ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸುದೀರ್ಘ ಕಾಯುವಿಕೆಗೆ ತೆರೆಬಿದ್ದಿದ್ದು, ಅವರ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ - ಅಪ್ಸ್' ಸಿನಿಮಾ ಶುಕ್ರವಾರ ಪ್ರಪಂಚದ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿದೆ. ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದರೂ, ಥಿಯೇಟರ್‌ಗಳ ಬಳಿ ಅಭಿಮಾನಿಗಳ ಸಂಭ್ರಮ ಗಗನಕ್ಕೇರಿದೆ.
ಕರ್ನಾಟಕದಿಂದ ಮುಂಬೈವರೆಗೆ ಫ್ಯಾನ್ಸ್ ಹಬ್ಬ-
ಬೆಂಗಳೂರಿನ ನರ್ತಕಿ, ದಾವಣಗೆರೆಯ ತ್ರಿಶೂಲ್-ತ್ರಿನೇತ್ರ ಸೇರಿದಂತೆ ಪ್ರಮುಖ ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ 6 ಗಂಟೆಯಿಂದಲೇ ಫ್ಯಾನ್ಸ್ ಶೋಗಳು ಪ್ರಾರಂಭವಾದವು.
ಪಟಾಕಿ ಸಿಡಿತ, ಡೋಲು ಬಾರಿಸುವುದು ಹಾಗೂ ಹೂಮಳೆ ಸುರಿಸುವ ಮೂಲಕ ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸಿದರು.
ಚಿತ್ರದುರ್ಗ ಹಾಗೂ ರಾಯಚೂರಿನ ಐನಾಕ್ಸ್ ಮಾಲ್‌ಗಳಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಟಾಕ್ಸಿಕ್ ಟಿ-ಶರ್ಟ್ ಧರಿಸಿ, ಬ್ಯಾನರ್ ಹಿಡಿದು ಆಗಮಿಸಿದ್ದರು. ಕರ್ನಾಟಕ ಮಾತ್ರವಲ್ಲದೆ ಹೈದರಾಬಾದ್‌ನ ಸುದರ್ಶನ್, ದೇವಿ ಹಾಗೂ ಮುಂಬೈನ ಚಿತ್ರಮಂದಿರಗಳಲ್ಲೂ ಅದ್ದೂರಿ ಕಟೌಟ್‌ಗಳೊಂದಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಚಿತ್ರದ ತಾಂತ್ರಿಕತೆ ಮತ್ತು ತಾರಾಗಣ:
ನಿರ್ದೇಶನ ಹಾಗೂ ನಿರ್ಮಾಣ: ಗೀತು ಮೋಹನ್‌ದಾಸ್ ನಿರ್ದೇಶನದ ಈ ಗ್ಯಾಂಗ್‌ಸ್ಟಾರ್ ಡ್ರಾಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ.
ಯಶ್ ಪಾತ್ರ: ಚಿತ್ರದಲ್ಲಿ ಯಶ್ 'ರಾಯ' ಮತ್ತು 'ಟಿಕೆಟ್' ಎಂಬ ತಂದೆ-ಮಗನ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ಉಳಿದ ತಾರಾಗಣದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಮುಖ್ಯ ಭೂಮಿಕೆಯಲ್ಲಿದ್ದಾರೆ.
ರನ್‌ಟೈಮ್: ಯಾವುದೇ ಕಟ್‌ಗಳಿಲ್ಲದೆ ಸಿಬಿಎಫ್‌ಸಿಯಿಂದ 'ಎ' ಪ್ರಮಾಣಪತ್ರ ಪಡೆದಿರುವ ಈ ಸಿನಿಮಾ 3 ಗಂಟೆ 14 ನಿಮಿಷಗಳ ಸುದೀರ್ಘ ಅವಧಿ ಹೊಂದಿದೆ.
ಬಾಕ್ಸ್ ಆಫೀಸ್ ಗಳಿಕೆಯ ಲೆಕ್ಕಾಚಾರ- ಟ್ರೇಡ್ ಎಕ್ಸ್‌ಪರ್ಟ್ಸ್ ಅಂದಾಜಿನ ಪ್ರಕಾರ, 'ಟಾಕ್ಸಿಕ್' ಮೊದಲ ದಿನವೇ ಭಾರತದಲ್ಲಿ ವಿವಿಧ ಭಾಷೆಗಳಿಂದ ₹85 ರಿಂದ ₹90 ಕೋಟಿ ನೆಟ್ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.
ಹಿಂದಿ ಆವೃತ್ತಿ: ₹35-40 ಕೋಟಿ, ದಕ್ಷಿಣ ಭಾರತೀಯ ಭಾಷೆಗಳು: ₹12-15 ಕೋಟಿ, ವಿದೇಶಿ ಗಳಿಕೆ: $2.5 ಮಿಲಿಯನ್ (ಸುಮಾರು ₹20+ ಕೋಟಿ).
ವಿಶ್ವಾದ್ಯಂತ ಮೊದಲ ದಿನದ ಒಟ್ಟು ಗಳಿಕೆ ₹120 ರಿಂದ ₹130 ಕೋಟಿ ತಲುಪುವ ಸಾಧ್ಯತೆಯಿದ್ದು, ಬಾಯಿ ಮಾತಿನ ಪ್ರಚಾರ ಗಟ್ಟಿಯಾದರೆ ಸುಲಭವಾಗಿ 100 ಕೋಟಿಯ ಗಡಿ ದಾಟಲಿದೆ. ಆದಾಗ್ಯೂ, ಯಶ್ ಅವರದ್ದೇ ಆದ 'ಕೆಜಿಎಫ್-2' ಮೊದಲ ದಿನ ಗಳಿಸಿದ್ದ ₹164 ಕೋಟಿ ದಾಖಲೆಯನ್ನು 'ಟಾಕ್ಸಿಕ್' ಮುರಿಯುವುದು ಕೊಂಚ ಕಷ್ಟಸಾಧ್ಯ ಎಂದೇ ವಿಶ್ಲೇಷಿಸಲಾಗುತ್ತಿದೆ.



