಯಕತೆ ಇಲ್ಲ. ಇರುವ ದೇಶವನ್ನು ಉತ್ತಮವಾಗಿ ನಿರ್ವಹಿಸಿ ಭಾರತದೊಂದಿಗೆ ಇತರೆ ವಿಷಯಗಳಲ್ಲಿ ಸೌಹಾರ್ದತೆ ಕಾಪಾಡಿಕೊಂಡು ವ್ಯಾಪಾರ ವ್ಯವಹಾರ ಸಾಧಿಸಿ ಅಭಿವೃದ್ಧಿ ಹೊಂದುವುದು ಉತ್ತಮ ನಿರ್ಧಾರ. ಇಲ್ಲದಿದ್ದರೆ ಅದು ನಿರಂತರ ಕಷ್ಟಕ್ಕೆ ಸಿಲುಕಿದೆ ಮತ್ತು ಸಿಲುಕುತ್ತಲೇ ಇರುತ್ತದೆ. ಅಪಾರ ಪ್ರಮಾಣದ ಹಣ ಅನವಶ್ಯಕವಾಗಿ ಇದಕ್ಕಾಗಿ ವ್ಯಯಿಸುವ ಮೂರ್ಖತನ ಬಿಡಬೇಕು.
ಭಯೋತ್ಪಾದಕರು ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸಲು ಕಾರಣವೇ ಇಲ್ಲ. ಅದು ಹಿಂಸೆ, ಅಪರಾಧ ಮತ್ತು ಭಯೋತ್ಪಾದನೆ. ಜೊತೆಗೆ ಅವರು ಯಶಸ್ವಿಯಾಗುವುದೂ ಇಲ್ಲ. ಜೀವ ಹಾನಿ ಮಾತ್ರ ಖಚಿತ. ಅವರ ಕೃತ್ಯಗಳಿಂದ ಅಲ್ಲಿನ ಇವರ ಅನುಯಾಯಿಗಳಿಗೇ ಹೆಚ್ಚು ತೊಂದರೆ. ಅವರು ಬೇರೆ ಕೆಲಸ ನೋಡಿಕೊಳ್ಳುವುದು ಉತ್ತಮ. ಅವರನ್ನು ಸಂಪೂರ್ಣ ನಿಗ್ರಹಿಸಲು ಭಾರತ ಸರ್ಕಾರ ಇನ್ನೂ ಕಠಿಣ ಮತ್ತು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಸ್ಥಳೀಯರ ವಿಶೇಷ ಸ್ಥಾನಮಾನದ ಬೇಡಿಕೆ ಸರಿ ಇದೆ. ಆದರೆ ಈಗ ಅದು ಕೈಮೀರಿ ಹೋಗಿದೆ. ಅವರಿಗೆ ಇದ್ದ ವಿಶೇಷ ಅಧಿಕಾರವನ್ನು ಅಲ್ಲಿನ ಆಡಳಿತಗಾರರು ದುರುಪಯೋಗ ಪಡಿಸಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಭ್ರಷ್ಟಾಚಾರ ಸ್ವಜನ ಪಕ್ಷಪಾತ ಮೀರಿ ಅಲ್ಲಿನ ಹಿಂದುಗಳ ಹಿತರಕ್ಷಣೆ ಕಾಯುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಅನೇಕ ಭಾರತೀಯರಿಗೆ ಕಾಶ್ಮೀರ ಒಂದು ಪ್ರತ್ಯೇಕ ರಾಷ್ಟ್ರ ಮತ್ತು ಅದು ಪಾಕಿಸ್ತಾನದ ಪರ ಎಂದು ಭಾವಿಸುವಂತೆ ಘಟನೆಗಳು ನಡೆದಿವೆ. ಆದರೂ ಜಮ್ಮು ಲಡಾಕ್ ಪ್ರದೇಶಗಳನ್ನು ಹೊರತುಪಡಿಸಿ ಕೇವಲ ಕಾಶ್ಮೀರ ಭಾಗಕ್ಕೆ ಮಾತ್ರ ಸ್ವಾಯತ್ತತೆ ನೀಡಿ ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ರೀತಿಯ ಆಧುನಿಕ ಅಭಿವೃದ್ಧಿ ಸಾಧಿಸಿ ನಮ್ಮ ಅನೇಕ ಸೈನಿಕರ ಅಕಾಲಿಕ ಸಾವುಗಳನ್ನು ತಡೆಯುವುದು ಉತ್ತಮ. ಇಲ್ಲದಿದ್ದರೆ ಈ ಸಮಸ್ಯೆ ದೀರ್ಘಕಾಲ ಹೀಗೆ ರಕ್ತದಲ್ಲಿಯೇ ಮುಳುಗಿರುವ ಸಾಧ್ಯತೆ ಇದೆ.
ಭಾರತ ಸರ್ಕಾರ ಇದನ್ನು ಒಂದು ರಾಜಕೀಯ ಅಥವಾ ಸೈನಿಕ ವಿಷಯ ಎಂದು ಮಾತ್ರ ಪರಿಗಣಿಸದೆ ಅನೇಕ ಹಂತಗಳಲ್ಲಿ ಈ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಬೇಕು. ಅದರಲ್ಲಿ ಕಾಶ್ಮೀರ ಭಾಗಕ್ಕೆ ಮಾತ್ರ (ಜಮ್ಮು – ಲಡಾಖ್ ಹೊರತುಪಡಿಸಿ ) ವಿಶೇಷ ಸ್ಥಾನಮಾನ, ಪಾಕಿಸ್ತಾನದ ಜೊತೆ ಮಾತುಕತೆ, ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನದ ಸೈನ್ಯದ ಜೊತೆ ಸೇರಿ ಜಂಟಿ ಕಾರ್ಯಾಚರಣೆ, ಪಾಕಿಸ್ತಾನದ ಅಭಿವೃದ್ಧಿಗೆ ಒಂದಷ್ಟು ಎಲ್ಲಾ ರೀತಿಯ ಸಹಾಯ, ಪಾಕಿಸ್ತಾನದಲ್ಲಿ ಭಾರತದ ಮಾರುಕಟ್ಟೆ ವಿಸ್ತರಿಸಿ ನಮ್ಮ ವಸ್ತುಗಳು ಅಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟ ಸಿಗುವಂತೆ ಮಾಡುವುದು, ಸಿನಿಮಾ ಕಲೆ ಕ್ರೀಡೆ ಮುಂತಾದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ಮತ್ತೆ ಜಾರಿ ಮಾಡುವುದು, ಮುಖ್ಯವಾಗಿ ಭಾರತ ಮತ್ತು ಪಾಕಿಸ್ತಾನದ ಹಾಕಿ ಮತ್ತು ಕ್ರಿಕೆಟ್ ತಂಡವನ್ನು ಈಗ ಇರುವ ಪ್ರತ್ಯೇಕ ತಂಡಗಳನ್ನು ಹಾಗೆಯೇ ಉಳಿಸಿಕೊಂಡು ಒಂದು ಎ ಗ್ರೇಡ್ ಟೀಮ್ ರಚಿಸಿ ವಿಶ್ವದ ಇತರ ತಂಡಗಳೊಂದಿಗೆ ಭಾರಸ್ತಾನ ಟೀಮ್ ರಚಿಸಿ ಆಡಿಸಬೇಕು. ಹಾಗೆ ಸಿನಿಮಾ ರಂಗವನ್ನು ಜೋಡಿಸಬೇಕು. ಆಗ ಕಾಶ್ಮೀರ ಒಂದು ವಿವಾದವೇ ಆಗಿರುವುದಿಲ್ಲ.
ಇದು ಕನಸೇ ಇರಬಹುದು. ಆದರೆ ಎಷ್ಟೊಂದು ಸುಂದರ ಮಕ್ಕಳು, ಬಲಿಷ್ಠ ಸೈನಿಕರು, ಬಹಳಷ್ಟು ಸಾಮಾನ್ಯ ಜನರ ಬದುಕು ದುರಂತದಲ್ಲಿ ಅಗತ್ಯವಾಗುವುದನ್ನು ತಡೆಯಲು ಇದನ್ನು ಪ್ರಯತ್ನಿಸಲೇ ಬೇಕು. ಕೇವಲ ಎರಡು ದೇಶಗಳ ರಾಜಕೀಯ ನಾಯಕರ ಅನುಮಾನದಿಂದ ಅಮಾಯಕ ಜೀವಗಳು ಬಲಿಯಾಗುವುದನ್ನು ನೋಡುವುದು ಕೇಳುವುದು ತುಂಬಾ ಹಿಂಸೆಯಾಗುತ್ತದೆ.
ಈ ಪ್ರಯತ್ನಗಳು ಹಿಂದೆ ನಡೆದಿದೆ. ಪಾಕಿಸ್ತಾನ ನಂಬಿಕೆಗೆ ಅರ್ಹವಲ್ಲ ಇತ್ಯಾದಿ ಮಾತುಗಳು ಈಗಲೂ ಚಾಲ್ತಿಯಲ್ಲಿದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಎರಡು ದೇಶಗಳ ಅನೇಕ ಸಾಮಾನ್ಯ ಜನರ ಮನಸ್ಥಿತಿ ಬದಲಾಗಿದೆ. ಪಾಕಿಸ್ತಾನವೂ ಸಹ ಒಂದು ಸಂಧಾನದ ಮಾರ್ಗಕ್ಕೆ ಕಾಯುತ್ತಿರಬಹುದು. ಸ್ಥಳೀಯ ಕಾಶ್ಮೀರಿಗಳು ಸಹ ಆಧುನಿಕತೆಯಿಂದ ಸಾಕಷ್ಟು ಬದಲಾಗಿ ನೆಮ್ಮದಿಗಾಗಿ ತಹತಹಿಸುತ್ತಿದ್ದಾರೆ. ಕೆಲವೇ ದುಷ್ಟರು ಮಾತ್ರ ಇದನ್ನು ಕೆಡಿಸುತ್ತಿದ್ದಾರೆ.
ಮೊದಲು ಮನುಷ್ಯ, ಆಮೇಲೆ ಹಿಂದು ಮುಸ್ಲಿಂ ಕಾಶ್ಮೀರಿ ಪಾಕಿಸ್ತಾನಿ ಮುಂತಾದ ಎಲ್ಲವೂ. ಪ್ರೀತಿ ಮತ್ತು ಮಾನವೀಯತೆ ಮಾತ್ರ ಸಾರ್ವಕಾಲಿಕ ಮತ್ತು ಮಾನವ ಧರ್ಮ.
ಕಾಶ್ಮೀರದ ನೆಲದಲ್ಲಿ ಓಡಾಡುವಾಗ ಬರಿಮೈ ಪಕೀರ ನಮ್ಮ ಮೋಹನದಾಸ ಕರಮಚಂದ ಗಾಂಧಿ ನೆನಪಾಗಿ ಕಣ್ಣುಗಳು ಒದ್ದೆಯಾದವು. ಕಾರ್ಗಿಲ್ ಯುದ್ದವೂ ಸೇರಿ ಸುಮಾರು ನಾಲ್ಕು ಯುದ್ದಗಳು ಮತ್ತು ಅದರಿಂದ ಹತರಾದ ಎರಡೂ ಕಡೆಯ ಲಕ್ಷಾಂತರ ಜನರು, ಅಂಗ ಊನರಾದ ಲಕ್ಷಾಂತರ ಜನರು, ಅನಾಥವಾದ ಅನೇಕ ಕುಟುಂಬಗಳು ನೆನಪಾಗಿ ಕಾಶ್ಮೀರದ ಸೌಂದರ್ಯ ಕೆಂಪಾಗಿ ಕಾಣಿಸುತ್ತಿತ್ತು…..
ಗಾಂಧಿಯಂತ ವ್ಯಕ್ತಿತ್ವಕ್ಕೆ ಮಾತ್ರ ಕೆಂಪನ್ನು, ಹಸಿರನ್ನು, ಕೇಸರಿಯನ್ನು ಬಿಳಿಯಾಗಿಸುವ ಶಕ್ತಿ ಇತ್ತು. ಆದರೆ ಮನುಷ್ಯರೇ ಅಪರೂಪವಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮೆಲ್ಲರ ಬದುಕು ದಿಕ್ಕು ದೆಸೆಯಿಲ್ಲದೇ ಸಾಗುತ್ತಿದೆ. ಕ್ಷಮಿಸಿ ಇದು ಒಂದು ಅಭಿಪ್ರಾಯ ಮಾತ್ರ……….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ-ವಿವೇಕಾನಂದ ಎಚ್.ಕೆ.
9844013068…..