
ಡ್ರಗ್ಸ್ ಮಾರಾಟ, ಮನೆಯೊಡತಿ ಸೇರಿ ಮೂವರು ಮಹಿಳೆಯರ ಬಂಧನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉತ್ತರ ಭಾರತದಿಂದ ಡ್ರಗ್ಸ್ ತರಿಸಿಕೊಂಡು ನಿರಂತರವಾಗಿ ಮಾರಾಟ ಮಾಡುತ್ತಿದ್ದ ಮನೆಯೊಡತಿ ಸೇರಿ ಮೂವರು ಮಹಿಳೆಯರನ್ನು ಪುಲಕೇಶಿನಗರ ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಪ್ರೇಮ, ಸುನಿತಾ ಹಾಗೂ ಮನೆ ಮಾಲೀಕರಾದ ಮುತ್ಯಾಲಮ್ಮ ಇವರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.
ಬೆಂಗಳೂರು ನಗರದ ಜೀವನಹಳ್ಳಿ ನಿವಾಸಿ ಮುತ್ಯಾಲಮ್ಮ ಮನೆಯಲ್ಲಿ ಜಾರ್ಖಂಡ್ನ ಗುಡ್ಡಗಾಡು ಪ್ರದೇಶದ ಪ್ರೇಮ ಮತ್ತು ಸುನಿತಾ ಇಬ್ಬರು ಬಾಡಿಗೆಗೆ ಇದ್ದರು. ಜಾರ್ಖಂಡ್ನ ಗುಡ್ಡಗಾಡು ಪ್ರದೇಶದಲ್ಲಿ ಆರೋಪಿಗಳು ಗಾಂಜಾ ಬೆಳೆಯುತ್ತಿದ್ದರು. ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಗಾಂಜಾ ಇಟ್ಟು ಪುಲಕೇಶಿ ನಗರದ ಸುತ್ತಮುತ್ತಲಿನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಒಂದು ಗ್ರಾಂಗೆ 500 ರೂ.ವರೆಗೂ ಹಣ ಸಂಪಾದನೆ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ಜೀವನಹಳ್ಳಿಯ ಮುತ್ಯಾಲಮ್ಮ ಸಹ ಜಾರ್ಖಂಡ್ ಆರೋಪಿಗಳಿಗೆ ಬಾಡಿಗೆ ನೀಡಿದ್ದರು. ಇವರು ಮಾಡುತ್ತಿದ್ದ ಗಾಂಜಾ ದಂಧೆಗೆ ಮಾಲಕಿ ಸಾಥ್ ನೀಡುತ್ತಿದ್ದಳು. ಹೀಗಾಗಿ ಬಾಡಿಗೆ ಪಡೆಯದೇ ಮನೆಯನ್ನು ಉಚಿತವಾಗಿ ನೀಡಿದ್ದಳು ಎನ್ನಲಾಗಿದೆ. ಮನೆ ಬಾಡಿಗೆ ಪಡೆಯದೆ ಮನೆ ನೀಡಿದ್ದರಿಂದ ಮಾದಕ ವಸ್ತು ಮಾರಾಟದಿಂದ ಬಂದ ಹಣದಲ್ಲಿ ಪಾಲು ಪಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ-ಮಗ ಭಾಗಿ:
ಆರೋಪಿ ಮುತ್ಯಾಲಮ್ಮ ಕುಮ್ಮಕ್ಕಿನಿಂದ ಚಿಕ್ಕ ವಯಸ್ಸಿನಲ್ಲೇ ಪುತ್ರ ದರ್ಶನ್ ಸಹ ಡ್ರಗ್ಸ್ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದನು. ಹಲವು ಬಾರಿ ದರ್ಶನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. ಬಾಲಮಂದಿರಲ್ಲಿಯೂ ವಾರ್ಡನ್ ಮೇಲೆ ಹಲ್ಲೆ ನಡೆಸಿದ್ದರಿಂದ ಎನ್ ಡಿಪಿಎಸ್ ಪ್ರಕರಣದಲ್ಲಿ ದರ್ಶನ್ನನ್ನು ಬಂಧಿಸಿದ್ದ ಪೊಲೀಸರು ಈಗ ಆತನ ತಾಯಿ ಮುತ್ಯಾಲಮ್ಮಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.