ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗ ಮೂಲಕ ನಡೆದ ಸಹಾಯಕ ಎಕ್ಸಿಕ್ಯೂಟೀವ್ ಎಂಜಿನಿಯರ್ ಗ್ರೇಡ್-1 ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಅಕ್ರಮಕ್ಕೆ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಸಂಪೂರ್ಣ ಜವಾಬ್ದಾರರಾಗಿದ್ದು, ಅವರು ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ತನಿಖಾ ವರದಿಗಳು ಹಾಗೂ ಓಎಂಆರ್ ಶೀಟ್‌ಗಳನ್ನು ಕಾರ್ಬನ್ ಬಳಸಿ ತಿದ್ದಿರುವ ಹಲವು ಸ್ಫೋಟಕ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು.
ಕುಮಾರಸ್ವಾಮಿ ಮಾಡಿದ ಪ್ರಮುಖ ಆರೋಪಗಳು:
ಆರೋಪಿ ಅಧಿಕಾರಿಗೆ ರಕ್ಷಣೆ: "ಒಂದು ಕಡೆ 'KPSC ರದ್ದು ಮಾಡುತ್ತೇನೆ' ಎಂದು ವೀರಾವೇಶದ ಮಾತುಗಳನ್ನಾಡುವ ಪ್ರಿಯಾಂಕ್ ಖರ್ಗೆ, ಇನ್ನೊಂದೆಡೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅಂದಿನ ಪರೀಕ್ಷಾ ನಿಯಂತ್ರಕ, ಐಪಿಎಸ್ ಅಧಿಕಾರಿ ಗ್ಯಾನೇಂದ್ರ ಗಂಗ್ವಾರ್ ಅವರನ್ನು ರಕ್ಷಿಸುತ್ತಿದ್ದಾರೆ" ಎಂದು ಸಚಿವರು ನೇರ ವಾಗ್ದಾಳಿ ನಡೆಸಿದರು.
ಇಡಿ ದಾಳಿ ಮತ್ತು ಅಧಿಕಾರಿಯ ನಾಪತ್ತೆ: 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲೂ ಒಂದೊಂದು ಹುದ್ದೆಗೆ 80 ಲಕ್ಷ ನಿಗದಿಪಡಿಸಲಾಗಿದೆ ಎಂಬ ಆರೋಪ ಕೇಳಿಬಂದ ತಕ್ಷಣ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು. ಇದಾದ ಬೆನ್ನಲ್ಲೇ ಈ ಅಧಿಕಾರಿ ನಾಪತ್ತೆಯಾಗಿದ್ದಾರೆ. "ಅಧಿಕಾರಿ ನಾಪತ್ತೆಗೂ ಸಚಿವರಿಗೂ ಏನು ಸಂಬಂಧ? ಪ್ರಿಯಾಂಕ್ ಖರ್ಗೆ ಅವರು ಯಾವ ಆಧಾರದ ಮೇಲೆ ಈ ಅಧಿಕಾರಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ?" ಎಂದು ಪ್ರಶ್ನಿಸಿದರು.
ಸರ್ಕಾರದ ಮೌನ: "ರಾಜ್ಯದಲ್ಲಿ ಪ್ರಿಯಾಂಕ್ ಕೃಪಾ ಪೋಷಿತ ಮಂಡಳಿ ನಡೆಯುತ್ತಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇಡೀ ಹಗರಣವನ್ನು ಮುಚ್ಚಿಹಾಕಲು ಪ್ರಿಯಾಂಕ್ ಖರ್ಗೆ ಅವರೇ ಗೃಹ ಖಾತೆ ವಹಿಸಿಕೊಂಡವರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದ್ದರೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.




