ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯ ಮೈತ್ರಿಕೂಟದ ಓಲೈಕೆಗಾಗಿ ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಕಾವೇರಿ ಕೊಳ್ಳದ ರೈತರಿಗೆ ದ್ರೋಹ ಎಸಗುತ್ತಿದೆ ಎಂದು ಜೆಡಿಎಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.
ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿರುವ ಜೆಡಿಎಸ್, ಕಬಿನಿ ಜಲಾಶಯದ ನೀರಿನ ಮಟ್ಟ ಸತತವಾಗಿ ಕುಸಿಯುತ್ತಿರುವ ಕುರಿತು ಅಂಕಿ-ಅಂಶಗಳ ಸಮೇತ ಕಳವಳ ವ್ಯಕ್ತಪಡಿಸಿದೆ.
ಕಬಿನಿ ಜಲಾಶಯ ಬರಿದು: ಕೇವಲ ೨ ವಾರಗಳ ಅವಧಿಯಲ್ಲಿ ಕಬಿನಿ ಜಲಾಶಯದ ಶೇಕಡಾ ೩೦ ರಷ್ಟು ನೀರು ಖಾಲಿಯಾಗಿದೆ. ಆಗಸ್ಟ್ ೧೨ ರಂದು ೧೮.೬೧ ಟಿಎಂಸಿ (ಶೇ. ೯೫) ಇದ್ದ ನೀರಿನ ಮಟ್ಟ, ಪ್ರಸ್ತುತ ೧೨.೯೫ ಟಿಎಂಸಿಗೆ ಕುಸಿದಿದೆ.
ದಿನಂಪ್ರತಿ ನೀರು ಬಿಡುಗಡೆ: ತಮಿಳುನಾಡಿಗೆ ಪ್ರತಿದಿನ ರಹಸ್ಯವಾಗಿ ೧೦,೦೦೦ ದಿಂದ ೧೪,೦೦೦ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೧೯.೩೧ ಟಿಎಂಸಿ ನೀರಿತ್ತು, ಆದರೆ ಈ ಬಾರಿ ೬.೩೬ ಟಿಎಂಸಿಯಷ್ಟು ನೀರಿನ ಕೊರತೆ ಎದುರಾಗಿದೆ.
ಕುಡಿಯುವ ನೀರಿಗೆ ಆತಂಕ: ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ಕಾವೇರಿ, ಕಬಿನಿ ಹಾಗೂ ಹೇಮಾವತಿ ಕೊಳ್ಳದ ರೈತರ ಬೆಳೆಗಳು ಒಣಗುತ್ತಿವೆ. ಇದು ಹೀಗೆಯೇ ಮುಂದುವರಿದರೆ ಕಾವೇರಿ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಹಾಹಾಕಾರ ಎದುರಾಗಲಿದೆ ಎಂದು ಎಚ್ಚರಿಸಿದೆ.
ಸರ್ಕಾರದ ವೈಫಲ್ಯ: ತಮಿಳುನಾಡಿನ ಸಿಎಂ ವಿಜಯ್ ಅವರನ್ನು ಮೆಚ್ಚಿಸಲು ಕನ್ನಡಿಗರ ಜೀವನಾಡಿಯಾದ ಕಬಿನಿಯನ್ನು ಬರಿದು ಮಾಡುತ್ತಿರುವುದು ಖಂಡನೀಯ. ನಮ್ಮ ರೈತರಿಗೆ "ಬೆಳೆ ಬೆಳೆಯಬೇಡಿ" ಎಂದು ಪುಕ್ಕಟೆ ಸಲಹೆ ನೀಡುವ ಸರ್ಕಾರಕ್ಕೆ, ಕಾವೇರಿ ಪ್ರಾಧಿಕಾರದ ಮುಂದೆ ರಾಜ್ಯದ ಭೀಕರ ಬರ ಪರಿಸ್ಥಿತಿಯನ್ನು ಮಂಡಿಸುವ ಯೋಗ್ಯತೆ ಇಲ್ಲವೇ ಎಂದು ಜೆಡಿಎಸ್ ಪ್ರಶ್ನಿಸಿದೆ.
ನಾಡಿನ ಹಿತಾಸಕ್ತಿಯನ್ನು ಬಲಿ ಕೊಟ್ಟು ತಮಿಳುನಾಡಿಗೆ ನೀರು ಹರಿಸುತ್ತಿರುವ ಈ ರೈತ ವಿರೋಧಿ ಕಾಂಗ್ರೆಸ್‌ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.




