ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಕ್ಷಿಣ ಕೊರಿಯಾದ ನಂ. ೧ ಹಾಗೂ ವಿಶ್ವದ ೩ನೇ ಅತಿದೊಡ್ಡ ಮಷೀನ್ ಟೂಲ್ ತಯಾರಿಕಾ ಸಂಸ್ಥೆಯಾದ 'ಡಿಎನ್ ಸೊಲ್ಯೂಷನ್ಸ್' ಕಂಪನಿಯ ೬೦೦ ಕೋಟಿ ರೂಪಾಯಿ ವೆಚ್ಚದ ನೂತನ ತಯಾರಿಕೆ ಹಾಗೂ ಆರ್& ಡಿ ಘಟಕವನ್ನು ದೇವನಹಳ್ಳಿಯ ಕುಂದಾಣ ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಉದ್ಘಾಟಿಸಿದರು.
ಕೊರಿಯಾ ಪ್ರವಾಸದ ವೇಳೆ ಒಪ್ಪಂದ ಮಾಡಿಕೊಂಡ ಕೇವಲ ೨ ವರ್ಷಗಳಲ್ಲೇ ಈ ಬೃಹತ್ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ಕರ್ನಾಟಕ ಸರ್ಕಾರವು ತನ್ನ ಕಾರ್ಯನಿರ್ವಹಣೆಯ ವೇಗವನ್ನು ಸಾಬೀತುಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ವೇಗದ ಅನುಷ್ಠಾನ: ೨೦೨೪ ರ ಜುಲೈ ೨ ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ೨೦೨೬ ರ ಆಗಸ್ಟ್ ೨೬ ರಂದು ಘಟಕವು ಯಶಸ್ವಿಯಾಗಿ ಉದ್ಘಾಟನೆಗೊಂಡಿದೆ.
ಪ್ರಥಮ ವಿದೇಶಿ ಘಟಕ: ದಕ್ಷಿಣ ಕೊರಿಯಾದ ಹೊರಗೆ ಕಂಪನಿ ಸ್ಥಾಪಿಸಿರುವ ಎರಡನೇ ಮತ್ತು ಭಾರತದಲ್ಲೇ ಮೊದಲ ಬೃಹತ್ ತಯಾರಿಕಾ ಘಟಕ ಇದಾಗಿದೆ.
ಉದ್ಯೋಗ ಸೃಷ್ಟಿ: ಈ ನೂತನ ಘಟಕದ ಮೂಲಕ ರಾಜ್ಯದ ಕೌಶಲ್ಯಯುತ ಯುವಜನತೆಗೆ ೪೦೦ಕ್ಕೂ ಹೆಚ್ಚು ಉನ್ನತ ಮೌಲ್ಯದ ಉದ್ಯೋಗಾವಕಾಶಗಳು ದೊರೆಯಲಿವೆ.
ಸುಧಾರಿತ ತಂತ್ರಜ್ಞಾನ: 'ಮೇಡ್ ಇನ್ ಕರ್ನಾಟಕ' ಹೆಗ್ಗುರುತಿನಡಿಯಲ್ಲಿ ಸುಧಾರಿತ ಉತ್ಪಾದನೆ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಈ ಘಟಕವು ಹೊಸ ವೇಗ ನೀಡಲಿದೆ.
ಭಾರತದಲ್ಲಿ ಕೈಗಾರಿಕಾ ಆವಿಷ್ಕಾರ ಮತ್ತು ತಯಾರಿಕಾ ರಂಗದ ಭವಿಷ್ಯವನ್ನು ರೂಪಿಸುವಲ್ಲಿ ಕರ್ನಾಟಕವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಬಣ್ಣಿಸಿದ್ದಾರೆ.




