ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಎಸ್ಸಿ ಅಕ್ರಮ ವಿಚಾರವಾಗಿ ತಮ್ಮ ವಿರುದ್ಧ ಮುಗಿಬಿದ್ದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಹೆಸರನ್ನು ಬಳಸಿಕೊಂಡು ಬಿಜೆಪಿಯಂತೆ ಈಗ ಜೆಡಿಎಸ್ ನಾಯಕರೂ ಸುದ್ದಿಯಲ್ಲಿರಲು ಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಸ್ತೃತವಾಗಿ ಪ್ರತಿಕ್ರಿಯಿಸಿರುವ ಖರ್ಗೆ, "ನನ್ನ ವಿರುದ್ಧ ವಾಗ್ದಾಳಿ ನಡೆಸಲು ಅಮಿತ್ ಶಾ ಅವರು ಕುಮಾರಸ್ವಾಮಿಯವರಿಗೆ ಟಾಸ್ಕ್ ಕೊಟ್ಟಿರಬಹುದು ಅಥವಾ ಕೆಪಿಎಸ್ಸಿ ಅಕ್ರಮಗಳ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಧೈರ್ಯವಿಲ್ಲದೆ ಕುಮಾರಣ್ಣರನ್ನು ಮುಂದೆ ತಂದಿರಬಹುದು" ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕರನ್ನೇ ಕೇಳಲಿ:
"ಕೆಪಿಎಸ್ಸಿ ಅಧ್ಯಕ್ಷರ ಅಕ್ರಮಗಳ ಬಗ್ಗೆ ಕುಮಾರಸ್ವಾಮಿಯವರು ತಮ್ಮ ಕೇಸರಿ ಮಿತ್ರರನ್ನೇ ಕೇಳಿದ್ದರೆ ಉತ್ತರ ಸಿಗುತ್ತಿತ್ತು. ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಿಸಿದ್ದು ಯಾರು? ಯಾರ ಸಂಬಂಧಿ? ಎಷ್ಟು ಕೋಟಿಗೆ ಹುದ್ದೆ ಸೇಲ್ ಆಗಿತ್ತು ಎಂಬ ಎಲ್ಲ ಪ್ರಶ್ನೆಗಳಿಗೂ ಬಿಜೆಪಿ ಕಚೇರಿ 'ಜಗನ್ನಾಥ ಭವನ'ದಲ್ಲೇ ಉತ್ತರವಿದೆ. ಕನಿಷ್ಠ ಪಕ್ಷ ಬಿಜೆಪಿ ರೇಬಲ್ ನಾಯಕ ಯತ್ನಾಳ್ ಅವರನ್ನಾದರೂ ಕೇಳಿದ್ದರೆ ಸಂಪೂರ್ಣ ಮಾಹಿತಿ ಸಿಗುತ್ತಿತ್ತು. ಆದರೆ ಅಡ್ಜಸ್ಟ್ಮೆಂಟ್ ರಾಜಕಾರಣ ಇದಕ್ಕೆ ಅಡ್ಡ ಬರುತ್ತಿದೆ" ಎಂದು ಲೇವಡಿ ಮಾಡಿದ್ದಾರೆ.
ಹಳೆಯ ಅಕ್ರಮಗಳ ನೆನಪು:
ಕುಮಾರಸ್ವಾಮಿಯವರ ಹಿಂದಿನ ಹೇಳಿಕೆಗಳನ್ನು ನೆನಪಿಸಿದ ಪ್ರಿಯಾಂಕ್ ಖರ್ಗೆ, "ಹಿಂದೆ ನಿಮ್ಮ ಪಕ್ಷ ತೊರೆದವರ ವಿರುದ್ಧ ಆರೋಪ ಮಾಡುವಾಗ 'ಅವರ ಸಂಬಂಧಿಗಳಿಗೆ ಕ್ಲಾಸ್ ಒನ್ ಹುದ್ದೆ ಕೊಡಿಸಿದ್ದೆ' ಎಂದು ನೀವೇ ಬಹಿರಂಗವಾಗಿ ಹೇಳಿದ್ದಿರಿ. ಅಂದರೆ ಕೆಪಿಎಸ್ಸಿಯಲ್ಲಿ ನೀವೂ ಪ್ರಭಾವ ಬೀರಿದ್ದೀರಿ ಎಂದಾಯಿತು. ನಿಮ್ಮ ಮೈತ್ರಿ ಸರ್ಕಾರದ ಅವಧಿಯಲ್ಲಿ ನೀವು ನೇಮಿಸಿದ್ದ ಅಧ್ಯಕ್ಷರ ಅವಧಿಯಲ್ಲಿ ನಡೆದ ಹಗರಣಗಳು ಹಾಗೂ 1998ರ ಕೆಎಎಸ್ ನೇಮಕಾತಿ ಅಕ್ರಮಗಳನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ" ಎಂದು ನೆನಪಿಸಿದ್ದಾರೆ.
ನನ್ನ ವಿರುದ್ಧ ಕೆಸರೆರಚುವ ಯತ್ನಗಳು ಯಶಸ್ವಿಯಾಗುವುದಿಲ್ಲ. ಪ್ರತಿಯೊಂದು ಆರೋಪಕ್ಕೂ ವಾಸ್ತವಾಂಶಗಳೊಂದಿಗೆ ಉತ್ತರಿಸುತ್ತೇನೆ. ಆದರೆ, ನಿಮ್ಮ ಅವಧಿಯಲ್ಲಿ ನಡೆದ ಕೆಪಿಎಸ್ಸಿ ಅಕ್ರಮಗಳಿಗೆ ನೀವು ಮೊದಲು ಉತ್ತರಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.




