ಚಂದ್ರವಳ್ಳಿ ನ್ಯೂಸ್, ಫಿಲಡೆಲ್ಫಿಯಾ (ಅಮೆರಿಕ):
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಅಮೆರಿಕದ ಫಿಲಡೆಲ್ಫಿಯಾದಲ್ಲಿ ಆಯೋಜಿಸಲಾದ 'ಅಕ್ಕ' ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ನಡೆದ 'ಬಿಸಿನೆಸ್ ಫೋರಂ–2026' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೂಡಿಕೆಗೆ ಭಾರತವೇ ಅತ್ಯುತ್ತಮ ತಾಣ: ಭಾರತದಲ್ಲಿ ಉದ್ಯಮಶೀಲತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ವೇಗವಾಗಿ ಬೆಳೆಯುತ್ತಿದ್ದು, ಜಾಗತಿಕ ಹೂಡಿಕೆದಾರರಿಗೆ ಹಾಗೂ ಹೊಸ ಉದ್ಯೋಗ ಸೃಷ್ಟಿಗೆ ಭಾರತದಲ್ಲಿ ಅಪಾರ ಅವಕಾಶಗಳಿವೆ.
ಉತ್ಪಾದನಾ ಕ್ಷೇತ್ರದ ಕ್ರಾಂತಿ: ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವಾಲಯಗಳ ಮೂಲಕ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಪಿಎಮ್ ಇ-ಡ್ರೈವ್ ಹಾಗೂ ಪಿಎಲ್‌ಐ ನಂತಹ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ಪರಿಸರ ಸ್ನೇಹಿ ತಂತ್ರಜ್ಞಾನಕ್ಕೆ ಒತ್ತು: ಭಾರತದಲ್ಲಿ ಶುದ್ಧ ಸಂಚಾರ ಮತ್ತು ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದ್ದು, ಜಾಗತಿಕ ಹೂಡಿಕೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.




