
12ನೇ ಶತಮಾನದ ವಚನಕಾರರ ಸಾಹಿತ್ಯ ವಿಶಿಷ್ಟ ಹಾಗೂ ವಸ್ತು ವೈವಿಧ್ಯತೆಯಿಂದ ಕೂಡಿದೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಇದುವರೆಗೆ ಹೇಳದಿರುವ ಸಂಗತಿಗಳನ್ನು ವಿಶಿಷ್ಟ ನುಡಿಗಟ್ಟಿನಲ್ಲಿ ಕಟ್ಟಿಕೊಡುವ ಶಕ್ತಿ ಕಾವ್ಯಕ್ಕಿದೆ ಎಂದು ವಿಮರ್ಶಕ ಡಾ.ಕೆ.ಪಿ. ನಟರಾಜ್ ತಿಳಿಸಿದರು. ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ತೇಜಸ್ ಇಂಡಿಯಾ-ಸಿವಿಜಿ ಇಂಡಿಯಾ ಬೆಂಗಳೂರು, ಪಟೇಲ್ ಪಬ್ಲಿಕೇಷನ್ಸ್ ಪ್ರಕಟಿಸಿರುವ ಐದು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಜಬೀವುಲ್ಲಾ ಎಂ. ಅಸದ್ ಅವರ ‘ಗಾಳಿಗೆ ಕಟ್ಟಿದ ಗೆಜ್ಜೆ’ ಮತ್ತು ‘ಅನಾವರಣ’ ಕೃತಿಗಳನ್ನು ಕುರಿತು ಮಾತನಾಡಿದರು. ಹನ್ನರಡನೇ ಶತಮಾನದ ಪ್ರತಿ ವಚನಕಾರನ ಭಾಷೆ ವಿಶಿಷ್ಟ ಹಾಗೂ ವಸ್ತು ವೈವಿಧ್ಯತೆಯಿಂದ ಕೂಡಿದೆ. ಕವಿಯಾದವನು ದೊಡ್ಡದನ್ನು ಕಾಣುವ ಭೂಮಾನುಭೂತಿ ಇರಬೇಕು. ಸಾಂಸ್ಥಿಕ ಸಂಸ್ಥೆಗಳನ್ನು ಸ್ಥಳಾಂತರಿಸುವ ಕ್ರಿಯೆ ಪ್ರತಿಯೊಬ್ಬರಲ್ಲೂ ಆಗಬೇಕಿದೆ. ಬುದ್ಧತ್ವ ಎಂದರೆ ಗೌತಮನಲ್ಲಿ ಆದ ಬದಲಾವಣೆ. ಕುವೆಂಪು ಅವರ ಕವನಗಳಲ್ಲಿ ಬುದ್ಧತ್ವ ಮಾರ್ಧನಿಸುತ್ತದೆ ಎಂದರು. ಅರ್ಥಶಾಸ್ತ್ರಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ನಾವೆಲ್ಲ ಅಜ್ಞಾನವೆಂಬ ತೊಟ್ಟಿಲಲ್ಲಿ ಇದ್ದೇವೆ. ಭ್ರಾಂತಿಯಲ್ಲಿ ನಾವಿದ್ದೇವೆ. ಭ್ರಾಂತಿಯನ್ನು ಕನಸುಗಳಾಗಿ ರೂಪಾಂತರಿಸುವ ಕಲೆಗಾರಿಕೆಯನ್ನು ಗಳಿಸಿಕೊಳ್ಳಬೇಕಿದೆ. ನಾವು ಇಂದಿನ ಓದನ್ನು ಬದುಕನ್ನಾಗಿ ಮಾಡಿಕೊಂಡಿಕೊಂಡಿದ್ದೇವಾ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಬದುಕು ಸಹಜ ಹಾಗೂ ಸರಳವಾಗಿರಬೇಕು. ಪ್ರತಿಭೆ ಶ್ರೇಷ್ಟತೆ ಹೊರಹಾಕುವುದು ಸಾಹಿತ್ಯ ಆಗಬಾರದು. ಅಜ್ಞಾನವನ್ನು ಸುಜ್ಞಾನ ಮಾಡುವ ಕಲೆಗಾರಿಕೆ ಬೆಳೆಸಿಕೊಳ್ಳಬೇಕು ಎಂದರು. ಪ್ರಾಂಶುಪಾಲ ಡಾ.ಆರ್.ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಪ್ರೀತಿ ಮಾಯವಾಗಿ ಇಂದು ಧರ್ಮ, ಜಾತಿ, ಸಂಪತ್ತು ಗಳಿಕೆ ಮುನ್ನೆಲೆಗೆ ಬಂದಿರುವುದು ವಿಷಾದಕರ ಎಂದರು.ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ‘ಹಿರಿಯೂರು ಸೀಮೆ ಜಾನಪದ’ ಮತ್ತು ‘ನೆಲದ ಸಂಕಥನ’ ಎಂಬ ಎಂ.ಜಿ. ರಂಗಸ್ವಾಮಿ ಅವರ ಎರಡು ಕೃತಿಗಳನ್ನು ಕುರಿತು ಮಾತನಾಡಿದರು.ವಿಶ್ರಾಂತ ಪ್ರಾಂಶುಪಾಲ ಡಾ.ಸಿ. ಶಿವಲಿಂಗಪ್ಪ ‘ಜೀವನ ತರಂಗ’ ಎಂಬ ಪ್ರೊ.ಆರ್.ಗುರುಮೂರ್ತಿ ಅವರ ಕವನ ಸಂಕಲನ ಕುತಿತು ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ. ಶರಣಪ್ಪ, ನಿಕಟಪೂರ್ವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ತಿಪ್ಪಣ್ಣ ಮರಿಕುಂಟೆ, ಕವಿ ನಿಸಾರ್ ಅಹಮದ್, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜನಪ್ಪ, ಪುಸ್ತಕ ಪ್ರಕಾಶಕ ಡಾ.ಚನ್ನವೀರೇಗೌಡ, ಕೃತಿಕಾರ ಎಂ.ಜಿ.ರಂಗಸ್ವಾಮಿ ಮಾತನಾಡಿದರು. ಪ್ರೊ.ಬೆಳಗಟ್ಟ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಬಿಡುಗಡೆ: ಈ ಸಂದರ್ಭದಲ್ಲಿ ಎಂ.ಜಿ.ರಂಗಸ್ವಾಮಿ ಅವರ ‘ಹಿರಿಯೂರು ಸೀಮೆ ಜಾನಪದ’ ಮತ್ತು ‘ನೆಲದ ಸಂಕಥನ’, ಹಾಗೂ ಕವಿ ಜಬೀವುಲ್ಲಾ ಎಂ.ಅಸದ್ ಅವರ ‘ಗಾಳಿಗೆ ಕಟ್ಟಿದ ಗೆಜ್ಜೆ’ ಮತ್ತು ‘ಅನಾವರಣ’ ಹಾಗೂ ಪ್ರೊ.ಗುರುಮೂರ್ತಿ ಅವರ ‘ಜೀವನ ತರಂಗ’ ಎಂಬ ಐದು ಕೃತಿಗಳು ಬಿಡುಗಡೆಗೊಂಡವು. ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಎಂ.ಜಿ.ರಂಗಸ್ವಾಮಿ ಅವರ ‘ಹಿರಿಯೂರು ಸೀಮೆ ಜಾನಪದ’ ಮತ್ತು ‘ನೆಲದ ಸಂಕಥನ’, ಹಾಗೂ ಕವಿ ಜಬೀವುಲ್ಲಾ ಎಂ.ಅಸದ್ ಅವರ ‘ಗಾಳಿಗೆ ಕಟ್ಟಿದ ಗೆಜ್ಜೆ’ ಮತ್ತು ‘ಅನಾವರಣ’ ಹಾಗೂ ಪ್ರೊ.ಗುರುಮೂರ್ತಿ ಅವರ ‘ಜೀವನ ತರಂಗ’ ಎಂಬ ಐದು ಕೃತಿಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.