ಚಂದ್ರವಳ್ಳಿ ನ್ಯೂಸ್, ಕಂಪ್ಲಿ/ಬಳ್ಳಾರಿ:
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಶೋಷಣೆ ಹಾಗೂ ಅಭಿವೃದ್ಧಿ ಶೂನ್ಯ ನೀತಿಯನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಯು 7ನೇ ದಿನಕ್ಕೆ ಕಾಲಿರಿಸಿದ್ದು, ಕಂಪ್ಲಿಯಲ್ಲಿ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಕಾಲ್ನಡಿಗೆ ಜಾಥಾದಲ್ಲಿ ಹೆಜ್ಜೆ ಹಾಕಿದರು.
ಈ ವೇಳೆ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ. ರವಿ, ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳಿಂದಾಗಿ ಜನತೆ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಜನಾಕ್ರೋಶ: ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಕಲ್ಯಾಣ ಕರ್ನಾಟಕದ ಜನತೆ ಬೀದಿಗಿಳಿದು ಹೋರಾಡಲು ಸಜ್ಜಾಗಿದ್ದಾರೆ. ಪಾದಯಾತ್ರೆಗೆ ಜನರಿಂದ ಸಿಗುತ್ತಿರುವ ಬೆಂಬಲವೇ ಇದಕ್ಕೆ ಸಾಕ್ಷಿ.
ಸೇವೆಯೆಂಬುದು ಮರೀಚಿಕೆ: ಕಾಂಗ್ರೆಸ್ ಬಂಡುಗೆಟ್ಟವರ ಕೂಟವಾಗಿದ್ದು, ಅವರ ಆಡಳಿತದಲ್ಲಿ ಜನಸೇವೆಯೆಂಬುದು ಸಂಪೂರ್ಣವಾಗಿ ಮರೀಚಿಕೆಯಾಗಿದೆ.
ಹಿರಿಯ ನಾಯಕರ ಸಾಥ್: ಈ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಧೀರಜ್ ಮುನಿರಾಜು, ಶ್ರೀವತ್ಸ, ಮಾಜಿ ಶಾಸಕರಾದ ರಾಜೂಗೌಡ, ಸುರೇಶ್‌ಬಾಬು ಸೇರಿದಂತೆ ಹಲವು ಪ್ರಮುಖ ನಾಯಕರು, ಪದಾಧಿಕಾರಿಗಳು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಿದರು.




