
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ದಿಢೀರ್ ಸಾವು, ಹೃದಯಾಘಾತವೋ ಆತ್ಮಹತ್ಯೆಯೋ?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಲಾಡ್ಜ್ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಹೃದಯಾಘಾತದಿಂದ ನಿಧನರಾಗಿರುವ ಸಿಪಿಐ ಲಿಂಗರಾಜ್(39) ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಮೂಲದ ಲಿಂಗರಾಜ್, ಬೆಂಗಳೂರಿನಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದು ಕಳೆದ ರಾತ್ರಿ ಚಿತ್ರದುರ್ಗಕ್ಕೆ ಆಗಮಿಸಿ ಲಾಡ್ಜ್ ನಲ್ಲಿ ವಿಶ್ರಾಂತಿ ಪಡೆಯಲು ಖಾಸಗಿ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಗುರುವಾರ ಬೆಳಿಗ್ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು ನಗರದ ಬಸವೇಶ್ವರ ಆಸ್ಪತ್ರೆಗೆ ತೆರಳುವ ವೇಳೆ ಮಾರ್ಗಮಧ್ಯೆಯೇ ಲಿಂಗರಾಜ್ ಮೃತಪಟ್ಟಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಹೃದಯಾಘಾತವೋ ಎನ್ನುವುದು ತನಿಖೆ ನಂತರ ತಿಳಿಯಲಿದೆ.
ಲಿಂಗರಾಜ್ 2007ರ ಬ್ಯಾಚ್ನಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಕಡೂರು, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಲಿಂಗರಾಜ್ ಸೇವೆ ಸಲ್ಲಿಸಿದ್ದಾರೆ ಎನ್ನಲಾಗಿದೆ.